ಬೆಂಗಳೂರು (ಮಾರ್ಚ್ 01): ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ (Rameshwaram Cafe Blast) ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಘಟನೆ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಹೊರಗಡೆಯಿಂದ ತಂದಿಟ್ಟಿದ್ದ ಬ್ಯಾಗ್ನಲ್ಲಿನ ವಸ್ತು ಸ್ಫೋಟವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮೇಲ್ನೋಟಕ್ಕೆ ಇದು ದ್ವೇಷದ ಸ್ಪೋಟ ಎನ್ನಲಾಗುತ್ತಿದೆ. ಅಂಬಾನಿ ಕುಟುಂಬದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಇದೇ ರಾಮೇಶ್ವರ ಕೆಫೆ ಕ್ಯಾಟರಿಂಗ್ ವಹಿಸಿಕೊಂಡಿದೆ. ಅಲ್ಲದೇ ಭಾರತದ್ಯಾಂತ ಕ್ಯಾಟರಿಂಗ್ ವಿಸ್ತರಿಸಲು ನಿರ್ಧಾರಿಸಿದ್ದರು. ಈ ಹಿನ್ನೆಲೆಯಲ್ಲಿ ಬ್ಯುಸನೆಸ್ ಸಂಬಂಧ ಸ್ಪೋಟಿಸಿರುವ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ.
ಇನ್ನು ಈ ಬಗ್ಗೆ ಟಿವಿ9ಗೆ ರಾಮೇಶ್ವರಂ ಕೆಫೆ ವ್ಯವಸ್ಥಾಪಕ ನಿರ್ದೇಶಕಿ(ಎಂಡಿ) ದಿವ್ಯಾ ಪ್ರತಿಕ್ರಿಯಿಸಿದ್ದು, ರಾಮೇಶ್ವರಂ ಕೆಫೆಯ ಕೈತೊಳೆಯುವ ಸ್ಥಳದಲ್ಲಿ ಸ್ಫೋಟವಾಗಿದೆ. ಕಿಚನ್ ಹೊರಗಡೆ ಪ್ಲೇಟ್ಗಳನ್ನು ಇಡುವ ಸ್ಥಳದಲ್ಲಿ ಸ್ಫೋಟವಾಗಿದೆ. ಕೆಫೆಯಲ್ಲಿ ವಿದ್ಯುತ್ ಅವಘಡ ಅಥವಾ ಸಿಲಿಂಡರ್ ಸ್ಫೋಟವಾಗಿಲ್ಲ. ಹೊರಗಿನಿಂದ ತಂದಿಟ್ಟ ಬ್ಯಾಗ್ ಸ್ಫೋಟವಾಗಿದೆ. 10 ಸೆಕೆಂಡ್ ಅಂತರದಲ್ಲಿ 2 ಬಾರಿ ಸ್ಫೋಟವಾಗಿದೆ. ಒಂದು ಬ್ಯಾಂಗ್ ತಂದಿಟ್ಟ ನಂತರ ಭಾರಿ ಪ್ರಮಾಣದಲ್ಲಿ ಸ್ಫೋಟವಾಗಿದ್ದು, ನಾಲ್ವರು ಗ್ರಾಹಕರು, ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ: ಹಲವರಿಗೆ ಗಂಭೀರ ಗಾಯ!
ಈ ಹಿಂದೆ 2 ಬಾರಿ ಅನುಮಾನಾಸ್ಪದ ಬ್ಯಾಗ್ ತಂದಿಟ್ಟು ಹೋಗಿದ್ದರು. ಒಂದು ಬ್ಯಾಗ್ ತೆಗೆದು ನೋಡಿದಾಗ ಮಡಕೆ ಕುಡಿಕೆ ಪತ್ತೆಯಾಗಿತ್ತು. ಮತ್ತೊಂದು ಬ್ಯಾಗನ್ನು ನಿರ್ಜನ ಪ್ರದೇಶದಲ್ಲಿರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬ್ಯಾಗನ್ನು ಪೊಲೀಸರಿಗೆ ಒಪ್ಪಿಸಿದ್ದೆವು, ಅದರಲ್ಲಿ ಏನಿತ್ತು ಗೊತ್ತಿಲ್ಲ. ಘಟನೆ ಬಗ್ಗೆ ಪೊಲೀಸರಿಗೆ ದೂರನ್ನು ನೀಡಿದ್ದೆವು. ಇಂದು ಕೂಡ ವಾಸ್ ಬೇಸಿನ್ ಬಳಿ ಬ್ಯಾಗ್ ತಂದಿಟ್ಟು ಹೋಗಿದ್ದರು. ಆ ಬ್ಯಾಗ್ ಇರಿಸಿದ್ದ ಸ್ಥಳದಲ್ಲೇ ಇಂದು ಸ್ಫೋಟವಾಗಿದೆ ಎಂದು ಹೇಳಿದರು.
ಇನ್ನು ಸ್ಫೋಟದ ಹಿಂದೆ ಹಲವು ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ಸ್ಥಳಕ್ಕೆ ಸುತ್ತಮುತ್ತಲಿನ ಠಾಣೆಯ ಪೊಲೀಸರು, ಹಿರಿಯ ಅಧಿಕಾರಿಗಳು ಘಟನಾ ಸ್ಥಕ್ಕೆ ದೌಡಾಯಿಸಿದ್ದಾರೆ. ಎಸಿಪಿ ರೀನಾ ಸುವರ್ಣ ಮತ್ತು ಮಾರತ್ತಹಳ್ಳಿ ಪೊಲೀಸರು ಸಹ ಸ್ಳಳದಲ್ಲಿ ಮೊಕ್ಕಂ ಹೂಡಿದ್ದಾರೆ. ಇನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸಹ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಈ ಘಟನೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ತಂಡ ಸಹ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದೆ. ಮತ್ತೊಂದು ತಂಡ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಬಳಿ ಮಾಹಿತಿ ಸಂಗ್ರಹಿಸುತ್ತಿದೆ.
ಕೈ ತೊಳೆಯುವ ಸಿಂಕ್ ಇಟ್ಟಿದ್ದ ಜಾಗದಲ್ಲಿ ಇದ್ದ ಬ್ಯಾಗ್ ಸ್ಪೋಟ ನಡೆದಿದ್ದು, ಇದು ಬೇಕೆಂತಲೇ ಮಾಡಿರುವ ಕೃತ್ಯ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಸಿ ಸಿ ಕ್ಯಾಮರಾ ಪರೀಲನೆ ನಡೆಸಲಾಗುತ್ತಿದ್ದು, ಶಂಕಿತರಿಗಾಗಿ ಹುಡುಕಾಟ ನಡೆಯುತ್ತಿದೆ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿದ್ದಾರೆ. ಅಗತ್ಯ ಉಪಕರಣಗಳ ಜೊತೆ ರಾಮೇಶ್ವರಂ ಕೆಫೆಗೆ ಬಂದಿರುವ FSL ತಂಡ ಪರಿಶೀಲನೆ ನಡೆಸಿದೆ. ಅಲ್ಲದೇ ಸ್ಥಳಕ್ಕೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳ ಬಂದಿದ್ದು, ತಪಾಸಣೆ ನಡೆಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Fri, 1 March 24