ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮಕ್ಕೆ ಖಾಕಿ ಹೊಸ ಪ್ಲಾನ್, ಸಿದ್ಧವಾಗಿದೆ ಸೋಷಿಯಲ್ ಮೀಡಿಯಾ ವಿಂಗ್

| Updated By: ಆಯೇಷಾ ಬಾನು

Updated on: Aug 26, 2023 | 12:25 PM

ಬೆಂಗಳೂರಿನಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಹಾವಳಿ ಹೆಚ್ಚಾಗ್ತಿದೆ. ಸೋಷಿಯಲ್ ಮೀಡಿಯಾದಿಂದಾನೇ ಶಾಂತಿ ಕದಡುವ ಯತ್ನ ನಡೆಯುತ್ತಿದೆ. ಹೀಗಾಗಿ ಸುಳ್ಳು ಸುದ್ದಿಗಳ ಹಾವಳಿಯನ್ನು ಕಡಿಮೆ ಮಾಡಲು ಖಾಕಿ ಪಡೆಯಿಂದ ಹೊಸ ವಿಂಗ್ ಕಾರ್ಯ ನಿರ್ವಹಿಸಲು ಸಿದ್ಧವಾಗುತ್ತಿದೆ. ಸಿಲಿಕಾನ್ ಸಿಟಿಯ ಪ್ರತಿ ಠಾಣೆಯಲ್ಲೂ ಸೋಷಿಯಲ್ ಮೀಡಿಯಾ ವಿಂಗ್ ರಚನೆಗೆ ಸಿದ್ಧತೆ ನಡೆದಿದೆ.

ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮಕ್ಕೆ ಖಾಕಿ ಹೊಸ ಪ್ಲಾನ್, ಸಿದ್ಧವಾಗಿದೆ ಸೋಷಿಯಲ್ ಮೀಡಿಯಾ ವಿಂಗ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆ.26: ಸುಳ್ಳು ಸುದ್ದಿ(Fake News) ಹರಡಿಸುವವರಿಗೆ ಇನ್ಮುಂದೆ ಭಾರೀ ಕಂಟಕ ಎದುರಾಗಲಿದೆ. ಸುಖಾ ಸುಮ್ಮನೆ ಬೇಕಾ ಬಿಟ್ಟಿಯಾಗಿ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸರು(Bengaluru Police) ಮುಂದಾಗಿದ್ದಾರೆ. ಸೋಷಿಯಲ್ ಮೀಡಿಯಾ ಅಕೌಂಟ್ ಇದೆ ಎಂದು ಸುಳ್ಳು ಸುದ್ದಿಗಳನ್ನು ಷೇರ್ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ಸದ್ದಿಲ್ಲದೇ ಖಾಕಿ ಪಡೆ ಆ್ಯಕ್ಟೀವ್ ಆಗಿದೆ.

ಬೆಂಗಳೂರಿನಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಹಾವಳಿ ಹೆಚ್ಚಾಗ್ತಿದೆ. ಸೋಷಿಯಲ್ ಮೀಡಿಯಾದಿಂದಾನೇ ಶಾಂತಿ ಕದಡುವ ಯತ್ನ ನಡೆಯುತ್ತಿದೆ. ಸುಳ್ಳು ಸುದ್ದಿಯಿಂದನೇ ಗಲಭೆಗಳು ಹೆಚ್ಚಾಗ್ತಿವೆ. ಡಿಜೆ ಹಳ್ಳಿ, ಕೆಜೆಹಳ್ಳಿ ಪ್ರಕರಣಕ್ಕೂ ಸಾಮಾಜಿಕ ಜಾಲತಾಣದ ನಂಟಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಎದುರಾಗುತ್ತಿರುವ ಸುಳ್ಳು ಸುದ್ದಿಗಳ ಹಾವಳಿಯನ್ನು ಕಡಿಮೆ ಮಾಡಲು ಖಾಕಿ ಪಡೆಯಿಂದ ಹೊಸ ವಿಂಗ್ ಕಾರ್ಯ ನಿರ್ವಹಿಸಲು ಸಿದ್ಧವಾಗುತ್ತಿದೆ.

ಸಿಲಿಕಾನ್ ಸಿಟಿಯ ಪ್ರತಿ ಠಾಣೆಯಲ್ಲೂ ಸೋಷಿಯಲ್ ಮೀಡಿಯಾ ವಿಂಗ್ ರಚನೆಗೆ ಸಿದ್ಧತೆ ನಡೆದಿದೆ. ಈ ವಿಂಗ್​ನಲ್ಲಿ ಪ್ರತಿ ಠಾಣೆಗೂ ಇಬ್ಬರು ಸಿಬ್ಬಂದಿಯಂತೆ ನಗರದಾದ್ಯಂತ ಎಲ್ಲಾ ಠಾಣೆಗೂ ಪೊಲೀಸರ ನೇಮಕ ಮಾಡಲಾಗುತ್ತಿದೆ. ಆಯಾ ಏರಿಯಾದಲ್ಲಿ ನಡೆಯುವ ಸೋಶಿಯಲ್ ಮೀಡಿಯಾಗಳ ಪ್ರತಿ ಆಕ್ಟಿವಿಟಿ ಬಗ್ಗೆ ವಿಂಗ್ ಪೊಲೀಸರು ಮಾಹಿತಿ ಕಲೆ ಹಾಕಿ ನಿಗಾ ಇಡಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುವುದು, ಷೇರ್ ಮಾಡುವುದು ಅಥವಾ ಅಶಾಂತಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ.

ಇದನ್ನೂ ಓದಿ: ಸುಳ್ಳು ಸುದ್ದಿ ಹರಡುತ್ತಿದ್ದ ನಕಲಿ ಸೆನ್ಸಾರ್ ಸದಸ್ಯನಿಗೆ ನೊಟೀಸ್ ಕಳಿಸಿದ ನಟಿ ಪೂಜಾ ಹೆಗ್ಡೆ

ಸುಳ್ಳು ಸುದ್ದಿ ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕ್ರಮ

ಇನ್ನು ಈ ಬಗ್ಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಇಬ್ಬರು ಎಕ್ಸ್ ಪರ್ಟ್​ಗಳ ನೇಮಕ ಮಾಡಲಾಗಿದೆ. ತಾಂತ್ರಿಕ ಪರಿಣಿತಿ ಇರುವಂತವರನ್ನ ನೇಮಕ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ. ಇಬ್ಬರು ಸಿಬ್ಬಂದಿಯನ್ನ ಗುರುತಿಸಿ ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಡಲು ಸೂಚಿಸಲಾಗಿದೆ. ಸಾಮಾಜಿಕ ಜಾಲತಾಣ ಮಾನಿಟರ್ ಮಾಡೋದಕ್ಕೆ ಇಬ್ಬರು ಸಿಬ್ಬಂದಿ ನೇಮಕ ಮಾಡಲಾಗಿದೆ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಎಲ್ಲಾ ಠಾಣೆಯ ಸಿಬ್ಬಂದಿಗೆ ಸೂಚಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುವವರು, ಕಾನೂನು ಸುವ್ಯವಸ್ಥೆ ಹಾಳು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದು ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದರು.

ಸಾರ್ವಜನಿಕರಿಗೆ ಬೇರೆ ಬೇರೆ ರೀತಿಯಲ್ಲಿ ಉತ್ತೇಜನ ಆಗುವಂತಹ ಪೋಸ್ಟ್ ಮಾಡಲಾಗ್ತಿದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗ್ತಿರೋದು ಗೊತ್ತಾಗಿದೆ. ಹಾಗಾಗಿ ಡಿಸಿಪಿ ಆಫೀಸ್​ನಲ್ಲೂ ಮಾನಿಟರ್ ಮಾಡಲು ತಂಡ ರಚನೆ ಮಾಡಿದ್ದೇವೆ. ಪೊಲೀಸ್ ಕಮೀಷನರ್ ಕಚೇರಿಯಲ್ಲೂ ಪರಿಣಿತರ ದೊಡ್ಡ ತಂಡವನ್ನ ರಚನೆ ಮಾಡಲಾಗಿದೆ. ನಿಜಾಂಶವನ್ನ ಜನರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡ್ತೀವಿ. ವಿಶೇಷವಾದ ತರಬೇತಿ ಈಗಾಗಲೇ ಸಿಬ್ಬಂದಿಗೆ ಕೊಡಲಾಗಿದೆ. ಆಧುನಿಕ ತಂತ್ರಜ್ಞಾನವನ್ನ ಬಳಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ. ಐಪಿಸಿ ಸೆಕ್ಷನ್​ಗಳನ್ನ ಹಾಕಿ ಕ್ರಮವನ್ನ ಕೈಗೊಳ್ತೀವಿ. ಫೇಕ್ ಅಕೌಂಟ್ ಗಳನ್ನೂ ಈಗಾಗಲೇ ಪತ್ತೆ ಹಚ್ಚಿದ್ದೇವೆ. ನಮ್ಮ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಹೆಸರಲ್ಲಿ ಒಂದು ಫೇಕ್ ಟ್ವಿಟರ್ ಅಕೌಂಟ್ ಓಪನ್ ಮಾಡಲಾಗಿತ್ತು. ಅದರಲ್ಲಿ ಕ್ರಿಕೆಟ್ ಪ್ಲೇಯರ್ ಟಾರ್ಗೆಟ್ ಮಾಡಿ ಪೋಸ್ಟ್ ಹಾಕ್ತಿದ್ದರು. ಚೆನ್ನೈನಲ್ಲಿದ್ದ ಆ ವ್ಯಕ್ತಿಯನ್ನೂ ನಾವು ಬಂಧಿಸಿದ್ದೇವೆ ಎಂದು ಪೊಲೀಸ್ ಆಯುಕ್ತ ದಯಾನಂದ್ ಎಚ್ಚರಿಕೆ ಕೊಟ್ಟರು.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