ಬೆಂಗಳೂರು: ಬೆಂಗಳೂರಿನ(Bengaluru) ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ (Bomb Threat) ಇ-ಮೇಲ್ ಬಂದಿದೆ. ರಾಜಾಜಿನಗರದ ಎನ್ಪಿಎಸ್ ಶಾಲೆಗೆ ಇಂದು(ಜನವರಿ 06) ಬೆದರಿಕೆ ಬಂದಿದೆ. ಇದರಿಂದ ಆತಂಕಗೊಂಡ ಶಾಲಾ ಆಡಳಿತ ಮಂಡಳಿ ಕೂಡಲೇ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶಾಲೆ ಆವರಣದಲ್ಲಿ 4 ಜಿಲೆಟಿನ್ ಕಡ್ಡಿ ಇಟ್ಟಿರುವುದಾಗಿ ಇ-ಮೇಲ್ ಬಂದಿದೆ. ಬೆಳಗ್ಗೆ 11.30 ಮೇಲ್ ನೋಡಿದ ಶಾಲೆ ಸಿಬ್ಬಂದಿ, ತಕ್ಷಣ ಬಸವೇಶ್ವರನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಸವೇಶ್ವರನಗರ, ರಾಜಾಜಿನಗರ ಠಾಣೆ ಪೊಲೀಸರ ಭೇಟಿ ನೀಡಿದ್ದಾರೆ. ಅಲ್ಲದೇ ಬಾಂಬ್ ಪತ್ತೆ ದಳ, ಶ್ವಾನ ದಳದಿಂದ ಶಾಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ತಪಾಸಣೆ ನಂತರ ಹುಸಿ ಬೆದರಿಕೆ ಇ-ಮೇಲ್ ಎಂಬುದು ದೃಢವಾಗಿದ್ದು, ಪ್ರಕರಣ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪಶ್ಚಿಮ ವಿಭಾಗ ಪೊಲೀಸರುತನಿಖೆ ಮುಂದುವರಿಸಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರಕ್ರಿಯೆ ನೀಡಿದ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ, ಬಸವೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾತ್ರಿ 8:30 ಸುಮಾರಿಗೆ ಮೇಲ್ ಬಂದಿದೆ. ಜಿಲೇಟಿನ್ ಕಡ್ಡಿ ಇಟ್ಟು ಬ್ಲಾಸ್ಟ್ ಮಾಡೋದಾಗಿ ಮೇಲ್ ಬಂದಿದೆ. ಬೆಳಿಗ್ಗೆ ಮೇಲ್ ಚೆಕ್ ಮಾಡಿಕೊಂಡಿದ್ದಾರೆ. ಪ್ರೋಟೋಕಾಲ್ ಪ್ರಕಾರ ನಾವು ಬೆಳಿಗ್ಗೆ ಬಂದು ಎಲ್ಲಾ ಚೆಕ್ ಮಾಡಿದ್ದೀವಿ. ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಿದ್ದೇವೆ. ಇದೊಂದು ಹುಸಿ ಬಾಂಬ್ ಬೆದರಿಕೆ ಇ ಮೇಲ್ ಆಗಿದ್ದು, ಇದೀಗ ಎಲ್ಲಾ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಡಿಕೆಶಿ ಮಾಲೀಕತ್ವದ ಶಾಲೆಗೆ ಬಾಂಬ್ ಬೆದರಿಕೆ
ಬೆಂಗಳೂರಿನಲ್ಲಿ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಬಂದಿರುವುದು ಇದು ಮೊದಲಲ್ಲ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮಾಲೀಕತ್ವದ ಬೆಂಗಳೂರಿನ ಆರ್‌ಆರ್ ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಬಳಿಕ ಪೊಲೀಸರ ತನಿಖೆ ವೇಳೆ ಅದೇ ಸ್ಕೂಲ್ ನ 10ನೇ ತರಗತಿ ವಿದ್ಯಾರ್ಥಿ ಬೆದರಿಕೆ ಮೇಲ್ ಕಳುಹಿಸಿದ್ದ ಎಂಬುದು ಗೊತ್ತಾಗಿದೆ.
10ನೇ ತರಗತಿಯ ಮೊದಲ ಸೆಮಿಸ್ಟರ್ ಪರೀಕ್ಷೆ ಮುಂದೂಡಲು ವಿದ್ಯಾರ್ಥಿ ಪ್ಲ್ಯಾನ್ ಮಾಡಿ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ್ದ ಎನ್ನುವುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಆರ್. ಆರ್. ನಗರ ಪೊಲೀಸರು ಮೇಲ್ ಬಂದ ಐಪಿ ಅಡ್ರೆಸ್ ಜಾಡು ಹಿಡಿದು ವಿದ್ಯಾರ್ಥಿಯ ಕಿಡಿಗೇಡಿತನವನ್ನು ಪತ್ತೆ ಮಾಡಿದ್ದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 2:26 pm, Fri, 6 January 23