ಬೆಂಗಳೂರು ದರೋಡೆ ಕೇಸ್: ಮತ್ತೆ ಮೂವರ ಬಂಧನ, 70 ಲಕ್ಷ ರೂ ಹಣ ವಶಕ್ಕೆ
ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಸಿದ್ದಾಪುರ ಪೊಲೀಸರು ಹೈದರಾಬಾದ್‌ನಲ್ಲಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 70 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದ್ದು, ಇದುವರೆಗೆ ಒಟ್ಟು 6.45 ಕೋಟಿ ರೂ. ಜಪ್ತಿಯಾಗಿದೆ. ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಬೆಂಗಳೂರು, ನವೆಂಬರ್ 22: ನಗರದಲ್ಲಿ ಹಾಡಹಗಲೇ 7.11 ಕೋಟಿ ರೂ ದರೋಡೆ ಪ್ರಕರಣಕ್ಕೆ (Robbery Case) ಸಂಬಂಧಿಸಿದಂತೆ ಇದೀಗ ಮತ್ತೆ ಮೂವರನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ (Arrest). ನವೀನ್, ನೆಲ್ಸನ್ ಹಾಗೂ ರವಿ ಬಂಧಿತರು. ಆರೋಪಿಗಳು ಹೈದರಾಬಾದ್ ಲಾಡ್ಜ್ನಲ್ಲಿ ತಲೆಮರಿಸಿಕೊಂಡಿದ್ದರು. ಬಂಧಿತರಿಂದ 70 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದು, ಈವರೆಗೆ 6 ಕೋಟಿ 45 ಲಕ್ಷ ರೂ ಹಣ ಜಪ್ತಿ ಮಾಡಲಾಗಿದೆ. ಇನ್ನು 67 ಲಕ್ಷ ರೂ. ಹಣ ಪತ್ತೆಯಾಗ ಬೇಕಿದೆ. ಸದ್ಯ ಆರೋಪಿಗಳನ್ನು ಬೆಂಗಳೂರಿಗೆ ಕರೆತರುತ್ತಿರುವ ಪೊಲೀಸರು, ಮತ್ತಿಬ್ಬರಿಗಾಗಿ ಶೋಧ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್ಟೇಬಲ್ ಸಾಥ್ ನೀಡಿರುವ ಸ್ಫೋಟಕ ಸತ್ಯ ಬಯಲಾಗಿದೆ. ಗೋವಿಂದಪುರ ಠಾಣೆ ಕಾನ್ಸ್ಟೇಬಲ್ ಅಣ್ಣಪ್ಪ, ಸಿಎಂಎಸ್ ಕಂಪನಿ ಹಳೆ ಉದ್ಯೋಗಿ ಕ್ಸೇವಿಯರ್, ಸಿಎಂಎಸ್ ವಾಹನ ವಿಭಾಗದ ಮೇಲ್ವಿಚಾರಕ ಗೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರು.
ಬಂಧಿತ ಮೂವರು ಆರೋಪಿಗಳು ಡಿ.1ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ
ಬಂಧಿತ ಕ್ಸೇವಿಯರ್, ಅಣ್ಣಪ್ಪ ಮತ್ತು ಗೋಪಾಲ್‌ಗೆ ಡಿ.1ರವರೆಗೆ ಪೊಲೀಸ್ ಕಸ್ಟಡಿ ನೀಡಿ ಬೆಂಗಳೂರಿನ 2ನೇ ಎಸಿಎಂಎಂ ಕೋರ್ಟ್ ಶನಿವಾರ ಆದೇಶ ಹೊರಡಿಸಿದೆ. ಇಂದು ಪೊಲೀಸರು ಬಂಧಿತ ಮೂವರು ಆರೋಪಿಗಳನ್ನು ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹತ್ತು ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರು ದರೋಡೆಯಲ್ಲಿ ಭಾಗಿಯಾಗಿದ್ದ ಬಹುತೇಕ ಎಲ್ಲ ಆರೋಪಿಗಳ ಬಂಧನ; ಈವರೆಗೂ ವಶಕ್ಕೆ ಪಡೆದ ಹಣವೆಷ್ಟು?
ಇದಕ್ಕಾಗಿ ಸಿದ್ದಾಪುರ ಪೊಲೀಸರು ಕೋರ್ಟ್‌ಗೆ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯಕ್ಕೆ ಹಾಜರು ವೇಳೆ ಯಾವಾಗ ಅರೆಸ್ಟ್ ಮಾಡಿದ್ದು ಎಂದು ಜಡ್ಜ್ ಪ್ರಶ್ನಿಸಿದ್ದಾರೆ. ನಿನ್ನೆ ಸಂಜೆ ಅರೆಸ್ಟ್ ಮಾಡಲಾಗಿದೆ. ಗುರುವಾರ ನೋಟಿಸ್ ನೀಡಲಾಗಿದೆ ಎಂದು ತನಿಖಾ ಅಧಿಕಾರಿ ಹೇಳಿದ್ದಾರೆ. ಇದೀಗ ಡಿ.1ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇದನ್ನೂ ಓದಿ: ದರೋಡೆ ಕೇಸ್ ಬೇಧಿಸಿದ ಬೆಂಗಳೂರು ಪೊಲೀಸ್: ಅಧಿಕಾರಿಗಳಿಗೆ 5 ಲಕ್ಷ ರೂ ಬಹುಮಾನ ಘೋಷಣೆ
ನವೆಂಬರ್ 19ರಂದು ಮಟ ಮಟ ಮಧ್ಯಾಹ್ನವೇ ಬೆಂಗಳೂರಿನ ಹೃದಯಭಾಗದಲ್ಲೇ ಅತಿದೊಡ್ಡ ರಾಬರಿ ನಡೆದೋಗಿತ್ತು. ಜಸ್ಟ್ 7 ನಿಮಿಷದಲ್ಲೇ 7 ಕೋಟಿ ರೂ. ದೋಚಿದ್ದ ಖದೀಮರ ಗ್ಯಾಂಗ್ ಮಾಯಾಮೃಗದಂತೆ ಮಾಯವಾಗಿದ್ದರು. ದರೋಡೆಕೋರರಿಗೆ ದಶ ದಿಕ್ಕಲ್ಲೂ ಬಲೆ ಹಾಕಿದ್ದ ಬೆಂಗಳೂರು ಪೊಲೀಸರು ಕೇವಲ ಮೂರೇ ದಿನದಲ್ಲಿ ಹಣದ ಸಮೇತ ರಾಬರಿ ಗ್ಯಾಂಗ್ನ ಮೂವರ ಕೈಗೆ ಕೋಳ ತೊಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



