AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಲೈಂಗಿಕ ಸಮಸ್ಯೆಗೆ ಪರಿಹಾರ ನೆಪದಲ್ಲಿ ಟೆಕ್ಕಿಗೆ ಟೋಪಿ; ಕಿಡ್ನಿಗೂ ಹಾನಿ

ಬೆಂಗಳೂರಿನಲ್ಲಿ ಲೈಂಗಿಕ ಸಮಸ್ಯೆಗೆ ಪರಿಹಾರ ನೆಪದಲ್ಲಿ ಟೆಕ್ಕಿಯೊಬ್ಬರಿಗೆ 48 ಲಕ್ಷ ರೂ. ವಂಚನೆ ಆರೋಪ ಕೇಳಿಬಂದಿದೆ. ಆಯುರ್ವೇದ ಚಿಕಿತ್ಸೆ ಹೆಸರಿನಲ್ಲಿ ದುಬಾರಿ ಔಷಧಿಗಳನ್ನು ನೀಡಿ, ಹಣ ಲೂಟಿ ಮಾಡಲಾಗಿದೆ. ಈ ಚಿಕಿತ್ಸೆಯಿಂದ ಟೆಕ್ಕಿಯ ಕಿಡ್ನಿಗೂ ಸಮಸ್ಯೆಯಾಗಿದ್ದು, ಕೊನೆಗೆ ವಂಚನೆಯ ಅರಿವಾಗ್ತಿದ್ದಂತೆ ಪೊಲೀಸರ ಮೊರೆ ಹೋಗಲಾಗಿದೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬೆಂಗಳೂರು: ಲೈಂಗಿಕ ಸಮಸ್ಯೆಗೆ ಪರಿಹಾರ ನೆಪದಲ್ಲಿ ಟೆಕ್ಕಿಗೆ ಟೋಪಿ; ಕಿಡ್ನಿಗೂ ಹಾನಿ
ಸಾಂದರ್ಭಿಕ ಚಿತ್ರ
ರಾಚಪ್ಪಾಜಿ ನಾಯ್ಕ್
| Edited By: |

Updated on:Nov 23, 2025 | 12:36 PM

Share

ಬೆಂಗಳೂರು, ನವೆಂಬರ್​​ 23: ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ಟೆಕ್ಕಿಯೊಬ್ಬರಿಗೆ ಬರೋಬ್ಬರಿ 48 ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪ ಬೆಂಗಳೂರಿನಲ್ಲಿ ಕೆಳಿಬಂದಿದೆ. ಆಯುರ್ವೇದ ಚಿಕಿತ್ಸೆಯಿಂದ ಕಿಡ್ನಿಗೆ ಸಮಸ್ಯೆ ಆಗಿರುವುದು ಗೊತ್ತಾದ ಬಳಿಕ ಎಚ್ಚೆತ್ತ ಅವರು, ಪೊಲೀಸರ ಮೊರೆ ಹೋಗಿದ್ದಾರೆ. ಘಟನೆ ಸಂಬಂಧ ವಿಜಯ್ ಗೂರೂಜಿ ಎಂಬವರು ಸೇರಿ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್​​ ವಿರುದ್ಧ ಪ್ರಕರಣ ದಾಖಲಾಗಿದೆ.

1 ಗ್ರಾಂ ಔಷಧಿಗೆ 1 ಲಕ್ಷದ 60 ಸಾವಿರ ರೂ.!

ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದ ಟೆಕ್ಕಿ ತೇಜಸ್​​ ಎಂಬವರು ಕೆಂಗೇರಿ ಸನೈರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆಯ ಪಕ್ಕದ ಟೆಂಟ್ ಬಳಿ ಹಾಕಲಾಗಿದ್ದ ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಬೋರ್ಡ್​ ಗಮನಿಸಿದ್ದ ತೇಜಸ್​ ಅಲ್ಲಿಗೂ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿದ್ದಾತ ವಿಜಯ್ ಗುರೂಜಿಗೆ ಹೇಳಿ ಚಿಕಿತ್ಸೆ ಕೊಡಿಸುತ್ತೇನೆಂದು ಟೆಕ್ಕಿಗೆ ಭರವಸೆ ನೀಡಿದ್ದಾನೆ. 1 ಗ್ರಾಂ ಔಷಧಿಗೆ 1,60,000 ರೂ. ಬೆಲೆ ಇರುವ ದೇವರಾಜ್ ಬೂಟಿ ಹೆಸರಿನ ಔಷಧವನ್ನು ಯಶವಂತಪುರದ ವಿಜಯಲಕ್ಷ್ಮೀ ಆಯುರ್ವೇದಿಕ್​​ ಶಾಪ್​ನಲ್ಲಿ ಮಾತ್ರ ಖರೀದಿಸಬೇಕೆಂದು ಒತ್ತಾಯ ಮಾಡಿದ್ದಾನೆ. ಅಲ್ಲದೆ ಆನ್‌ಲೈನ್ ಪೇಮೆಂಟ್ ಬೇಡ, ಯಾರ ಜೊತೆಗೆ ಬರಬಾರದೆಂದು ಷರತ್ತು ವಿಧಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ:  ಖಾಕಿ ತನಿಖೆ ವೇಳೆ ಬಯಲಾಯ್ತು 7.11 ಕೋಟಿ ಹಣ ದರೋಡೆಯ ಗುಟ್ಟು!

ಕಿಡ್ನಿಗೂ ಹಾನಿ

ಆತ ನೀಡಿದ್ದ ಸಲಹೆಯಂತೆ ತೇಜಸ್​​ ಹಲವು ಬಾರಿ ದೇವರಾಜ್ ಬೂಟಿ & ಭವನ ಬೂಟಿ ತೈಲ ಖರೀದಿಸಿದ್ದರು. ಒಟ್ಟು 17 ಲಕ್ಷ ರೂ.ಗಳನ್ನು ಔಷಧಕ್ಕಾಗಿ ಖರ್ಚು ಮಾಡಿದ್ದರು. ಆ ಬಳಿಕ ಹಣದ ಕೊರತೆಯಿಂದ HDFC ಬ್ಯಾಂಕ್ ಖಾತೆಯಲ್ಲಿ 20 ಲಕ್ಷ ರೂ. ಲೋನ್ ಪಡೆದು ಒಟ್ಟು 18 ಗ್ರಾಂ ಔಷಧ ಖರೀದಿಸಿದ್ದರು. ಸಮಸ್ಯೆ ಇದ್ದಾಗ ಬರದಿದ್ದರೆ ಮತ್ತಷ್ಟು ಸಮಸ್ಯೆ ಆಗುವುದಾಗಿ ಆರೋಪಿಗಳು ತೇಜಸ್​​ಗೆ ಬೆದರಿಕೆ ಹಾಕಿದ್ದು, ಕೊನೆಗೆ ಆರೋಗ್ಯ ಸಮಸ್ಯೆಯಿಂದ ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಸಮಸ್ಯೆ ಆಗಿರುವುದು ಪತ್ತೆಯಾಗಿದೆ. ಆ ಬಳಿಕ ಎಚ್ಚೆತ್ತ ತೇಜಸ್​​ ಆಯುರ್ವೇದ ಚಿಕಿತ್ಸೆ ಹೆಸರಲ್ಲಿ ತನಗೆ ವಂಚನೆ ಮಾಡಿದ ವಿಜಯ್ ಗೂರೂಜಿ, ವಿಜಯಲಕ್ಷ್ಮೀ ಆಯುರ್ವೇದಿಕ್ ವಿರುದ್ಧ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:28 pm, Sun, 23 November 25