ಪರಪ್ಪನ ಅಗ್ರಹಾರ ಜೈಲಲ್ಲಿ ರಾಜಾತಿಥ್ಯ ವಿಡಿಯೋ ವೈರಲ್ ಕೇಸ್: ಪೊಲೀಸರಿಗೆ ಸಿಕ್ತು ಸ್ಫೋಟಕ ಮಾಹಿತಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ರಾಜಾತಿಥ್ಯ ವಿಡಿಯೋ ವೈರಲ್ ಪ್ರಕರಣದಲ್ಲಿ ತನಿಖೆ ತೀವ್ರಗೊಂಡಿದೆ. ರೌಡಿಶೀಟರ್ ಕುದುರೆ ಮಂಜನ ವಿಚಾರಣೆ ವೇಳೆ ಪೊಲೀಸರಿಗೆ ಸ್ಫೋಟಕ ಮಾಹಿತಿ ಲಭಿಸಿದೆ. ಜೈಲಿನಲ್ಲಿ ಡ್ಯಾನ್ಸ್ ಮಾಡಿದ್ದನ್ನು ಮಂಜ ಒಪ್ಪಿಕೊಂಡಿದ್ದು, ವಿಡಿಯೋವನ್ನು ಕೆಲವರಿಗೆ ಹಂಚಿದ್ದಾಗಿ ತಿಳಿಸಿದ್ದಾನೆ. ಆ ಮೂಲಕ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದ್ದು, ವಿಜಯಲಕ್ಷ್ಮೀ ದರ್ಶನ್ ಕುರಿತು ಹರಿದಾಡಿದ್ದ ಊಹಾಪೋಹಗಳಿಗೂ ತೆರೆ ಬಿದ್ದಿದೆ.

ಆನೇಕಲ್, ನವೆಂಬರ್ 23: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ವಿಡಿಯೋ ವೈರಲ್ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದೆ. ಈ ಬಗ್ಗೆ ಕೊಲೆ ಆರೋಪಿ ದರ್ಶನ್ ಆಪ್ತ ಧನ್ವೀರ್ ಸೇರಿ ಹಲವರ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ವೇಳೆ ನಾನು ಯಾರಿಗೂ ವಿಡಿಯೋ ಶೇರ್ ಮಾಡಿಲ್ಲ ಎಂದು ನಟ ಧನ್ವೀರ್ ಹೇಳಿದ್ದರು. ಆ ಬೆನ್ನಲ್ಲೇ ರೌಡಿಶೀಟರ್ ಕುದುರೆ ಮಂಜ ಸೇರಿ ಹಲವರಿಗೆ ಖಾಕಿ ಗ್ರಿಲ್ ನಡೆಸಿದೆ. ಈ ವೇಳೆ ಸ್ಫೋಟಕ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬರ್ತ್ಡೇ, ಡ್ಯಾನ್ಸ್, ಮೊಬೈಲ್ಗಳ ಬಳಕೆ, ಮೋಜು ಮಸ್ತಿಯ ವಿಡಿಯೋ ವೈರಲ್ ಆದ ಹಿನ್ನಲೆ ವಿಡಿಯೋನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ರೌಡಿಶೀಟರ್ನ ವಿಚಾರಣೆ ನಡೆಸಲಾಗಿದೆ. ಜೈಲಿನಿಂದ ಬಿಡುಗಡೆಯಾಗಿದ್ದ ಮಂಜುನಾಥ್ ಅಲಿಯಾಸ್ ಕುದುರೆ ಮಂಜನಿಗೆ ಪೊಲೀಸರು ಗ್ರಿಲ್ ಮಾಡಿದ್ದಾರೆ. ಕೊಲೆ ಸೇರಿ ಹಲವು ಪ್ರಕರಣಗಳಲ್ಲಿ ಮಂಜುನಾಥ್ ಭಾಗಿಯಾಗಿದ್ದು, ಹೀಗಾಗಿ ಪರಪ್ಪನ ಅಗ್ರಹಾರ ಪೊಲೀಸರಿಂದ ಆತನ ವಿಚಾರಣೆ ನಡೆಸಲಾಗಿದೆ. ಈ ವೇಳೆ ಜೈಲಿನಲ್ಲಿ ಡ್ಯಾನ್ಸ್ ಮಾಡಿದ್ದು ನಿಜ ಎಂದು ಮಂಜ ಒಪ್ಪಿಕೊಂಡಿದ್ದು, ವಿಡಿಯೋವನ್ನ ಗುಬ್ಬಚ್ಚಿ ಸೀನ, ವಿಲ್ಸನ್ ಗಾರ್ಡನ್ ನಾಗನಿಗೆ ಆತ ಶೇರ್ ಮಾಡಿದ್ದ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ಕುಡಿದ ಮತ್ತಲ್ಲಿ ಕೈದಿಗಳ ಡ್ಯಾನ್ಸ್ ವಿಡಿಯೋ ವೈರಲ್: ಯಾವ ಜೈಲಿನದ್ದು?
