
ಬೆಂಗಳೂರು, ನವೆಂಬರ್ 26: ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಬೆಂಗಳೂರು ಪೊಲೀಸರು ಡ್ರಗ್ಸ್ ಮಾರಾಟ ಜಾಲವನ್ನು ಭೇದಿಸಿದ್ದು, 5.87 ಕೋಟಿ ರೂಪಾಯಿ ಮೌಲ್ಯದ 5.87 ಕೆಜಿ MDMA ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೆಂಚೇನಹಳ್ಳಿ ಬಳಿ ಕೆಲವರು ಮಾದಕ ವಸ್ತುಗಳನ್ನು ಮಾರಾಟ ಮಾಡಲು ಕಾಯುತ್ತಿದ್ದಾರೆ ಎಂಬ ಮಾಹಿತಿ ಯಲಹಂಕ ನ್ಯೂಟೌನ್ ಪೊಲೀಸರಿಗೆ ಲಭಿಸಿದ್ದು, ಅದರ ಆಧಾರದಲ್ಲಿ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಗಂಗೊಂಡನಹಳ್ಳಿಯ 28 ವರ್ಷದ ಕಾರು ಮೆಕ್ಯಾನಿಕ್ ಇಮ್ರಾನ್ ಪಾಷಾ ಹಾಗೂ ಹೊಸಕೋಟೆಯ 27 ವರ್ಷದ ವಿಚ್ಛೇದಿತ ಮಹಿಳೆ ಆಯೇಷಾ ಸಿದ್ದಿಕಿ ಬಂಧಿತರು. ಆರೋಪಿಗಳಿಂದ 5.72 ಕೆಜಿ MDMA ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ, ನವದೆಹಲಿಯಿಂದ ಮಾದಕ ವಸ್ತುಗಳ ಪಾರ್ಸೆಲ್ ತಂದುಕೊಟ್ಟರೆ 1 ಲಕ್ಷ ರೂಪಾಯಿ ನೀಡುವುದಾಗಿ ಇವರಿಗೆ ತಿಳಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಅದರಂತೆ ಇಬ್ಬರೂ ವಿಮಾನದ ಮೂಲಕ ನವದೆಹಲಿಗೆ ತೆರಳಿ, ಅಲ್ಲಿನ ಪೂರೈಕೆದಾರರನ್ನು ಭೇಟಿಯಾಗಿ ಮಾದಕ ವಸ್ತುಗಳನ್ನು ಪಡೆದುಕೊಂಡಿದ್ದರು. ಬಳಿಕ ಹರಿಯಾಣ ನೋಂದಣಿ ಹೊಂದಿದ್ದ ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ತಂದಿದ್ದರು ಎಂದು ತಿಳಿದುಬಂದಿದೆ. ಈ ಇಬ್ಬರಿಂದ ಡ್ರಗ್ಸ್ ಖರೀದಿಸಲು ಸೂಚನೆ ನೀಡಿದವರು ಯಾರು? ಹಾಗೂ ಮಾದಕ ವಸ್ತುಗಳನ್ನು ಯಾರಿಗೆ ತಲುಪಿಸಬೇಕಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ನಕಲಿ ಔಷಧಿ ಜಾಲದ ಕಿಂಗ್‌ಪಿನ್ ಪ್ರಶಾಂತ್ ಬಂಧಿಸಿದ ದೆಹಲಿ ಪೊಲೀಸರು; ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು!
ಇನ್ನೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಭಾರತಿನಗರ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿ, 150.43 ಗ್ರಾಂ MDMA ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಹಣ ಸಂಪಾದಿಸುವ ಉದ್ದೇಶದಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿಸಿ, ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದೆ ಎಂದು ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ. ಎರಡೂ ಪ್ರಕರಣಗಳಲ್ಲಿ ಒಟ್ಟು ಸುಮಾರು 5 ಕೆಜಿ 870 ಗ್ರಾಂ ನಿಷೇಧಿತ MDMA ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.