ಬೆಂಗಳೂರು: ಕೊಳೆತ ಶವ ಕೇಸ್ ಬೆನ್ನತ್ತಿದ್ದ ಪೊಲೀಸರು ಭಯಾನಕ ಸತ್ಯವೊಂದನ್ನು ಪತ್ತೆ ಮಾಡಿದ್ದಾರೆ. ವ್ಯಕ್ತಿಯನ್ನ ಕೊಂದು ತಾನೇ ಮೃತನ ತಾಯಿಯ ಜೊತೆ ಹುಡುಕಾಟ ನಡೆಸಿದ್ದ ಹಂತಕನ ಕೊಲೆ ರಹಸ್ಯವನ್ನು ಬೇಧಿಸಿದ್ದಾರೆ. ಕಳ್ಳತನ ಮಾಡಿದ ಎಂದು ಆರೋಪಿಸಿ ರೂಂನಲ್ಲಿ ಒಂದು ವಾರ ಕೂಡಿಟ್ಟು ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಸೈಫುಲ್ಲಾ(35) ಕೊಲೆಯಾದ ವ್ಯಕ್ತಿ.
ಗುಂಪೊಂದು ವ್ಯಕ್ತಿಯನ್ನು ಒಂದು ವಾರ ರೂಂನಲ್ಲಿ ಕೂಡಿಟ್ಟು ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳ ಕಿರುಕುಳ ತಾಳಲಾರದೆ ರೂಂನಲ್ಲಿಯೇ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದಾದ ಬಳಿಕ ಹಂತಕರು ಮೃತದೇಹವನ್ನು ಎಸೆದು ತಮಗೇನು ಗೊತ್ತೇ ಇಲ್ಲ ಎನ್ನುವಂತೆ ಸುಮ್ಮನಾಗಿದ್ದಾರೆ. ಬಡಪಾಯಿ ವ್ಯಕ್ತಿಯನ್ನು ಕೊಂದು ಕೆಜಿ ಹಳ್ಳಿಯಲ್ಲಿ ಮೃತದೇಹ ಎಸೆದಿದ್ದಾರೆ. ಹಲ್ಲೆಯ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿದು ವಿಕೃತಿ ಮೆರೆಯಲಾಗಿದೆ.
ಮಾರ್ಚ್ 4ಕ್ಕೆ ರಾಮಮೂರ್ತಿನಗರ ಸಾದಹಳ್ಳಿ ಬ್ರಿಡ್ಜ್ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹದ ಫೋಟೋವನ್ನು ರಾಜ್ಯದ ಎಲ್ಲಾ ಠಾಣೆಗೆ ಕಳುಹಿಸಿ ಪೊಲೀಸರು ತನಿಖೆಗೆ ಇಳಿದಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲೂ ಯಾವುದೇ ಗಾಯದ ಕುರುಹು ಸಿಗಲಿಲ್ಲ. ಇದನ್ನ ಅಸಹಜ ಸಾವು ಎಂದೇ ಪರಿಗಣಿಸಲಾಗಿತ್ತು. ರಾಮಮೂರ್ತಿ ನಗರ ಪೊಲೀಸರು ಐಪಿಸಿ 174c ಅಡಿಯಲ್ಲಿ ಸಂಶಯಾಸ್ಪದ ಸಾವು ಎಂದು ಕೇಸ್ ದಾಖಲಿಸಿಕೊಳ್ಳಲಾಯಿತು. ಎಷ್ಟೇ ಪ್ರಯತ್ನ ಪಟ್ಟರು ಮೃತನ ಸುಳಿವು ಮಾತ್ರ ಸಿಗಲೇ ಇಲ್ಲ. ನಂತರ ಮಾರ್ಚ್ 6 ಕ್ಕೆ ಮಹಿಳೆಯೊಬ್ಬಳು ತನ್ನ ಮಗ ಕಾಣೆಯಾಗಿದ್ದಾನೆಂದು ಕೆಜಿ ಹಳ್ಳಿ ಠಾಣೆಗೆ ದೂರು ನೀಡಿದ್ದರು. ಕೆಜಿ ಹಳ್ಳಿಯ ಮುಸ್ಲಿಂ ಕಾಲೋನಿ ನಿವಾಸಿ ಮಹಿಳೆಗೆ ರಾಮಮೂರ್ತಿ ನಗರದಲ್ಲಿ ಸಿಕ್ಕ ಮೃತದೇಹ ತೋರಿಸಲಾಗುತ್ತೆ. ಇದು ತನ್ನದೇ ಮಗ ಎಂದು ಮಹಿಳೆ ಗುರುತಿಸಿದ್ದು ಮೃತ ವ್ಯಕ್ತಿ ಯಾರೆಂದು ಪೊಲೀಸರಿಗೆ ಸುಳಿವು ಸಿಕ್ಕಿತ್ತು.
