Bengaluru: ಖಾಕಿ ತನಿಖೆ ವೇಳೆ ಬಯಲಾಯ್ತು 7.11 ಕೋಟಿ ಹಣ ದರೋಡೆಯ ಗುಟ್ಟು!
ಪೊಲೀಸರ ತನಿಖೆ ವೇಳೆ ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂ. ದರೋಡೆ ಪ್ರಕರಣದ ಗುಟ್ಟು ಹೊರಬಂದಿದೆ. ಸಾಲ ಮತ್ತು ಜೂಜಿನ ಚಟದಿಂದ ಹಣದ ಅವಶ್ಯಕತೆಯಲ್ಲಿದ್ದ ಆರೋಪಿಗಳು ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ವಾಹನ ರಾಬರಿಗೆ ಪ್ಲ್ಯಾನ್ ರೂಪಿಸಿದ್ದರು. ದರೋಡೆ ಹಣದಲ್ಲಿ ಸಾಲ ತೀರಿಸಿ, ಉಳಿದ ಹಣದಲ್ಲಿ ಐಶಾರಾಮಿ ಜೀವನ ನಡೆಸೋದು ಆರೋಪಿಗಳ ಕನಸಾಗಿತ್ತು ಎಂಬುದು ಬಯಲಾಗಿದೆ. ಇತ್ತ ನಗರ ಪೊಲೀಸರ ಕಾರ್ಯಕ್ಕೆ ಗೃಹ ಸಚಿವರಿಂದ ಪ್ರಶಂಸೆ ವ್ಯಕ್ತವಾಗಿದೆ.

ಬೆಂಗಳೂರು, ನವೆಂಬರ್ 23: ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ವಾಹನ ತಡೆದು ನಗರದಲ್ಲಿ7.11 ಕೋಟಿ ಹಣ ರಾಬರಿ ಪ್ರಕರಣ ಸಂಬಂಧ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ದರೋಡೆ ಗುಟ್ಟು ಬಿಚ್ಚಿಟ್ಟಿದ್ದಾರೆ. ಸಾಲ ತೀರಿಸುವ ಸಲುವಾಗಿ ಆರೋಪಿಗಳು ದರೋಡೆ ಮಾಡಿದ್ದು, ಮಾಸ್ಟರ್ ಮೈಂಡ್ ಕ್ಸೇವಿಯರ್ ಸೇರಿ ಬಹುತೇಕರು ಸಾಲಗಾರರು ಎಂಬುದು ಗೊತ್ತಾಗಿದೆ. ಆರೋಪಿಗಳು ಇಸ್ಪೀಟು, ಜೂಜು ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದು, ಅದನ್ನು ಹೇಗಾದರೂ ತೀರಸಿಬೇಕೆಂದು ಎಟಿಎಂ ವಾಹನ ದರೋಡೆಗೆ ಸ್ಕೇಚ್ ಹಾಕಿದ್ದರು ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ಹಾಲಿ ಸಿಬ್ಬಂದಿಯೇ ದರೋಡೆಯ ಮಾಸ್ಟರ್ ಮೈಂಡ್
ಮುಖ್ಯ ಆರೋಪಿಗಳಾದ ಗೋಪಿ ಮತ್ತು ಕ್ಸೇವಿಯರ್ 17 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದರು. ಆ ಪೈಕಿ ಕ್ಸೇವಿಯರ್ ಒಂದು ವರ್ಷದ ಹಿಂದೆಯೇ ಕೆಲಸ ಬಿಟ್ಟಿದ್ದ. ಕುಡಿತ, ಜೂಜಿನ ಚಟದಿಂದಾಗಿ ಆರೋಪಿಗಳು ಹಣಕಾಸು ಸಮಸ್ಯೆಗೆ ಸಿಲುಕಿದ್ದರು. ದರೋಡೆ ಹಣದಲ್ಲಿ ಸಾಲ ತೀರಿಸಿ, ಉಳಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುವ ಪ್ಲ್ಯಾನ್ ಆರೋಪಿಗಳದ್ದಾಗಿತ್ತು. ಈ ಹಿನ್ನಲೆ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಪ್ಲ್ಯಾನ್ ಪ್ರಕಾರ ATM ವಾಹನ ದರೋಡೆ ಮಾಡಲಾಗಿದ್ದು, ಹಾಲಿ ಸಿಬ್ಬಂದಿ ಗೋಪಿಯೇ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಎಂಬುದು ಬಹಿರಂಗವಾಗಿದೆ. ಪ್ರಕರಣ ಸಂಬಂಧ ಸದ್ಯ ಮೂವರನ್ನು ಬಂಧಿಸಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಮತ್ತೆ ಮೂವರನ್ನು ಹೈದರಾಬಾದ್ನಿಂದ ಕರೆತರಲಾಗಿದೆ.
