AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟಕ್ಕೆ ಇನ್ನೂ ಬಿದ್ದಿಲ್ಲ ಬ್ರೇಕ್! ಸಿಬ್ಬಂದಿಯ ಮೇಲೇ ಹಲ್ಲೆ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಪುಂಡಾಟ ಮುಂದುವರಿದಿದೆ. ಜನವರಿ 7 ರಂದು ಸಹಾಯಕ ಜೈಲರ್ ಮೇಲೆ ಕೈದಿಗಳಿಬ್ಬರು ಹಲ್ಲೆ ನಡೆಸಿದ್ದಾರೆ. ಈ ಹಿಂದೆ ಕುಡಿತ, ಡ್ಯಾನ್ಸ್, ಮೊಬೈಲ್ ಬಳಕೆ ಸೇರಿದಂತೆ ಹಲವು ಅಕ್ರಮಗಳು ಬೆಳಕಿಗೆ ಬಂದಿದ್ದವು. ಡಿಜಿಪಿ ಅಲೋಕ್ ಕುಮಾರ್ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ ನಂತರವೂ ಈ ಘಟನೆ ನಡೆದಿದ್ದು, ಜೈಲಿನ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟಕ್ಕೆ ಇನ್ನೂ ಬಿದ್ದಿಲ್ಲ ಬ್ರೇಕ್! ಸಿಬ್ಬಂದಿಯ ಮೇಲೇ ಹಲ್ಲೆ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಪುಂಡಾಟಕ್ಕೆ ಇನ್ನೂ ಬಿದ್ದಿಲ್ಲ ಬ್ರೇಕ್!
Shivaprasad B
| Edited By: |

Updated on: Jan 18, 2026 | 11:01 AM

Share

ಬೆಂಗಳೂರು, ಜನವರಿ 18: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಪುಂಡಾಟಕ್ಕೆ ಮಿತಿಯಿಲ್ಲದಂತಾಗಿದೆ. ಇತ್ತೀಚೆಗಷ್ಟೇ  ಕೈದಿಗಳ ಐಷಾರಾಇ ಜೀವನದ ವೀಡಿಯೋಗಳು ವೈರಲ್ ಆಗಿದ್ದವು.  ಅದಲ್ಲದೇ  ಕೈದಿಗಳು ಜೈಲಿನಲ್ಲೇ ಮದ್ಯ ತಯಾರಿಸಿ, ಕುಡಿದಿದ್ದಕ್ಕೆ ಸಾಕ್ಷಿಯೂ ದೊರೆತಿತ್ತು.  ಈ ಹಿನ್ನೆಲೆಯಲ್ಲಿ ಇಬ್ಬರು ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಅದಲ್ಲದೆ ಹೊಸ ಡಿಜಿಪಿಯಾಗಿ ಅಲೋಕ್ ಕುಮಾರ್ (Alok kumar) ನೇಮಕಗೊಂಡ ಮೇಲೆ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿತ್ತು. ಹೀಗಿದ್ದರೂ ಕ್ಷುಲ್ಲಕ ಕಾರಣಕ್ಕೆ ಅಪರಾಧಿಗಳು ಜೈಲರ್ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸಹಾಯಕ ಜೈಲರ್ ಮೇಲೆ ಹಲ್ಲೆ

ಜನವರಿ 7ರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಜೈಲರ್ ಮೇಲೆ ಸಜಾಬಂಧಿಗಳು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೈದಿಗಳಾದ ಆನಂದ್ ಮತ್ತು ಅಬ್ದುಲ್ ಘನಿ ಅನವಶ್ಯಕವಾಗಿ ಸಜಾಬಂಧಿ ಕಚೇರಿಗೆ ನುಗ್ಗಲು ಯತ್ನಿಸಿದ್ದು, ಈ ವೇಳೆ ಅವರನ್ನು ತಡೆಯಲು ಮುಂದಾದ ಅಸಿಸ್ಟೆಂಟ್ ಜೈಲರ್ ಹಾಗೂ ಜೈಲು ಸಿಬ್ಬಂದಿಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ನಡೆದ ನಂತರ ಕರ್ತವ್ಯ ನಿರ್ವಹಣೆಗೆ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರಭಾರ ಅಧೀಕ್ಷಕರು ತಡವಾಗಿ ನಿನ್ನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಠಿಣ ಕ್ರಮದ ನಂತರವೂ ಅದೇ ಪರಿಸ್ಥಿತಿ

ಕೆಲ ತಿಂಗಳ ಹಿಂದೆ ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಡ್ಯಾನ್ಸ್  ಜೊತೆಗೆ ಜೈಲಿನಲ್ಲಿದ್ದ ಕೈದಿಗಳು ಕೈಯಲ್ಲಿ ಮೊಬೈಲ್ ಹಿಡಿದು, ಐಷಾರಾಮಿ ಜೀವನ ನಡೆಸುತ್ತಿದ್ದ ವೀಡಿಯೋಗಳು ವೈರಲ್ ಆಗಿದ್ದವು. ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಿಸಿದ ವೀಡಿಯೋಗಳೂ ಹಲ್ ಚಲ್ ಎಬ್ಬಿಸಿದ್ದವು. ಈ  ಹಿನ್ನೆಲೆ ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು.

ಇದನ್ನೂ ಓದಿ ಜೈಲಲ್ಲಿ ರೌಡಿ ಶೀಟರ್​ ಹುಟ್ಟುಹಬ್ಬ ಆಚರಣೆ: ಇಬ್ಬರು ಅಧಿಕಾರಿಗಳ ತಲೆದಂಡ

ನಂತರ ಡಿಜಿಪಿಯಾಗಿ ಬಂದಿದ್ದ ಅಲೋಕ್ ಕುಮಾರ್, ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಹಾಗೂ ರಾಜಾತಿಥ್ಯಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದರು. ಆದರೂ ಸಹ ಜೈಲಿನ ದುಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಾಣದೆ, ಮತ್ತೊಮ್ಮೆ  ಪುಂಡಾಟದ  ಪ್ರಕರಣ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.