AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ 7 ಕೋಟಿ ರೂ ಕಳ್ಳತನ: ದರೋಡೆ ಎಲ್ಲಿ-ಹೇಗಾಯ್ತು? ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರಿನ ಡೇರಿ ಸರ್ಕಲ್‌ ಬಳಿ ಬುಧವಾರ ಮಧ್ಯಾಹ್ನ ಹಾಡಹಗಲೇ 7.11 ಕೋಟಿ ರೂ. ದರೋಡೆ ಮಾಡಿರುವ ಘಟನೆ ನಡೆದಿದೆ. ಎಟಿಎಂಗಳಿಗೆ ಹಣ ಹಾಕಲು ಹೋಗುತ್ತಿದ್ದ ಸಿಎಂಎಸ್ ವಾಹನವನ್ನು ಹೈಜಾಕ್ ಮಾಡಿ ಬಳಿಕ ಡೇರಿ ಸರ್ಕಲ್​ ಫ್ಲೈಓವರ್ ಮೇಲೆ ನಿಲ್ಲಿಸಿ ಬರೋಬ್ಬರಿ 7.11 ಕೋಟಿ ರೂ. ದೋಚಿಕೊಂಡು ಹೋಗಿದ್ದಾರೆ. ಇನ್ನು ಈ ಸಂಬಂಧ ಎಫ್​ಐಆರ್ ದಾಖಲಾಗಿದ್ದು,ಸಿಎಂಎಸ್ ವಾಹನ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇನ್ನು ಈ ದರೋಡೆ ಹೇಗಾಯ್ತು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ 7 ಕೋಟಿ ರೂ ಕಳ್ಳತನ: ದರೋಡೆ ಎಲ್ಲಿ-ಹೇಗಾಯ್ತು? ಇಲ್ಲಿದೆ ಸಂಪೂರ್ಣ ವಿವರ
Rob Atm Cash Van
ರಮೇಶ್ ಬಿ. ಜವಳಗೇರಾ
|

Updated on:Nov 19, 2025 | 8:07 PM

Share

ಬೆಂಗಳೂರು, (ನವೆಂಬರ್ 19): ನಗರದ ಡೈರಿ ಸರ್ಕಲ್​​ ಫ್ಲೈಓವರ್ ಮೇಲೆ ಎಟಿಎಂ ವಾಹನದಲ್ಲಿದ್ದ ಬರೋಬ್ಬರಿ 7.11 ಕೋಟಿ ರೂ ದೋಚಿಕೊಂಡು ಗ್ಯಾಂಗ್ ಇನೋವಾ ಕಾರಿನಲ್ಲಿ ಪರಾರಿಯಾಗಿದೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿಎಂಎಸ್ ಕಂಪನಿ ಮ್ಯಾನೇಜರ್ ದೂರಿನ ಆಧಾರದಲ್ಲಿ ಡಕಾಯಿತಿ ಎಂದು ಎಫ್ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ದರೋಡೆಕೋರರು ಹೇಗೆ ಬಂದು ವಾಹನವನ್ನು ಹೈಜಾಕ್ ಮಾಡಿದರು? ಎಲ್ಲಿಗೆ ಕರೆದೊಯ್ದರು? ಬಳಿಕ ಹೇಗೆ ಹಣ ದೋಚಿಕೊಂಡು ಹೋದರು ಎನ್ನುವ ಬಗ್ಗೆ ಸಿಎಂಎಸ್ ವಾಹನ ಚಾಲಕ ಬಿನೋದ್ ವಿವರಿಸಿದ್ದಾರೆ.

ಇನ್ನು ಸಿಎಂಎಸ್ ವಾಹನ ಚಾಲಕ ಬಿನೋದ್ ಘಟನೆಯ ವಿವರ ನೀಡಿದ್ದು, ನಾವು ವಾಹನದಲ್ಲಿ ನಾಲ್ಕು ಜನ ಬಂದ್ವಿ. ಅವರು ಕಾರಲ್ಲಿ ಐದಾರು ಜನ ಬಂದು ನಾವು ಆರ್ ಬಿಐ ನವರು ಎಂದು ಹೇಳಿದರು. ಸಿಎಂಎಸ್ ವಾಹನದಲ್ಲಿದ್ದ ಉಳಿದವರನ್ನ ತಮ್ಮ ಕಾರಲ್ಲಿ ಹತ್ತಿಸಿಕೊಂಡ್ರು. ನನ್ನನ್ನ ಸಿಎಂಎಸ್ ವಾಹನದಲ್ಲೇ ಕರೆದುಕೊಂಡು ಹೋಗಿ ಡೈರಿ ಸರ್ಕಲ್ ಬ್ರಿಡ್ಜ್ ಮೇಲೆ ನಿಲ್ಲಿಸಿದರು. ಬಳಿಕ ನನ್ನ ಫೋನ್ ಕಿತ್ತುಕೊಂಡಿದ್ದು, ವಾಹನದಲ್ಲಿದ್ದ ಹಣ ತಮ್ಮ ಕಾರಿಗೆ ಶಿಫ್ಟ್ ಮಾಡಿಕೊಂಡು ಹೋಗಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅತಿದೊಡ್ಡ ಕಳ್ಳತನ: ಹಾಡಹಗಲೇ ATM ವಾಹನ ಹೈಜಾಕ್, 7.11 ಕೋಟಿ ರೂ. ದರೋಡೆ

