AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ಕೋಟಿ ದರೋಡೆ ಕೇಸ್​​ನ ಮಾಸ್ಟರ್​ಮೈಂಡ್​​ ಒಬ್ಬನಲ್ಲ, ಇಬ್ಬರು!: ಪೊಲೀಸಪ್ಪನ ಜೊತೆ ಸಿಎಂಎಸ್​​ ಮಾಜಿ ಉದ್ಯೋಗಿಯೂ ಲಾಕ್​​

ಬೆಂಗಳೂರಿನಲ್ಲಿ ನಡೆದ 7 ಕೋಟಿ ರೂ. ದರೋಡೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಮಾತ್ರವಲ್ಲದೆ CMS ಸಂಸ್ಥೆಯ ಮಾಜಿ ಉದ್ಯೋಗಿ ಕೂಡ ದರೋಡೆಯ ಹಿಂದಿನ ಪ್ರಮುಖ ರೂವಾರಿ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ದರೋಡೆ ಸ್ಥಳಕ್ಕೆ ತೆರಳದಿದ್ದರೂ, ಸಂಪೂರ್ಣ ಪ್ಲ್ಯಾನ್​ ಇವರದ್ದೇ ಆಗಿತ್ತು. ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

7 ಕೋಟಿ ದರೋಡೆ ಕೇಸ್​​ನ ಮಾಸ್ಟರ್​ಮೈಂಡ್​​ ಒಬ್ಬನಲ್ಲ, ಇಬ್ಬರು!: ಪೊಲೀಸಪ್ಪನ ಜೊತೆ ಸಿಎಂಎಸ್​​ ಮಾಜಿ ಉದ್ಯೋಗಿಯೂ ಲಾಕ್​​
ಬಂಧಿತ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಮತ್ತು ವಶಪಡಿಸಿಕೊಳ್ಳಲಾದ ಕಾರು.
ಪ್ರಸನ್ನ ಹೆಗಡೆ
|

Updated on: Nov 21, 2025 | 11:43 AM

Share

ಬೆಂಗಳೂರು, ನವೆಂಬರ್​​ 21: ಎಟಿಎಂಗೆ ಹಣ ಪೂರೈಸುತ್ತಿದ್ದ ವಾಹನ ಅಡ್ಡಗಟ್ಟಿ ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿಗಳನ್ನ ಗ್ಯಾಂಗ್​​ ದರೋಡೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್​​ ಸಿಗುತ್ತಿದೆ. ಪೊಲೀಸ್​​ ಕಾನ್ಸ್‌ಟೇಬಲ್ ಓರ್ವನೇ ಪ್ರಕರಣದ ಮಾಸ್ಟರ್​ಮೈಂಡ್​​ ಎಂದು ಹೇಳಲಾಗಿದ್ದು, ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಎಂಬವರನ್ನು ದಕ್ಷಿಣ ವಿಭಾಗದ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಈ ನಡುವೆ ಕೇಸ್​​ಗೆ ಮತ್ತೊಂದು ರೋಚಕ ತಿರುವು ಸಿಕ್ಕಿದೆ.

