ಕಾಂಗ್ರೆಸ್ ಪಾಳಯದಲ್ಲಿ ಕ್ಷಿಪ್ರ ಕ್ರಾಂತಿ: ಶಾಸಕರ ದೆಹಲಿ ದಂಡಯಾತ್ರೆ, ಡಿಕೆ ಶಿವಕುಮಾರ್ ತಂತ್ರಗಾರಿಕೆ ಏನು?
ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ರಾಜಕೀಯ ಸಂಘರ್ಷ ತೀವ್ರಗೊಂಡಿದೆ. ಡಿಕೆಶಿ ಆಪ್ತ ಶಾಸಕರು ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿ ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ನೀಡಲು ಒತ್ತಡ ಹೇರಿದ್ದಾರೆ. ಸಿದ್ದರಾಮಯ್ಯ ಬಣವೂ ಸಕ್ರಿಯವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಬೆಂಗಳೂರು, ನವೆಂಬರ್ 21: ಕರ್ನಾಟಕ ಕಾಂಗ್ರೆಸ್ (Congress) ರಾಜಕೀಯದಲ್ಲಿ ಅತಿದೊಡ್ಡ ಕ್ಷಿಪ್ರ ಕ್ರಾಂತಿಯಾಗುವ ಸಾಧ್ಯತೆ ಗೋಚರಿಸಿದೆ. ಏನೂ ಇಲ್ಲ, ಏನೂ ಇಲ್ಲ ಎನ್ನುತ್ತಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬಣಗಳು ದಾಳ ಉರುಳಿಸುತ್ತಿವೆ. ಗುರುವಾರ ಏಕಾಏಕಿ ದೆಹಲಿಗೆ ತೆರಳಿರುವ ಡಿಕೆ ಶಿವಕುಮಾರ್ ಬಣ ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದೆ. ಡಿಸಿಎಂ ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಿದೆ.
ಹೈಕಮಾಂಡ್‌ಗೆ ಡಿಕೆ ಶಿವಕುಮಾರ್ ಬಣದಿಂದ ಒತ್ತಡ
ಡಿಕೆ ಶಿವಕುಮಾರ್ ಆಪ್ತ ಶಾಸಕರು ದೆಹಲಿ ದಂಡಯಾತ್ರೆ ನಡೆಸಿದ್ದಾರೆ. ದೆಹಲಿಯಲ್ಲಿ ಬೀಡುಬಿಟ್ಟಿರುವ ಡಿಸಿಎಂ ಡಿಕೆಶಿ ಆಪ್ತ ಶಾಸಕರಾದ ಕುಣಿಗಲ್ ಶಾಸಕ ರಂಗನಾಥ್, ಗುಬ್ಬಿ ಶಾಸಕ ಎಸ್.ಆರ್ ವಿಶ್ವನಾಥ್, ಆನೇಕಲ್ ಶಾಸಕ ಶಿವಣ್ಣ, ನೆಲಮಂಗಲ ಶಾಸಕ ಶ್ರೀನಿವಾಸ್, ಶೃಂಗೇರಿ ಶಾಸಕ ರಾಜೇಗೌಡ, ಹೊಸಕೋಟೆ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ದೆಹಲಿಯಲ್ಲಿ ಖರ್ಗೆಯವರನ್ನು ಭೇಟಿ ಮಾಡಿದ್ದಾರೆ. ಡಿಸಿಎಂ ಡಿಕೆಗೆ ಸಿಎಂ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಶಾಸಕ ರಾಜೇಗೌಡ, ಹೈಕಮಾಂಡ್ ಗಟ್ಟಿಯಾಗಿದೆ ಎಂದಿದ್ದಾರೆ.
ಡಿಕೆ ಶಿವಕುಮಾರ್ ಸೂಚನೆಯಂತೆಯೇ ದೆಹಲಿ ದಂಡಯಾತ್ರೆ?
ಎರಡೂವರೆ ವರ್ಷದ ನಿರ್ಣಾಯಕ ದಿನವೇ ದೆಹಲಿ ಪರೇಡ್ ನಡೆಸಿರುವ ಡಿಕೆ ಶಿವಕುಮಾರ್ ಬೆಂಬಲಿಗರು ಪವರ್ ಶೋ ನಡೆಸಿದ್ದಾರೆ. ನವೆಂಬರ್ 20ರವರೆಗೆ ಒಂದು ಲೆಕ್ಕ, 21ರವರೆಗೂ ಇನ್ನೊಂದು ಲೆಕ್ಕ. ಹೀಗಾಗಿ ನವೆಂಬರ್ 20ರತನಕ ಮೌನವಾಗಿರುವಂತೆ ಆಪ್ತರಿಗೆ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದರು ಎನ್ನಲಾಗಿದೆ.