ದರೋಡೆಕೋರರ ಪತ್ತೆಗಾಗಿ ತಂಡ ರಚನೆ

ಬೆಂಗಳೂರಿನಲ್ಲಿ ಅತಿದೊಡ್ಡ ದರೋಡೆ ಪ್ರಕರಣ ಇದಾಗಿದೆ. ಇದರಿಂದ ಪಡೆದುಕೊಂಡಿದ್ದು, ಗೃಹ ಸಚಿವ ಪರಮೇಶ್ವರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಹೀಗಾಗಿ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ದರೋಡೆಕೋರರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸಿದ್ದು, ಡಿಸಿಪಿ ಲೋಕೇಶ್ ಜಗಲಾಸರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ದರೋಡೆಕೋರರ ಪತ್ತೆಗಾಗಿ ಬೆಂಗಳೂರು ನಗರದಾದ್ಯಂತ ನಾಕಾಬಂಧಿ ಹಾಕಲಾಗಿದೆ. ಗಡಿಪ್ರದೇಶದಲ್ಲಿ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.

ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ಪ್ರಕರಣದ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಪ್ರತಿಕ್ರಿಯಿಸಿ, ಕಳ್ಳರನ್ನು ನಾವು ಖಂಡಿತಾ ಹಿಡಿಯುತ್ತೇವೆ. ಈಗಲಷ್ಟೇ ಪ್ರಕರಣದ ಲೀಡ್‌ ಸಿಕ್ಕಿದೆ. ಇದಕ್ಕೆ ಮೂಲ ಕಾರಣ ಯಾರು? ಎಟಿಎಂಗೆ ಹಣ ತಂದು ಹಾಕುವ ಮಾಹಿತಿ ಕೊಟ್ಟಿದ್ದು ಯಾರು? ಹಣ ಹಾಕುವವರಲ್ಲಿ ಯಾರಾದರೂ ಇದ್ದಾರೋ, ಇಲ್ಲವೋ ಅನ್ನೋದು ಗೊತ್ತಿಲ್ಲ. ಈಗಗಷ್ಟೇ ಲೀಡ್ ಸಿಕ್ಕಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 7 ಕೋಟಿ. ರೂ. ದರೋಡೆ: ಕೆಲ ಶಂಕಿತರ ಫೋಟೋಗಳು ಟಿವಿ9ಗೆ ಲಭ್ಯ

ಆರೋಪಿಗೂ ಬಂದಿರುವ ಕಾರಿನಲ್ಲಿಯೇ ಹಣ ತೆಗೆದುಕೊಂಡು ಹೋಗಿದ್ದಾರೆ. ಕೆಲವು ಮಾಹಿತಿ ಸಿಕ್ಕಿದೆ, ಅದೆಲ್ಲವನ್ನೂ ಹೇಳಲು ಆಗಲ್ಲ. ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಖಂಡಿತವಾಗಿ ಅವರನ್ನು ಹಿಡಿದಾಕುತ್ತೇವೆ. ವೆಹಿಕಲ್ ನಂಬರ್ ಎಲ್ಲ ಮಾಹಿತಿ ಸಿಕ್ಕಿದೆ. ಬೆಂಗಳೂರಿನಲ್ಲಿ ಇಂತಹ ಘಟನೆ ಹಾಡುಹಗಲಲ್ಲೇ ನಡೆದಿಲ್ಲ. ಏಳು‌ ಕೋಟಿಗೂ ಹೆಚ್ಚು ಮೊತ್ತದ ಹಣ ರಾಬರಿಯಾಗಿದೆ. ಕಳ್ಳರು ಇಲ್ಲಿಯವರಾ? ಹೊರ ರಾಜ್ಯದ ವ್ಯಕ್ತಿಗಳಾ ಅನ್ನೋದು ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ಫ್ಲೈ ಓವರ್‌ ಮೇಲೆಯೇ ಗಾಡಿ ನಿಲ್ಲಿಸಿದ್ದೇಕೆ?

