
ಬೆಂಗಳೂರು, ನವೆಂಬರ್ 25: ಎಟಿಂಗಳಿಗೆ ಹಣ ಒಯ್ಯುತ್ತಿದ್ದ ವಾಹನವನ್ನು ಅಧಿಕಾರಿಗಳ ಸೋಗಿನಲ್ಲಿ ತಡೆದು 7.11 ಕೋಟಿ ರೂಪಾಯಿ ದರೋಡೆ ಪ್ರಕರಣ ಸಂಬಂಧ 47 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆ ಮೂಲಕ ಕೇಸ್ ಸಂಬಂಧ ಈವರೆಗೆ 7.01 ಕೋಟಿ ರೂಪಾಯಿ ರಿಕವರಿ ಆದಂತಾಗಿದೆ. ಉಳಿದ 10 ಲಕ್ಷ ರೂಪಾಯಿ ಬಗ್ಗೆ ತನಿಖೆ ಮುಂದುವರಿದಿದ್ದು, ಬಂಧಿತ 9 ಆರೋಪಿಗಳ ವಿಚಾರಣೆ ತೀವ್ರಗೊಂಡಿದೆ.
ಪ್ರಕರಣ ಸಂಬಂಧ ನವೀನ್ ಎಂಬಾತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಹೈದರಾಬಾದ್ನ ಲಾಡ್ಜ್ ಒಂದರಲ್ಲಿ 53 ಲಕ್ಷ ರೂ. ಹಣದ ಜೊತೆಗೆ ಆರೋಪಿ ಸಿಕ್ಕಿಬಿದ್ದಿದ್ದ. ಎರಡು ದಿನಗಳ ಕಾಲ ಆತನ ಸತತ ವಿಚಾರಣೆ ನಡೆಸಲಾಗಿದ್ದು, ಈ ವೇಳೆ ನವೀನ್ ನೀಡಿರುವ ಮಾಹಿತಿ ಆಧರಿಸಿ ನಿನ್ನೆ ರಾತ್ರಿ ಕುಪ್ಪಂನ ಮನೆಯೊಂದರಲ್ಲಿದ್ದ 47 ಲಕ್ಷ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಬೆನ್ನತ್ತಿದ್ದ ಪೊಲೀಸರು ಹೊಸಕೋಟೆಯ ಪಾಳುಬಿದ್ದ ಮನೆಯಲ್ಲಿ ಆರೋಪಿಗಳು ಬಚ್ಚಿಟ್ಟಿದ್ದ 5.56 ಕೋಟಿ ರೂ.ಗಳನ್ನು ಈಗಾಗಲೇ ಪತ್ತೆ ಮಾಡಿದ್ದರು. ಆ ಬಳಿಕ ಹಂತ ಹಂತವಾಗಿ ಒಟ್ಟು 7.01 ಕೋಟಿ ರೂಪಾಯಿಗಳನ್ನು ರಿಕವರಿ ಮಾಡಲಾಗಿದೆ.
ಇದನ್ನೂ ಓದಿ: ಖಾಕಿ ತನಿಖೆ ವೇಳೆ ಬಯಲಾಯ್ತು 7.11 ಕೋಟಿ ಹಣ ದರೋಡೆಯ ಗುಟ್ಟು!
ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದ ಆರೋಪಿಗಳು, ಸಾಲ ತೀರಿಸುವ ಉದ್ದೇಶದಿಂದ ಹಣ ದರೋಡೆ ಮಾಡಿದ್ದರು. ಉಳಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುವ ಕನಸು ಅವರದ್ದಾಗಿತ್ತು ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ . ಮುಖ್ಯ ಆರೋಪಿಗಳಾದ ಗೋಪಿ ಮತ್ತು ಕ್ಸೇವಿಯರ್ 17 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದರು. ಆ ಪೈಕಿ ಕ್ಸೇವಿಯರ್ ಒಂದು ವರ್ಷದ ಹಿಂದೆಯೇ ಕೆಲಸ ಬಿಟ್ಟಿದ್ದ. ಕುಡಿತ, ಜೂಜಿನ ಚಟದಿಂದಾಗಿ ಆರೋಪಿಗಳು ಹಣಕಾಸು ಸಮಸ್ಯೆಗೆ ಸಿಲುಕಿದ್ದರು. ಈ ಹಿನ್ನಲೆ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಪ್ಲ್ಯಾನ್ ಪ್ರಕಾರ ATM ವಾಹನ ದರೋಡೆ ಮಾಡಲಾಗಿದ್ದು, ಹಾಲಿ ಸಿಬ್ಬಂದಿ ಗೋಪಿಯೇ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಎಂಬುದು ಬಹಿರಂಗವಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.