ಇದನ್ನೂ ಓದಿ: ತ್ರಿಶೂಲ ಹಿಡಿದು ರಸ್ತೆಗಿಳಿದಿಲ್ಲವೆಂದರೆ ಮುಂದಿನ 5-7 ವರ್ಷಗಳಲ್ಲಿ ಭಾರತ ಮುಸ್ಲಿಂ ರಾಷ್ಟ್ರವಾಗುತ್ತೆ: ಬಿಜೆಪಿ ಮುಖಂಡ
ಈ ವೇಳೆ ಒಂದು ಸುಳಿವನ್ನು ಮೃತನ ತಾಯಿ ಪೊಲೀಸರಿಗೆ ನೀಡಿದ್ದರು. ಕಳ್ಳತನ ಮಾಡಿದ್ದ ಎಂದು ಕೆಲವರು ಕೂಡಿ ಹಾಕಿದ್ರು. ಕೆಲ ತಿಂಗಳ ಹಿಂದೆ ನಡೆದಿದ್ದ ಘಟನೆಯನ್ನ ಪೊಲೀಸರ ಮುಂದೆ ಮಹಿಳೆ ತಿಳಿಸಿದ್ದಾರೆ. ನಂತರ ಆತನನ್ನ ಬಿಟ್ಟು ಕಳುಹಿಸಿದರು ಎಂದು ಪೊಲೀಸರಿಗೆ ಮಹಿಳೆ ಮಾಹಿತಿ ನೀಡಿದರು. ಇದೇ ಅನುಮಾನದ ಮೇಲೆ ಪ್ರಶಾಂತ್ ಎಂಬಾತನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಕೊಲೆಯ ರಹಸ್ಯ ಬಯಲಾಗಿದೆ. ಮೊಬೈಲ್ ಪರಿಶೀಲನೆ ವೇಳೆ ಭಯಾನಕ ವಿಡಿಯೋ ಲಭ್ಯವಾಗಿದೆ. ಮೃತನನ್ನು ಕಟ್ಟಿ ಹಾಕಿ ಹಲ್ಲೆ ಮಾಡೊ ವಿಡಿಯೋ ಸಿಕ್ಕಿದೆ. ಪ್ರಶಾಂತ್ ಮಾಹಿತಿ ಮೇರೆಗೆ ಜಬಿ, ಬಬನ್ @ ಶಾಬಾಜ್ ಅರೆಸ್ಟ್ ಮಾಡಲಾಗಿದೆ. ಆರೋಪಿ ಜಬಿ ಮೃತನ ತಾಯಿ ಜೊತೆಗೆ ಸೇರಿ ತಾನೂ ವ್ಯಕ್ತಿಯನ್ನು ಹುಡುಕುವ ನಾಟಕ ಮಾಡಿದ್ದ.
ಪ್ರಶಾಂತ್ ಕೆಜಿ ಹಳ್ಳಿಯಲ್ಲಿ ಸ್ಕ್ರಾಪ್ ಅಂಗಡಿ ಇಟ್ಟುಕೊಂಡಿದ್ದ. ಅವನ ಅಂಗಡಿಯಿಂದ ವಸ್ತುಗಳು ಆಗಾಗ ಕಳ್ಳತನವಾಗುತ್ತಿತ್ತು. ಹೀಗಾಗಿ ಮಾಲೀಕ ಪ್ರಶಾಂತ್ ಕಳ್ಳನನ್ನ ಹಿಡಿಯಲು ರಾತ್ರಿ ಅಡಗಿ ಕುಳಿತಿದ್ದ. ಈ ವೇಳೆ ಪ್ರಶಾಂತ್ ಅಂಗಡಿಗೆ ಮೃತ ಸೈಫುಲ್ಲಾ ಬಂದಿದ್ದಾನೆ. ಆಗ ಪ್ರಶಾಂತ್ ಅಂಡ್ ಟೀಂ ಸೈಫುಲ್ಲಾನನ್ನು ಹಿಡಿದುಕೊಂಡಿದ್ದಾರೆ. ಕಟ್ಟಡ ಮಾಲೀಕ ಜಬಿಗೆ ಪ್ರಶಾಂತ್ ಈ ವಿಚಾರ ಮುಟ್ಟಿಸಿದ್ದಾನೆ. ತನ್ನ ಪಟಾಲಂನ ಜೊತೆಗೆ ಆಗಮಿಸಿದ್ದ ಜಬಿ, ಸೈಫುಲ್ಲಾನನ್ನ ರೂಂ ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾನೆ. ಒಂದು ವಾರ ಒಂದೇ ಕೊಠಡಿಯಲ್ಲಿ ಇಟ್ಟು ಹಲ್ಲೆ ಮಾಡಲಾಗಿದೆ. ರಕ್ತಸಿಕ್ತವಾಗಿ ಬಿದ್ದು ಬೇಡಿಕೊಂಡ್ರು ಬಿಟ್ಟಿಲ್ಲ. ಊಟ ತಿಂಡಿ ಏನನ್ನು ನೀಡದೇ ಪ್ರತಿದಿನ ಹಲ್ಲೆ ಮಾಡಿದ್ದಾರೆ. ಒಂದು ವಾರದ ಬಳಿಕ ರೂಮ್ ನಲ್ಲಿಯೇ ಸೈಫುಲ್ಲಾ ಮೃತಪಟ್ಟಿದ್ದಾನೆ.
ಮೃತದೇಹ ಸಾದಹಳ್ಳಿ ಚರಂಡಿಗೆ ಎಸೆದಿದ್ದು ಮೂರ್ನಾಲ್ಕು ದಿನದ ಬಳಿಕ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಕೆಜಿ ಹಳ್ಳಿ ಮತ್ತು ರಾಮಮೂರ್ತಿ ನಗರ ಪೊಲೀಸರ ಕಾರ್ಯಾಚರಣೆಯಿಂದಾಗಿ ಪ್ರಶಾಂತ್, ಜಬಿ, ಬಬನ್ @ ಶಾಬಾಜ್ ಎಂಬುವವರನ್ನು ಬಂಧಿಸಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