ಖದೀಮರು ಪಕ್ಕಾ ಪ್ಲ್ಯಾನ್ ಮಾಡಿ ಈ ದರೋಡೆ ಮಾಡಿದ್ದಾರೆ. ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದರೋಡೆ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಇಲ್ಲ ಎನ್ನಲಾಗಿದೆ. ಹೀಗಾಗಿ ಅಲ್ಲೇ ಕಾರು ನಿಲ್ಲಿಸಿದ್ದು, ಅದಾದ ನಂತರ ಬೇರೆ ಕಾರಿನಲ್ಲಿ ಬಂದ ಮೂವರು ದರೋಡೆಕೋರರ ಜತೆಗೆ ಮಾತುಕತೆ ಮಾಡಿದ್ದಾನೆ. ಅದಾದ ನಂತರ ಎಟಿಎಂ ವಾಹನವನ್ನು ಕಾರು ಫಾಲೋ ಮಾಡಿದೆ. ಡೈರಿ ಸರ್ಕಲ್ ಫ್ಲೈ ಓವರ್‌ ಮೇಲೆ ಎಟಿಎಂ ವಾಹನ ನಿಲ್ಲಿಸಿ ಬಳಿಕ ಅದರಲ್ಲಿದ್ದ ಬರೋಬ್ಬರಿ 7.11 ಕೋಟಿ ರೂ. ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಇನ್ನು ಘಟನೆ ನಡೆದು 45 ನಿಮಿಷದಿಂದ 1 ಗಂಟೆ ತಡವಾಗಿ ಪೊಲೀಸರಿಗೆ ಮಾಹಿತಿ ತಲುಪಿಸಿರುವುದು ಕೂಡ ಹಲವು ಅನುಮಾನ ಹುಟ್ಟಿಸಿದೆ.

ಶಂಕಿತರ ಫೋಟೋ ಬಿಡುಗಡೆ

ಬೆಂಗಳೂರಿನಲ್ಲಿ ಹಾಡಹಾಗಲೇ ಕೋಟಿ ಕೋಟಿ ದರೋಡೆ ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ಶಂಕಿತರ ಫೋಟೋ ಬಿಡುಗಡೆ ಮಾಡಿದೆ. ಇನ್ನೋವಾ ಕಾರಿನಲ್ಲಿ ಬಂದ ಆರೋಪಿಗಳ ಪತ್ತೆಗೆ ಖಾಕಿ ಹೈ ಅಲರ್ಟ್ ಆಗಿದ್ದು, ಪ್ರಾಥಮಿಕ ಮಾಹಿತಿ ಅನುನಾರ ಒಟ್ಟು 6 ಮಂದಿ ಆರೋಪಿಗಳ ಪೋಟೋ ಬಿಡುಗಡೆ ಮಾಡಿದೆ. ಹಳೆ ಆರೋಪಿಗಳು ಹಾಗು ಕೆಲ ಶಂಕಿತರ ಫೋಟೋ ಬಿಡುಗಡೆ ಮಾಡಲಾಗಿದ್ದು, ನಾಕ ಬಂದಿಯಲ್ಲಿ ಈ ಫೋಟೋ ದಲ್ಲಿರೋ ವ್ಯಕ್ತಿಗಳ ಫೋಟೋ ಮ್ಯಾಚ್ ಮಾಡುವಂತೆ ಎಲ್ಲಾ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ದರೋಡೆಕೋರರ KA 03 NC 8052 ಕಾರಿನ ಡಿಟೇಲ್ಸ್

