
ಬೆಂಗಳೂರು, ನ.25: ಶೀಟ್ ಮನೆ ಖಾಲಿ ಮಾಡಿಸುವ ವಿಚಾರಕ್ಕೆ ಪದೇ ಪದೇ ಕಿರಿಕ್ ಮಾಡುತ್ತಿದ್ದ ವಕೀಲ ಅಣ್ಣನೇ, ತನ್ನ ಸ್ವಂತ ತಂಗಿಯ ತಲೆಗೆ ಬ್ಯಾಟ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಜುನ್ನಸಂದ್ರದಲ್ಲಿ ಇಂದು (ನವೆಂಬರ್ 25) ಬೆಳಗ್ಗೆ 11:30ರ ಸುಮಾರಿಗೆ ನಡೆದಿದೆ. ಮೀನಾಕ್ಷಿ (39) ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದು, ವೃತ್ತಿಯಲ್ಲಿ ವಕೀಲರಾಗಿದ್ದ ಆರೋಪಿ ಅಣ್ಣ ಜಯರಾಮ್ ಕೃತ್ಯ ಎಸಗಿದ್ದಾನೆ. ಮೃತ ಮೀನಾಕ್ಷಿ ತನ್ನ ಗಂಡನನ್ನು ಬಿಟ್ಟು, ಎರಡು ಮಕ್ಕಳ ಜೊತೆ ಕೆಲ ತಿಂಗಳುಗಳಿಂದ ತವರು ಮನೆಗೆ ಬಂದು ಸೇರಿದ್ದರು. ಅಣ್ಣ ಜಯರಾಮ್ ಮನೆಯ ಎದುರಿನಲ್ಲೇ ಇದ್ದ ಶೀಟ್ ಮನೆಯಲ್ಲಿ (ಶೆಡ್) ಮೀನಾಕ್ಷಿ ತಮ್ಮ ಮಕ್ಕಳೊಂದಿಗೆ ವಾಸವಿದ್ದರು. ಆದರೆ, ತಂಗಿ ಆ ಶೀಟ್ ಮನೆಯಲ್ಲಿ ಇರುವುದನ್ನು ಸಹಿಸದ ಅಣ್ಣ ಜಯರಾಮ್, ಮನೆ ಖಾಲಿ ಮಾಡುವಂತೆ ಪದೇ ಪದೇ ಕಿರಿಕ್ ಹಾಗೂ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇಂದು ಬೆಳಗ್ಗೆ ಜಯರಾಮ್ ಪತ್ನಿ ಕಿಟಕಿಯಿಂದ ನೀರು ಎರಚಿದ್ದಾರೆ. ಈ ವಿಚಾರವಾಗಿ ಜಯರಾಮ್ ಪತ್ನಿ ಹಾಗೂ ಮೀನಾಕ್ಷಿ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ. ಈ ವೇಳೆ ಜಯರಾಮ್ ಪತ್ನಿ ಕೂಡ ಶೆಡ್ ಖಾಲಿ ಮಾಡಿಕೊಂಡು ಹೋಗುವಂತೆ ಮೀನಾಕ್ಷಿ ಜೊತೆ ಜಗಳವಾಡಿದ್ದಳು. ಬಳಿಕ ಜಯರಾಮ್ ಪತ್ನಿ ಗಲಾಟೆಯ ವಿಚಾರವನ್ನು ಪತಿ ಜಯರಾಮ್‌ಗೆ ತಿಳಿಸಿದ್ದಾಳೆ. ಇದರಿಂದ ಕೆರಳಿದ ವಕೀಲ ಜಯರಾಮ್ ಏಕಾಏಕಿ ಬಂದು ತಂಗಿ ಮೀನಾಕ್ಷಿ ತಲೆಗೆ ಬ್ಯಾಟ್‌ನಿಂದ ಬಲವಾಗಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಮೀನಾಕ್ಷಿ ಹತ್ಯೆಯಾಗಿದ್ದಾರೆ. ತಾಯಿಯ ಸಾವಿನಿಂದ ಇಬ್ಬರು ಮಕ್ಕಳು ಈಗ ಅನಾಥರಾಗಿದ್ದಾರೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬೆಳ್ಳಂದೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಆರೋಪಿ ಜಯರಾಮ್‌ನನ್ನು ವಶಕ್ಕೆ ಪಡೆದಿರುವ ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮದ್ಯದ ಅಮಲಿನಲ್ಲಿ ಯುವಕನೊಬ್ಬ ತನಗೆ ತಾನೇ ಹೊಟ್ಟೆಗೆ ಚಾಕುವಿನಿಂದ ಚುಚ್ಚಿಕೊಂಡು, ನಂತರ ಕತ್ತನ್ನೂ ಕೊಯ್ದುಕೊಂಡಿರುವ ಭಯಾನಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಾಂತಿನಗರದಲ್ಲಿ ನಡೆದಿದೆ. ಹೊರರಾಜ್ಯದ ಕೂಲಿ ಕಾರ್ಮಿಕ ಬಬ್ಲು (33) ಎಂಬಾತನೇ ಈ ಕೃತ್ಯ ಎಸಗಿಕೊಂಡಿದ್ದು, ಸದ್ಯ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶಾಂತಿನಗರದಲ್ಲಿ ವಾಸವಿದ್ದ ಹೊರರಾಜ್ಯದ ಕೂಲಿ ಕಾರ್ಮಿಕ ಬಬ್ಲು, ಮದ್ಯದ ನಶೆಯಲ್ಲಿ ಏಕಾಏಕಿ ಚಾಕುವಿನಿಂದ ತನ್ನ ಹೊಟ್ಟೆಗೆ ಚುಚ್ಚಿಕೊಂಡಿದ್ದಾನೆ. ಅಷ್ಟಕ್ಕೇ ನಿಲ್ಲದೆ ಬಳಿಕ ತನ್ನ ಕತ್ತನ್ನೂ ಕೊಯ್ದುಕೊಂಡಿದ್ದು, ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿದ್ದಾನೆ. ಯುವಕನ ಭೀಕರ ವರ್ತನೆಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದು ಆತಂಕಕ್ಕೊಳಗಾಗಿದ್ದಾರೆ. ತಕ್ಷಣವೇ ಸ್ಥಳೀಯರು ಆತನನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕಾಫಿನಾಡಿನಲ್ಲಿ ಒಮ್ಮೆಲೆ ಕ್ಯಾಮರಾ ಕಣ್ಣಿಗೆ ಬಿದ್ದ 39 ಕಾಡಾನೆಗಳ ಹಿಂಡು: ಹೇಗಿದೆ ನೋಡಿ ?
ಜಮೀನು ವಿವಾದದ ಹಿನ್ನೆಲೆಯಲ್ಲಿ ತಮ್ಮನ ಮಕ್ಕಳೇ ವೃದ್ಧನೊಬ್ಬನನ್ನು ಮರದ ಕಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆಗೈದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ನಡೆದಿದೆ. ಕ್ಯಾತಪ್ಪ ಕೊಲೆಯಾದ ವೃದ್ಧರಾಗಿದ್ದು, “ತಂದೆಗೆ ಗಂಡು ಮಕ್ಕಳಿಲ್ಲ, ಕೊಲೆ ಮಾಡಿ ಪರಾರಿಯಾಗಿರುವ ತಮ್ಮನ ಮಕ್ಕಳೇ ಬಂದು ಶವಕ್ಕೆ ಕೊಳ್ಳಿ ಇಡಬೇಕು” ಎಂದು ಮೃತ ಕ್ಯಾತಪ್ಪನ ಹೆಣ್ಣುಮಕ್ಕಳು ಶವದ ಮುಂದೆ ಕಣ್ಣೀರಿಡುತ್ತಾ ಪಟ್ಟು ಹಿಡಿದಿರುವ ಹೃದಯವಿದ್ರಾವಕ ದೃಶ್ಯ ಮನಕಲಕುವಂತಿದೆ. ದಿಬ್ಬೂರು ಗ್ರಾಮದ ಕ್ಯಾತಪ್ಪ ಹಾಗೂ ಅವರ ತಮ್ಮ ಬಾಲರಾಜ್ ಅಕ್ಕ-ಪಕ್ಕದ ಮನೆಯ ಸಂಬಂಧಿಗಳಾಗಿದ್ದು, ಇವರ ನಡುವೆ ಜಮೀನು ವಿವಾದವಿತ್ತು. ಇದೇ ದ್ವೇಷದಿಂದ ನಿನ್ನೆ (ನವೆಂಬರ್ 24) ಸಂಜೆ ಕ್ಯಾತಪ್ಪನ ತಮ್ಮ ಬಾಲರಾಜ್ ಅವರ ಮಕ್ಕಳಾದ ಶ್ರೀಕಾಂತ್, ಕೇಶವ ಹಾಗೂ ತರುಣ್ ಎಂಬುವವರು ಮರದ ಕಟ್ಟಿಗೆಯಿಂದ ಕ್ಯಾತಪ್ಪನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೃತ್ಯ ಎಸಗಿದ ಬಳಿಕ ಆರೋಪಿಗಳಾದ ಶ್ರೀಕಾಂತ್, ಕೇಶವ ಮತ್ತು ತರುಣ್ ಸ್ಥಳದಿಂದ ಪರಾರಿಯಾಗಿದ್ದಾರೆ. ತಂದೆ ಕ್ಯಾತಪ್ಪನ ಮೃತದೇಹವನ್ನು ನೋಡುತ್ತಿದ್ದಂತೆಯೇ ಪುತ್ರಿಯರಾದ ಮಾಲಾ ಕೆ. ಮತ್ತು ಮೇಘಶ್ರೀ ಕೆ. ಅವರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Wed, 25 November 26