
ಬೆಂಗಳೂರು, ಜನವರಿ 18: ನಗರದಲ್ಲಿ ರೋಡ್ ರೇಜ್ ಪ್ರಕರಣಗಳಿಗೆ ಕೊನೆಯಿಲ್ಲದಂತಾಗಿದ್ದು, ಶುಕ್ರವಾರ (ಜನವರಿ 16) ಸಂಜೆ ಮಾಲ್ ಎದುರು ಕಾರ್ ಒಂದನ್ನು ನಿಲ್ಲಿಸಿದ ಆರೋಪಿ, ಅವಾಚ್ಯ ಶಬ್ಧಗಳಿಂದ ಬೈದು ಪರಾರಿಯಾಗಿದ ಘಟನೆ ನಡೆದಿದೆ. ಈ ಕುರಿತು ಸಂತ್ರಸ್ತರು ಎಕ್ಸ್ ಪೋಸ್ಟ್ ಹಂಚಿಕೊಂಡ ನಂತರ ಘಟನೆ ಪೊಲೀಸರ ಗಮನಕ್ಕೆ ಬಂದಿದ್ದು, ದ್ವಿಚಕ್ರವಾಹನ ಸವಾರನ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಪ್ರೆಸ್ಟೀಜ್ ಶಾಂತಿನಿಕೇತನ ಮಾಲ್ ಎದುರು ಈ ಘಟನೆ ನಡೆದಿದ್ದು, ಈ ಕುರಿತು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸ್ಕೂಟರ್ ಸವಾರನಾದ ಅರ್ಬಾಜ್ ಖಾನ್, ಎ. ರೆಡ್ಡಿ ಎಂಬವರ ಕಾರನ್ನು ಮಧ್ಯರಸ್ತೆಯಲ್ಲಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಏಕಾಏಕಿ ಚಾಕುವನ್ನು ಹೊರತೆಗೆದು ಕಾರಿನೊಳಗಿದ್ದವರಿಗೆ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯ ನಂತರ ಸಂತ್ರಸ್ತರು ತಮ್ಮ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು Xನಲ್ಲಿ ಹಂಚಿಕೊಂಡಿದ್ದು, ಬೆಂಗಳೂರು ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡಿದ್ದರು. ಪೋಸ್ಟ್ ನೋಡಿದ ಬಳಿಕ ವಿಡಿಯೋದಲ್ಲಿ ಕಾಣಿಸಿಕೊಂಡ ಸ್ಕೂಟರ್‌ನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ವಾಹನವನ್ನು ಅಕ್ರಮವಾಗಿ ತಡೆದು, ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ ಆರೋಪದಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:55 pm, Sun, 18 January 26