ಬೆಂಗಳೂರು ಪೂರ್ವ(ಇಂದಿರಾನಗರ) RTO ಕಚೇರಿಯಲ್ಲಿ ನೊಂದಣಿ. ಜನವರಿ 2018 ರಲ್ಲಿ ಈ ಕಾರು ನೊಂದಣಿಯಾಗಿದೆ. ದರೋಡೆ ಮಾಡೋಕೆ ಅಂತಾನೆ ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಲಾಗಿದೆ. ದರೋಡೆ ಮಾಡಿ ಪರಾರಿಯಾಗುವಾಗ ಸಿಕ್ಕಿಕೊಳ್ಳಬಾರದೆಂದು ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿದ್ದಾರೆ. ಸ್ವಿಫ್ಟ್ ಕಾರಿನ ನಂಬರ್ ಪ್ಲೇಟ್ ಅನ್ನು ಇನ್ನೋವಾ ಕಾರಿಗೆ ಬಳಕೆ ಮಾಡಲಾಗಿದೆ. ಪಿ.ಬಿ. ಗಂಗಾಧರನ್ ಅವರ ಹೆಸರಿನಲ್ಲಿ ಕಾರು ನೊಂದಣಿಯಾಗಿದೆ. ಬೆಂಗಳೂರಿನ ತಿಪ್ಪಸಂದ್ರ ವಿಳಾಸದಲ್ಲಿ ನೊಂದಣಿಯಾಗಿರುವ ಕಾರನ್ನು ಗರುಡಾ ಆಟೋ ಕ್ರಾಫ್ಟ್ ಲಿಮಿಟೆಡ್ ಶೋರೂಂನಿಂದ ಖರೀದಿ ಮಾಡಲಾಗಿದೆ. ಸ್ವಿಫ್ಟ್ VDI ಮಾಡೆಲ್ ನ ಸ್ವಿಫ್ಟ್ ಕಾರು. ಸಿಲ್ಕೀ ಬಣ್ಣದ ಭಾರತ್ ಸ್ಟೇಜ್ 4 ರ ಕಾರು. ಕಾರ್ ಮೇಲೆ‌ ಗೌರ್ಮೆಂಟ್ ಆಫ್ ಇಂಡಿಯಾ ಅಂತ ಬರೆಯಲಾಗಿದೆ.

35 ನಿಮಿಷ ತಡವಾಗಿ ಮಾಹಿತಿ ನೀಡಿದ್ದ ಸಿಬ್ಬಂದಿ

12:35 ಕ್ಕೆ ಸಿಎಂಎಸ್ ವೆಹಿಕಲ್ ‌ನಿಂದ ಹಣ ದೋಚಿಕೊಂಡು ಹೋಗಲಾಗಿದೆ. ಆ ವೇಳೆ ಸಿಎಂಎಸ್ ಡೃವರ್ ಬಿನೋದ್ ಸ್ಥಳದಲ್ಲಿದ್ದ. ಉಳಿದ ಮೂವರನ್ನ ಬೇರೆ ಕಾರಿನಲ್ಲಿ ಕರೆದೊಯ್ಯಲಾಗಿತ್ತು. ಬಳಿಕ ಒಬ್ಬೊಬ್ಬರನ್ನು ಒಂದೊಂದು ಕಡೆ ಇಳಿಸಿದ್ದ ದರೋಡೆಕೋರರು, ನಾಲ್ವರ ಬಳಿಯೂ ಮೊಬೈಲ್ ಕಸಿದುಕೊಂಡಿದ್ದರು. ನಂತರ ಅಫ್ತಾಬ್, ಮಧ್ಯಾಹ್ನ 1:16 ನಿಮಿಷಕ್ಕೆ ಕಚೇರಿಗೆ ಕರೆ ಮಾಡಿ ನಮ್ಮನ್ನು RBI ನವರು ಅಡ್ಡ ಹಾಕಿದ್ದಾರೆ. ರೂಲ್ಸ್ ಬ್ರೇಕ್ ಮಾಡಿದ್ದೇವೆ ಎಂದು ಹಣದ ಸಮೇತ ಗಾಡಿ ತೆಗೆದುಕೊಂಡು ಹೋಗಿದ್ದಾರೆ. ಡ್ರೈವರ್ ಗೆ ಈಗ ಕರೆ ಮಾಡಿದ್ರೆ ರಿಸಿವ್ ಮಾಡುತ್ತಿಲ್ಲ. ನನ್ನನ್ನ ಇಲ್ಲೆ ಇಳಿಸಿ ಹೋಗಿದ್ದಾರೆ ಎಂದು ಹೇಳಿದ್ದರು. ಆಗಲೇ ಬ್ಯಾಂಕ್ ಮಾನೇಜರ್​​ ಗೊತ್ತಾಗಿದ್ದು ಎಟಿಎಂ ಹಣ ರಾಬರಿ ಮಾಡಲಾಗಿದೆ ಎಂದು. ಆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸಿಎಂಎಸ್‌ ಏಜೆನ್ಸಿ ಅಧಿಕಾರಿ ಹೇಳಿದ್ದಿಷ್ಟು

