ಬೆಂಗಳೂರು, ಮೇ.25: ಮಹಾರಾಷ್ಟ್ರದ ಪುಣೆಯಲ್ಲಿ ಐಷಾರಾಮಿ ಕಾರು ಅಪಘಾತ (Pune Car Accident Case) ಪ್ರಕರಣ ನಡೆದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರು (Bengaluru Traffic Police) ಫುಲ್ ಅಲರ್ಟ್ ಆಗಿದ್ದಾರೆ. ಬೆಂಗಳೂರಿನಲ್ಲಿ ತಡರಾತ್ರಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು ಮದ್ಯಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಹಲವು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು (Drink And Drive) ಪತ್ತೆಯಾಗಿವೆ. ಮದ್ಯಸೇವಿಸಿ ವಾಹನ ಚಲಾಯಿಸುತ್ತಿದ್ದ ಹಲವರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಖುದ್ದು ಬೆಂಗಳೂರು ದಕ್ಷಿಣ ವಿಭಾಗದ ಸಂಚಾರಿ ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರು ಸಂಚಾರಿ ಸಬ್ ಇನ್ಸ್ಪೆಕ್ಟರ್, ಮೇಲ್ದರ್ಜೆಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಬಾಡಿ ಕ್ಯಾಮ್ ಸಹಿತವಾಗಿ ತಡರಾತ್ರಿ 2 ಗಂಟೆವರೆಗೂ ವಾಹನ ಸವಾರರ ಡಿಡಿ ಚೆಕ್ ಮಾಡಿದ್ದಾರೆ. ಈ ವೇಳೆ ಹೆಚ್ಚಿನ ಸಂಖ್ಯೆಯ್ಲಲಿ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ಪತ್ತೆಯಾಗಿದ್ದು ಇನ್ಮುಂದೆ ವಾರ ಅಥವಾ 15 ದಿನಕ್ಕೊಮ್ಮೆ ಕಾರ್ಯಾಚರಣೆ ನಡೆಸಲು ನಿರ್ಧಾರ ಮಾಡಲಾಗಿದೆ.
ಇನ್ನು ದಕ್ಷಿಣ ವಿಭಾಗದಲ್ಲಿ 41 ಕಡೆ ಚೆಕ್ಪೋಸ್ಟ್ ಹಾಕಿ ಸ್ಪೆಷಲ್ ಡ್ರೈವ್ ಮಾಡಲಾಯಿತು. ಸಂಚಾರಿ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪ್ರತಿಯೊಂದು ವಾಹನ ತಪಾಸಣೆ ಮಾಡಿ ಮದ್ಯಸೇವಿಸಿ ವಾಹನ ಚಲಾಯಿಸುವವರಿಗೆ ಸ್ಥಳದಲ್ಲೇ ದಂಡ ಹಾಕಲಾಯಿತು. ಒಂದೇ ರಾತ್ರಿಯಲ್ಲಿ 160ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿವೆ. ಸ್ಪೆಷಲ್ ಡ್ರೈವ್ ಮೂಲಕ ಮದ್ಯಸೇವಿಸಿ ವಾಹನ ಚಲಾಯಿಸುವವರಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ಇದನ್ನೂ ಓದಿ: ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ; ಅಪ್ರಾಪ್ತ ಚಾಲಕನ ಜಾಮೀನು ರದ್ದು
ಪುಣೆಯ ಪೋರ್ಶೆ ಕಾರು ಅಪಘಾತ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಪ್ರಾಪ್ತ ಮಗನನ್ನು ಬಚಾವ್ ಮಾಡಲು ಪ್ಲಾನ್ ನಡೆದಿತ್ತು ಎನ್ನುವುದನ್ನು ಪುಣೆ ಪೊಲೀಸರು ರಿವೀಲ್ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರವಾಲ್, ತಮ್ಮ ಅಪ್ರಾಪ್ತ ಮಗನನ್ನ ಬಚಾವ್ ಮಾಡಲು, ಅಪಘಾತದ ಬಳಿಕ ಚಾಲಕನನ್ನು ಬದಲಿಸುವ ಪ್ರಯತ್ನ ನಡೆಸಿದ್ರು. ಹೀಗಂತಾ ಖುದ್ದು ಪುಣೆ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ. ನಿನ್ನೆ ಸುದ್ದಿಗೋಷ್ಠಿ ನಡೆಸಿದ ಅಮಿತೇಶ್, ಪ್ರಕರಣದಲ್ಲಿ ಯಾರನ್ನೂ ರಕ್ಷಿಸೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಪೋರ್ಶೆ ಕಾರನ್ನು ಬಾಲಕನೇ ಓಡಿಸ್ತಿದ್ದ ಅನ್ನೋದಕ್ಕೆ ವಿಡಿಯೋ ಸಾಕ್ಷಿ ಇದೆ. ಪಬ್‌ನಲ್ಲಿ ಮದ್ಯ ಸೇವಿಸುವ ಸಿಸಿಟಿವಿ ದೃಶ್ಯಗಳು ದೊರಕಿವೆ ಎಂದು ತಿಳಿಸಿದ್ದಾರೆ.
