ಗಂಡನನ್ನು ಕಳೆದುಕೊಂಡು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಒಂಟಿ ಮಹಿಳೆಯ ಹತ್ಯೆ

ಗಂಡನನ್ನು ಕಳೆದುಕೊಂಡು ಬೆಂಗಳೂರಿನಲ್ಲಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಬಳ್ಳಾರಿ ಮೂಲದ ಮಹಿಳೆಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆ ನಡೆದು ನಾಲ್ಕು ದಿನ ಬಳಿಕ ಬೆಳಕಿಗೆ ಬಂದಿದೆ.

ಗಂಡನನ್ನು ಕಳೆದುಕೊಂಡು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಒಂಟಿ ಮಹಿಳೆಯ ಹತ್ಯೆ
ಸಾಂದರ್ಭಿಕ ಚಿತ್ರ
Follow us
ರಮೇಶ್ ಬಿ. ಜವಳಗೇರಾ
|

Updated on:Apr 10, 2023 | 9:11 AM

ಬೆಂಗಳೂರು: ಮನೆಯಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದ ಮಹಿಳೆಯೋರ್ವಳನ್ನು (Woman) ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ(Murder) ಮಾಡಿ ಪರಾರಿಯಾಗಿರುವ .ಘಟನೆ ಬೆಂಗಳೂರಿನ (Bengaluru) ಕೆಆರ್ ಪುರಂನ ಟಿಸಿ ಪಾಳ್ಯದಲ್ಲಿ ನಡೆದಿದೆ. ಟಿ.ಸಿ.ಪಾಳ್ಯದಲ್ಲಿ ನೆಲೆಸಿದ್ದ ಬಳ್ಳಾರಿ(Bellary) ಮೂಲದ ಅಂಬಿಕಾ (40) ಕೊಲೆಯಾದ ಮಹಿಳೆ. ಮೃತಳ ಮನೆಯಿಂದ ಬರುತ್ತಿದ್ದ ದುರ್ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿ ಪರಿಶೀಲಿಸಿದಾಗ ಮಹಿಳೆಯ ಕೊಳತೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆಯೇ ಈ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗರ್ಭಿಣಿ ಮೇಲೆ ಗುಂಡು ಹಾರಿಸಿ ಗರ್ಭಪಾತವಾಗಿದ್ದ ಪ್ರಕರಣ, ಚಿಕಿತ್ಸೆ ಫಲಿಸದೆ ಮಹಿಳೆ ಸಾವು

ಬಳಿಕ ಅಂಬಿಕಾಳ ಮೊಬೈಲ್‌ನಲ್ಲಿ ನಂಬರ್‌ ಪಡೆದು ಆಕೆಯ ಕುಟುಂಬದವರಿಗೆ ಘಟನೆ ಬಗ್ಗೆ ಮಾಹಿತಿ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಅಂಬಿಕಾ ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕಿನ ಎಚ್‌.ಹೊಸಹಳ್ಳಿ ಗ್ರಾಮದವಳಾಗಿದ್ದು, ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಟಿ.ಸಿ.ಪಾಳ್ಯದ ಗಾರ್ಡನ್‌ ಸಿಟಿ ಕಾಲೇಜು ಸಮೀಪ ಅಂಬಿಕಾ ನೆಲೆಸಿದ್ದಳು. ಹಲವು ತಿಂಗಳ ಹಿಂದೆಯೇ ಅನಾರೋಗ್ಯ ಹಿನ್ನೆಲೆಯಲ್ಲಿ ಆಕೆಯ ಪತಿ ಸಹ ಮೃತಪಟ್ಟಿದ್ದ. ಇಬ್ಬರು ಮಕ್ಕಳ ಪೈಕಿ ಹಿರಿಯ ಮಗ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಓದುತ್ತಿದ್ದಾನೆ. ಈ ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏ.3ರಂದು ತನ್ನ ನೆರೆಮನೆಯ ಮಹಿಳೆಯನ್ನು ಭೇಟಿಯಾಗಿ ಅಂಬಿಕಾ ಮಾತನಾಡಿದ್ದಳು. ನಂತರ ಆಕೆ ಹೊರಗೆ ಎಲ್ಲೂ ಕಾಣಿಸಿಕೊಂಡಿಲ್ಲ. ಹೀಗಾಗಿ ಏ.4 ಅಥವಾ ಏ.5ರಂದು ಆಕೆಯ ಮನೆಗೆ ಬಂದಿರುವ ಪರಿಚಿತರೇ ಹತ್ಯೆ ಮಾಡಿದ್ದಾರೆ. ಮೃತಳ ದೇಹದಲ್ಲಿ ನಾಲ್ಕೈದು ಬಾರಿ ಚೂರಿ ಇರಿತದ ಗುರುತುಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:09 am, Mon, 10 April 23