ಕುದುರೆ ಮಂಜನ ಹೇಳಿಕೆಯಿಂದಾಗಿ ಇದೀಗ ಗುಬ್ಬಚ್ಚಿ ಸೀನ ಮತ್ತು ವಿಲ್ಸನ್ ಗಾರ್ಡನ್ ನಾಗನಿಗೆ ಸಂಕಷ್ಟ ಎದುರಾಗಿದ್ದು, ಕೋರ್ಟ್ ಅನುಮತಿ ಪಡೆದು ಈ ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಸದ್ಯ ಗುಬ್ಬಚ್ಚಿ ಸೀನ ಮತ್ತು ನಾಗ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು, ಈ ಹಿಂದೆ ದರ್ಶನ್ ಜತೆ ಇವರಿಬ್ಬರೂ ರಾಜಾತಿಥ್ಯ ಪಡೆದಿದ್ದರು. ಬಳಿಕ ಹಿಂಡಲಗಾ ಜೈಲಿಗೆ ಇವರನ್ನು ಶಿಫ್ಟ್ ಮಾಡಲಾಗಿತ್ತು. ಕೋರ್ಟ್ ಅನುಮತಿ ಕೊಟ್ರೆ ಪರಪ್ಪನ ಅಗ್ರಹಾರ ಠಾಣೆಗೆ ಕರೆತಂದು ಇಬ್ಬರನ್ನೂ ಪೊಲೀಸರು ವಿಚಾರಣೆ ಮಾಡಲಿದ್ದು, ಇಲ್ಲದಿದ್ರೆ ಹಿಂಡಲಗಾ ಜೈಲಿಗೆ ತೆರಳಿ ಈ ಬಗ್ಗೆ ಆರೋಪಿಗಳಿಂದ ಮಾಹಿತಿ ಕಲೆಹಾಕಲಿದ್ದಾರೆ.
ವಿಜಯಲಕ್ಷ್ಮೀ ದರ್ಶನ್ಗೆ ರಿಲೀಫ್
ವಿಡಿಯೋ ವೈರಲ್ ವಿಚಾರ ಸಂಬಂಧ ನಟ ಧನ್ವೀರ್ ವಿಚಾರಣೆ ವೇಳೆ ವಿಜಯಲಕ್ಷ್ಮೀ ದರ್ಶನ್ ಹೆಸರನ್ನು ಪ್ರಸ್ತಾಪಿಸಿದ್ದರು. ಅತ್ತಿಗೆಗೆ ವಿಡಿಯೋ ಶೇರ್ ಮಾಡಿದ್ದೇನೆ ಎಂದು ಧನ್ವೀರ್ ಹೇಳಿರುವ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಆದರೆ ಕುದುರೆ ಮಂಜನ ಹೇಳಿಕೆಯಿಂದಾಗಿ ಎದುರಾಗಿದ್ದ ಸಂಕಷ್ಟದಿಂದ ವಿಜಯಲಕ್ಷ್ಮೀ ಪಾರಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರ ತನಿಖೆ ಮುಂದುವರಿದಿದ್ದು, ವಿಡಿಯೋ ವೈರಲ್ ಕೇಸ್ ಇನ್ನೂ ಹಲವರ ಕುತ್ತಿಗೆಗೆ ಸುತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:18 am, Sun, 23 November 25