ಪೊಲೀಸರಿಗೆ ಶರಣಾದ 7ನೇ ಆರೋಪಿ
ಪ್ರಕರಣದ 7ನೇ ಆರೋಪಿ ರಾಕೇಶ್ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರವಿ ಸಹೋದರನಾದ ರಾಕೇಶ್, ರವಿ ಜೊತೆ ಸೇರಿ ದರೋಡೆಗೆ ಸಂಚು ರೂಪಿಸಿದ್ದ. ರಾಕೇಶನೇ ತಡರಾತ್ರಿ ಸಿದ್ದಾಪುರ ಠಾಣೆಗೆ ಬಂದು ಶರಣಾಗಿದ್ದಾನೆ.
ಇದನ್ನೂ ಓದಿ: ದರೋಡೆ ಕೇಸ್ ಬೇಧಿಸಿದ ಬೆಂಗಳೂರು ಪೊಲೀಸ್, ಅಧಿಕಾರಿಗಳಿಗೆ 5 ಲಕ್ಷ ರೂ ಬಹುಮಾನ ಘೋಷಣೆ
ಪೊಲೀಸರಿಗೆ ಗೃಹಸಚಿವರ ಪ್ರಶಂಸೆ
ಸದಾಶಿವನಗರದಲ್ಲಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ, ಪಶ್ಚಿಮ ವಿಭಾಗ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಮತ್ತು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿದ್ದಾರೆ. ದರೋಡೆ ಪ್ರಕರಣ ಬೇಧಿಸಿರುವ ಬೆಂಗಳೂರು ಪೊಲೀಸರನ್ನ ತಮ್ಮ ನಿವಾಸಕ್ಕೆ ಕರೆಸಿ ನಗರ ಪೊಲೀಸರ ಕಾರ್ಯಕ್ಕೆ ಗೃಹಸಚಿವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ತನಿಖೆಯ ಬಗ್ಗೆ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ.
6.29 ಕೋಟಿ ಹಣ ರಿಕವರಿ
7.11 ಕೋಟಿ ಹಣ ದರೋಡೆ ಸಂಬಂಧ ಈವರೆಗೆ 7 ಆರೋಪಿಗಳನ್ನು ಬಂಧಿಸಲಾಗಿದೆ. ಈಗ 6.29 ಕೋಟಿ ಹಣ ಸಿಕ್ಕಿದೆ, ಉಳಿದ ಹಣದ ಬಗ್ಗೆ ತನಿಖೆ ಆಗ್ತಿದೆ. ಪೊಲೀಸರು ತಾಂತ್ರಿಕವಾಗಿ & ಎಚ್ಚರಿಕೆಯಿಂದ ಕೆಲಸ ಮಾಡಿದ್ದು, ಆರೋಪಿಗಳು ಬಳಸಿದ ವಾಹನಗಳನ್ನು ಸೀಜ್ ಮಾಡಿದ್ದಾರೆ. ಮುಂದೆ ಇಲಾಖೆಯಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:28 am, Sun, 23 November 25