ಘಟನಾ ಸ್ಥಳದಲ್ಲಿ ಸಿಎಂಎಸ್‌ ಏಜೆನ್ಸಿ ಅಧಿಕಾರಿ ನಟರಾಜ್‌ ಪ್ರತಿಕ್ರಿಯಿಸಿದ್ದು. ಸಿಎಂಎಸ್‌ ಏಜೆನ್ಸಿ ವಾಹನದಲ್ಲಿದ್ದ ಎಲ್ಲಾ ನಗದು ದರೋಡೆ ಮಾಡಿದ್ದಾರೆ. ಮಧ್ಯಾಹ್ನ 12.30ರಿಂದ 1 ಗಂಟೆಯೊಳಗೆ ದರೋಡೆ ನಡೆದಿದೆ. ಸಿಎಂಎಸ್‌ ಏಜೆನ್ಸಿ ವಾಹನಕ್ಕೆ ಜಿಪಿಎಸ್‌ ವ್ಯವಸ್ಥೆ ಇದೆ. CMS ಏಜೆನ್ಸಿ ಸಿಬ್ಬಂದಿ ಭಾಗಿ ಬಗ್ಗೆ ಗೊತ್ತಿಲ್ಲ, ತನಿಖೆಯಲ್ಲಿ ಗೊತ್ತಾಗುತ್ತೆ. ಮಧ್ಯಾಹ್ನ 12.21ಕ್ಕೆ ಜೆ.ಪಿ.ನಗರದ HDFC ಬ್ಯಾಂಕ್‌ನಿಂದ ಹಣ ತಗೊಂಡಿದ್ದು, ಗೋವಿಂದರಾಜಪುರ ಶಾಖೆಗೆ ಹಣ ತಲುಪಿಸಲು ಹೋಗುತ್ತಿದ್ದರು. ಇಬ್ಬರು ಗನ್ ಮ್ಯಾನ್, ಓರ್ವ ಚಾಲಕ, ಮತ್ತೋರ್ವ ಸಿಬ್ಬಂದಿ ಇದ್ದರು. ದರೋಡೆ ಬಳಿಕ ಮಧ್ಯಾಹ್ನ 1 ಗಂಟೆ ವೇಳೆಗೆ ಬ್ರ್ಯಾಂಚ್ ಮ್ಯಾನೇಜರ್‌ಗೆ ಕರೆ ಮಾಡಿದ್ದಾರೆ. ಬಳಿಕ ಡಿಜಿ ಕಂಟ್ರೋಲ್ ರೂಂಗೆ, ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಲಾಗಿದೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದರು.

ದರೋಡೆಕೋರರು ಮೊಬೈಲ್‌ ಕಸಿದುಕೊಂಡಿದ್ದರಿಂದ ಮಾಹಿತಿ ನೀಡೋದು ವಿಳಂಬವಾಗಿದೆ. ನಗದು ದರೋಡೆ ಮಾಡುವವರೆಗೂ ಸಿಬ್ಬಂದಿಗೆ ಮೊಬೈಲ್‌ ಕೊಟ್ಟಿರಲಿಲ್ಲ. ನಮಗೂ ಕೆಲ ಅನುಮಾನಗಳಿವೆ, ಸಿಬ್ಬಂದಿ 7-8 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಫುಲ್ ನಾಕಾಬಂಧಿ

ಬೆಚ್ಚಿಬೀಳಿಸುವ ದರೋಡೆ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ನಾಕಾಬಂಧಿ ಹಾಕಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ಮತ್ತು ಡಿಸಿಪಿಯಿಂದ ತನಿಖೆ ನಡೆಯುತ್ತಿದ್ದು, ಅವ್ರ ಬಳಿ ಇದ್ದ ಗನ್ ಯಾಕೆ ಬಳಕೆ ಮಾಡಿಲ್ಲ ಎನ್ನುವ ಪ್ರಶ್ನೆ ಇದೆ. ಈ ಎಲ್ಲಾ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ. ಸದ್ಯ ಚಾಲಕ, ಇಬ್ಬರು ಗನ್ ಮೆನ್ ಗಳು ಹಾಗೂ ಓರ್ವ ಹಣ ಡೆಪಾಸಿಟ್ ಮಾಡುವ ಸಿಬ್ಬಂದಿಯ ವಿಚಾರಣೆ ನಡೆಯುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂದಿಸ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಸಿಂಮತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Published On - 8:04 pm, Wed, 19 November 25