ಆಪ್ತರನ್ನ ಡಿಕೆ ಶಿವಕುಮಾರ್ ಬಾಯಿ ಮುಚ್ಚಿಸಿದ್ದರು. ಆದರೆ ಈಗ ಎರಡೂವರೆ ವರ್ಷ ಡೆಡ್‌ಲೈನ್ ಮುಗಿಯುತ್ತಿದ್ದಂತೆಯೇ ಡಿಕೆ ದಾಳ ಉರುಳಿಸಿದ್ದಾರೆ ಎಂಬುದಾಗಿ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಡಿಕೆ ಶಿವಕುಮಾರ್ ತಂತ್ರಗಾರಿಕೆ ಏನು?
ನವೆಂಬರ್ 21ರಂದು ಬದಲಾವಣೆ ಚರ್ಚೆಯಾಗಬಹುದೆಂದು ಡಿಕೆ ಶಿವಕುಮಾರ್ ಭಾವಿಸಿದ್ದರು ಎನ್ನಲಾಗಿದೆ. ಆದರೆ, ಬಿಹಾರ ಚುನಾವಣೆಯಲ್ಲಿ ಹಿನ್ನಡೆಯಾದ ಕಾರಣ ಎಐಸಿಸಿ ಕುಗ್ಗಿ ಹೋಗಿದೆ. ಹೀಗಾಗಿ ಕರ್ನಾಟಕದ ಬಗ್ಗೆ ತಲೆಕೆಡಿಸಿಕೊಳ್ಳಲು ಹೈಕಮಾಂಡ್ ಹಿಂದೇಟು ಹಾಕಿದೆ. ಯಾವುದೇ ಚರ್ಚೆಗೂ ವೇದಿಕೆಯನ್ನು ಹೈಕಮಾಂಡ್ ಕಲ್ಪಿಸಿಲ್ಲ. ಎರಡು ದಿನ ಕಾದರೂ ರಾಹುಲ್ ಭೇಟಿ ಸಾಧ್ಯವಾಗದೇ ಡಿಕೆ ಶಿವಕುಮಾರ್ ಬರಿಗೈನಲ್ಲಿ ವಾಪಸ್ ಆಗಿದ್ದಾರೆ. ಸುಮ್ಮನಿದ್ದರೆ ಹೈಕಮಾಂಡ್ ಈ ವಿಷಯದ ಬಗ್ಗೆ ಗಮನ ಹರಿಸಲ್ಲ ಎಂಬುದನ್ನು ಅರಿತಿರುವ ಡಿಕೆ ಶಿವಕುಮಾರ್ ಹೊಸ ದಾಳ ಉರುಳಿಸಿದ್ದಾರೆ ಎನ್ನಲಾಗುತ್ತಿದೆ. ಶಾಸಕರ ದಂಡಯಾತ್ರೆ ಮೂಲಕ ವರಿಷ್ಠರ ಗಮನ ಸೆಳೆಯುವ ಯತ್ನಕ್ಕೆ ಮುಂದಾಗಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಅಧಿಕಾರ ಹಂಚಿಕೆ ಚರ್ಚೆ ಕೈಗೆತ್ತಿಕೊಳ್ಳಲಿ ಎಂದು ಬಯಸಿರುವ ಡಿಕೆಶಿ, ಹೈಕಮಾಂಡ್ ಮಟ್ಟದಲ್ಲೇ ಪವರ್ ಶೇರಿಂಗ್ ಚರ್ಚೆ ಆಗಲಿ, ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಮಾತುಕತೆಗೆ ಮುಂದಾಗಲಿ ಎಂದು ದಾಳ ಉರುಳಿಸಿದ್ದಾರೆ ಎನ್ನಲಾಗುತ್ತಿದೆ.
ಇಷ್ಟೇ ಅಲ್ಲ, ಡಿಕೆ ಶಿವಕುಮಾರ್ ಅವರ ಮತ್ತಷ್ಟು ಆಪ್ತರು ದೆಹಲಿಗೆ ಪ್ರಯಾಣ ಬೆಳೆಸಲು ಪ್ಲ್ಯಾನ್ ಮಾಡಿದ್ದಾರೆ. ಡಿಕೆಶಿ ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿದ್ದಾರೆ. ಎರಡು ದಿನಗಳ ಕಾಲ ದೆಹಲಿಯಲ್ಲಿ ಠಿಕಾಣಿ ಹೂಡಿ, ಹೈಕಮಾಂಡ್ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ. ಆದರೆ, ಇದ್ಯಾವ ಗುಟ್ಟನ್ನ ಬಿಟ್ಟು ಕೊಡದ ಡಿಕೆಶಿ, ‘ನನಗೇನೂ ಗೊತ್ತಿಲ್ಲ’ ಎಂದಿದ್ದಾರೆ.
