ಬೆಂಗಳೂರು ದರೋಡೆಯಲ್ಲಿ ಭಾಗಿಯಾಗಿದ್ದ ಬಹುತೇಕ ಎಲ್ಲ ಆರೋಪಿಗಳ ಬಂಧನ; ಈವರೆಗೂ ವಶಕ್ಕೆ ಪಡೆದ ಹಣವೆಷ್ಟು?
ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿ ದರೋಡೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಸಿಸಿಬಿ ಮತ್ತು ದಕ್ಷಿಣ ವಿಭಾಗದ ಪೊಲೀಸರ ತಂಡ ಆಂಧ್ರ ಮತ್ತು ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸಿ, ಬಹುತೇಕ ಎಲ್ಲಾ ಆರೋಪಿಗಳನ್ನು ಬಂಧಿಸಿದೆ. ದರೋಡೆಯಾದ 7.11 ಕೋಟಿ ರೂ.ಗಳಲ್ಲಿ 90 ಪ್ರತಿಶತಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು, ನವೆಂಬರ್ 22: ಬೆಂಗಳೂರಿನಲ್ಲಿ ಹಾಡಹಗಲೇ ನಡೆದ 7.11 ಕೋಟಿ ರೂಪಾಯಿ ದರೋಡೆ ಪ್ರಕರಣ (CMS Vehicle Robbery Case) ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ದರೋಡೆ ಪ್ರಕರಣ ಭೇದಿಸುವಲ್ಲಿ ಬೆಂಗಳೂರಿನ ಪೊಲೀಸರು ಇದೀಗ ಯಶಸ್ವಿಯಾಗಿದ್ದು, ಬಹುತೇಕ ಎಲ್ಲಾ ಆರೋಪಿಗಳನ್ನೂ ಬಂಧಿಸಿದ್ದಾರೆ. ದೋಚಲ್ಪಟ್ಟ 7.11 ಕೋಟಿ ರೂ.ಗಳಲ್ಲಿ 6 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.
ದರೋಡೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಬೆಂಗಳೂರು ಪೊಲೀಸರು
ಬೆಂಗಳೂರು ಸಿಸಿಬಿ, ದಕ್ಷಿಣ ವಿಭಾಗದ ಪೊಲೀಸರ ತಂಡ ಸೇರಿ ಆಂಧ್ರ ಮತ್ತು ತಮಿಳುನಾಡಿನಲ್ಲೂ ಕಾರ್ಯಾಚರಣೆ ನಡೆಸಿದ್ದು, ಐದಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಡಿಸಿಪಿ, ಇಬ್ಬರು ಜಂಟಿ ಪೊಲೀಸ್ ಆಯುಕ್ತರು ಹಾಗೂ 50ಕ್ಕೂ ಹೆಚ್ಚು ಪೊಲೀಸರು ಸೇರಿ ನಡೆಸಿದ ಶೋಧದ ಫಲವಾಗಿ ಕಳೆದ ರಾತ್ರಿ 6 ಕೋಟಿ 70 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ರವಿ ಮೂಲತಃ ಆಂದ್ರದ ಚಿತ್ತೂರು ಜಿಲ್ಲೆ ನಿವಾಸಿಯಾಗಿದ್ದು, ಈತ ಪೊಲೀಸ್ ಪೇದೆ ಅಣ್ಣಪ್ಪನ ಜೊತೆಗೆ ಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದ್ದು, ಇದೀಗ ಚಿತ್ತಾಪುರದಲ್ಲಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿದ್ದಾನೆ.
ಕ್ಷೇವಿಯರ್ ಸೇರಿ 5 ಕ್ಕೂ ಹೆಚ್ಚು ಆರೋಪಿಗಳ ಬಂಧನ
ಆರೋಪಿಗಳು ದರೋಡೆಗಾಗಿ ನಂಬರ್ ಪ್ಲೇಟ್ ಇಲ್ಲದ ವ್ಯಾಗನರ್ ಕಾರ್ ಬಳಸಿದ್ದು, ನ.19ರಂದು ಅಶೋಕ್ ಪಿಲ್ಲರ್ ಬಳಿ ಸಿಎಂಸಿ ಹಣ ಸಾಗಣೆ ವಾಹನ ಬರುವ ಮುನ್ನ ವ್ಯಾಗನರ್ ಯು-ಟರ್ನ್ ಆಗಿ ಕಾದಿದ್ದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ದರೋಡೆಕೋರರು RBI ಅಧಿಕಾರಿಗಳೆಂದು ಪರಿಚಯಿಸಿಕೊಂಡು ಸಿಬ್ಬಂದಿಯನ್ನು ಕಾರಿಗೆ ಹತ್ತಿಸಿಕೊಂಡಿದ್ದರು. ಬಳಿಕ ಇನೋವಾ ಮತ್ತು ವ್ಯಾಗನರ್ ಮೂಲಕ ಹಣ ಕಳ್ಳತನ ಮಾಡಿ ಕುಪ್ಪಂ ಬಳಿ ಇನೋವಾ ಬಿಟ್ಟು ಪರಾರಿಯಾಗಿದ್ದರು. ಆಂಧ್ರದಲ್ಲಿ 5.3 ಕೋಟಿ ರೂ . ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಚಿತ್ತೂರಿನ ಅರಣ್ಯ ಪ್ರದೇಶದಲ್ಲಿ ಚೇಸ್ ನಡೆಸಿದ ಬೆಂಗಳೂರು ಪೊಲೀಸರು ಪ್ರಮುಖ ಆರೋಪಿ ಕ್ಷೇವಿಯರ್ನನ್ನು ತಮಿಳುನಾಡಿನಲ್ಲಿ ಬಂಧಿಸಲು ಯಶಸ್ವಿಯಾಗಿದ್ದರು.
ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