ಕುಡಿದು ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನಿಗೆ, ಆತನ ಅಜ್ಜನೇ ಕಾರ್ ಕೀ ಹಾಗೂ ಕ್ರೆಡಿಟ್ಕಾರ್ಡ್ ಕೊಟ್ಟಿದ್ರು ಎನ್ನುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಅಗರವಾಲ್ ಕುಟುಂಬದ ಬಗ್ಗೆ ಆಘಾತಕಾರಿ ಮಾಹಿತಿಗಳು ಹೊರಬರುತ್ತಿವೆ. ಆರೋಪಿಯ ಅಜ್ಜ, ಕೆಲವು ವರ್ಷಗಳ ಹಿಂದೆ ತನ್ನ ಸಹೋದರ ಜೊತೆಗಿನ ಆಸ್ತಿ ವಿವಾದ ಬಗೆಹರಿಸಲು ಭೂಗತ ಪಾತಕಿ ಚೋಟಾ ರಾಜನ್‌ನ ಸಹಾಯ ಪಡೆದಿದ್ದ ಎನ್ನುವುದು ಬೆಳಕಿಗೆ ಬಂದಿದೆ.
ಎರಡು ಪಬ್‌ನಲ್ಲಿ 62 ಸಾವಿರೂ ಖರ್ಚು ಮಾಡಿ ಕಂಠ ಪೂರ್ತಿ ಕುಡಿದಿದ್ದ ಅಪ್ರಾಪ್ತ ಕಾರ್ ಡ್ರೈವರ್ನಿಂದ ಕೀ ಕಿತ್ತುಕೊಂಡು ತಾನೇ ಕಾರು ಚಲಾಯಿಸಿದ್ದ. ಭಾನುವಾರ ನಸುಕಿನ ಜಾವ ಅಮಲಿನಲ್ಲಿ 200 ಕಿ.ಮಿ ವೇಗದಲ್ಲಿ ಕಾರು ಓಡಿಸಿ ಇಬ್ಬರನ್ನು ಬಲಿ ಪಡೆದಿದ್ದ. ಸದ್ಯ ಪ್ರಕರಣ ಸಂಬಂಧ ಬಾಲಾರೋಪಿಯ ಜಾಮೀನು ರದ್ದುಗೊಳಿಸಿ, ಆತನನ್ನು ಬಾಲ ವೀಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಆತನನ್ನು ವಯಸ್ಕ ಎಂದು ಪರಿಗಣಿಸಿ ತನಿಖೆಗೆ ಒಳಪಡಿಸಲು ಪೊಲೀಸರು ಅನುಮತಿ ಕೋರಿದ್ದಾರೆ. ಸದ್ಯ ಅಪ್ರಾಪ್ತ ತಂದೆ ವಿಶಾಲ್ ಅಗರವಾಲ್ ಜೈಲಿನಲ್ಲಿದ್ದಾನೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:03 am, Sat, 25 May 24