ದರೋಡೆ ಗ್ಯಾಂಗ್​​ ಹಿಂದೆ ಇದ್ದಿದ್ದು ಪೊಲೀಸ್​​ ಕಾನ್ಸ್‌ಟೇಬಲ್ ಮಾತ್ರವಲ್ಲ ಬದಲಾಗಿ ಸಿಎಂಎಸ್ ಮಾಜಿ ಉದ್ಯೋಗಿಯೂ ಕೃತ್ಯಕ್ಕೆ ಸಾಥ್​​ ನೀಡಿದ್ದ ಎಂಬ ವಿಚಾರ ಪೊಲೀಸರ ತನಿಖೆವೇಳೆ ಬಯಲಾಗಿದೆ. ಹೀಗಾಗಿ ಸಿಎಂಎಸ್​​ನಲ್ಲಿ ಈ ಹಿಂದೆ ಕೆಲಸಮಾಡಿದ್ದ ಝೇವಿಯರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಒಂದು ವರ್ಷದ ಹಿಂದೆ ಸಿಎಂಎಸ್​​ನಿಂದ ಕೆಲಸ ಬಿಟ್ಟಿದ್ದ ಎಂಬುದು ಗೊತ್ತಾಗಿದೆ. ಇತ್ತ ಬಾಣಸವಾಡಿಯಲ್ಲಿ ಕ್ರೈಂ ಬೀಟ್ ಮಾಡುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪನನ್ನು ​​ ಹೊಯ್ಸಳಕ್ಕೆ ವರ್ಗಾಯಿಸಲಾಗಿತ್ತು. ಮಾಡಲು ಕೆಲಸವಿಲ್ಲದೆ ಅಣ್ಣಪ್ಪ ಮತ್ತು ಝೇವಿಯರ್​ ಇಬ್ಬರೂ ಪ್ರತಿದಿನ ಮೀಟಿಂಗ್ ಮಾಡುತ್ತಿದ್ದರು. ಈ ವೇಳೆ ಸಿಎಂಎಎಸ್​ನ ಹಣ ರವಾನೆಯ ಎಲ್ಲಾ ವಿಚಾರವನ್ನ ಅಣ್ಣಪ್ಪ ಬಳಿ ಝೇವಿಯರ್​ ಹೇಳಿಕೊಂಡಿದ್ದ. ಹಣ ದರೋಡೆಗೆ ಆರೋಪಿಗಳು ಯೋಚಿಸಿದ್ದು, ಸಿಎಂಎಸ್​​ ಪ್ಲ್ಯಾನ್​​ ನಂದು, ಎಸ್ಕೇಪ್​ ಪ್ಲ್ಯಾನ್​ ನಿಂದು ಎಂದು ಝೇವಿಯರ್​​ ಅಣ್ಣಪ್ಪಗೆ ತಿಳಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: 7 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಕಾನ್ಸ್‌ಟೇಬಲ್ ಬಂಧನ, ಪೊಲೀಸಪ್ಪನೇ ಮಾಸ್ಟರ್‌ಮೈಂಡ್!

ಅವರ ಪ್ಲ್ಯಾನ್​​ನಂತೆ ಹಣ ಸಾಗಿಸುತ್ತಿದ್ದ ವಾಹನ ತಡೆದು 7 ಕೋಟಿ 11 ಲಕ್ಷ ಹಣವನ್ನು ಗ್ಯಾಂಗ್​​ ದೋಚಿ ಪರಾರಿಯಾಗಿದೆ. ಆದರೆ ದರೋಡೆ ಸಂದರ್ಭ ಪ್ರಕರಣದ ಮಾಸ್ಟರ್​​ ಮೈಂಡ್​ಗಳಾದ ಝೇವಿಯರ್ ಮತ್ತು ಅಣ್ಣಪ್ಪ ಇಬ್ಬರೂ ಸ್ಪಾಟ್​​ ಹೋಗಿರಲಿಲ್ಲ. ಬದಲಾಗಿ ದರೋಡೆ ಹೇಗೆ ಮಾಡಬೇಕು, ಹೇಗೆ ಎಸ್ಕೇಪ್​ ಆಗಬೇಕು ಎಂಬ ಪಕ್ಕಾ ರೂಟ್​​ ಪ್ಲ್ಯಾನ್​​ ಮಾಡಿಕೊಟ್ಟು ಕಾದು ಕುಳಿತಿದ್ದರು ಎಂಬುದು ಪೊಲೀಸರ ತನಿಖೆವೇಳೆ ಗೊತ್ತಾಗಿದೆ. ಪ್ರಕರಣ ಸಂಬಂಧ ಸದ್ಯ ಝೇವಿಯರ್ ಮತ್ತು ಕಾನ್ಸ್‌ಟೇಬಲ್ ಅಣ್ಣಪ್ಪನನ್ನ ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.  ಹಣ ದೋಚಿದವರು ಎಲ್ಲಿಗೆ ಹೋಗಿದ್ದಾರೆ? ಹಣ ಎಲ್ಲಿದೆ ಎಂಬುದರ ಬಗ್ಗೆಯೂ ನಾಲ್ವರು ಜಂಟಿ ಪೊಲೀಸ್ ಆಯುಕ್ತರು, 18 ಡಿಸಿಪಿಗಳ ನೇತೃತ್ವದಲ್ಲಿ ಹುಟುಕಾಟ ನಡೆಸಲಾಗುತ್ತಿದೆ.

ವರದಿ- ವಿಕಾಸ್​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.