ಈ ಬೆಳವಣಿಗೆ ಮಧ್ಯೆ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಡಿಕೆ ಸುರೇಶ್ ಆಗಮಿಸಿದ್ದಾರೆ. ಅತ್ತ ಡಿಕೆ ಬಣ ದೆಹಲಿಯಲ್ಲಿ ಠಿಕಾಣಿ ಹೂಡಿದ್ದರೆ, ಇತ್ತ ಸದಾಶಿವನಗರದ ಮನೆಯ ಬಾಲ್ಕನಿಯಲ್ಲಿ ಡಿಕೆ ಶಿವಕುಮಾರ್ ಅತ್ತಿಂದಿತ್ತ ಓಡಾಡುತ್ತಿದ್ದಾರೆ.
ಹೈಕಮಾಂಡ್ ಮಧ್ಯಪ್ರವೇಶಿಸಬೇಕು, ಶಾಸಕಾಂಗ ಸಭೆ ಕರೆಯಬೇಕೆಂದ ಬಾಲಕೃಷ್ಣ
ಶಾಸಕರ ದೆಹಲಿ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ ಆಪ್ತ ಶಾಸಕ ಹೆಚ್ಸಿ ಬಾಲಕೃಷ್ಣ, ಶಾಸಕರು ಯಾಕೆ ದೆಹಲಿಗೆ ಹೋಗಿದ್ದಾರೋ ಗೊತ್ತಿಲ್ಲ. ಆದರೆ, ಹೈಕಮಾಂಡ್ ಮಧ್ಯಪ್ರವೇಶಿಸಬೇಕು. ಶಾಸಕಾಂಗ ಸಭೆಯನ್ನಾದರೂ ಕರೆಯಬೇಕು ಎಂದಿದ್ದಾರೆ.
ಚಲುವರಾಯಸ್ವಾಮಿಗೆ ಸಿದ್ದರಾಮಯ್ಯ ಕರೆ
ಇದೆಲ್ಲದರ ಮಧ್ಯೆ ಸಚಿವ ಚಲುವರಾಯಸ್ವಾಮಿ ಕೂಡಾ ದೆಹಲಿಗೆ ತೆರಳಿದ್ದಾರೆ. ಹೀಗಾಗಿ ಚಲುವರಾಯಸ್ವಾಮಿಗೆ ಕರೆ ಮಾಡಿರುವ ಸಿಎಂ, ‘ದೆಹಲಿಗೆ ಹೋಗಿದ್ದೀಯಾ’ ಎಂದು ಪ್ರಶ್ನಿಸಿದ್ದಾರೆ. ಹೌದು ಎಂದಿರುವ ಚಲುವರಾಯಸ್ವಾಮಿ, ಇಲಾಖೆ ಕೆಲಸ ಹಾಗೂ ಕೇಂದ್ರ ಸಚಿವರ ಭೇಟಿಗೆ ಬಂದಿದ್ದೆ ಎಂದಿದ್ದಾರೆ. ಹೈಕಮಾಂಡ್ ಭೇಟಿಗಲ್ಲ ಎಂದು ಚಲುವರಾಯಸ್ವಾಮಿ ಸಿಎಂಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿಗೆ ಡಿಕೆ ಶಿವಕುಮಾರ್ ಬೆಂಬಲಿಗರ ದೌಡು: ಕೆಎನ್ ರಾಜಣ್ಣ ಅಚ್ಚರಿ ಮಾತು! ಹೇಳಿದ್ದೇನು ನೋಡಿ
ಕೆಲ ಶಾಸಕರು ದೆಹಲಿಗೆ ದಿಡೀರ್ ಆಗಿ ಹೋಗಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ಕಂಪನ ಎಬ್ಬಿಸಿದೆ. ಸಿಎಂ ಸಿದ್ದರಾಮಯ್ಯ ಬಣ ಕೂಡಾ ಸಕ್ರಿಯವಾಗಿದ್ದು, ಸಭೆ ಸೇರಿದೆ. ಇನ್ನೇನಾಗುತ್ತದೆ ಎಂಬ ಕುತೂಹಲ ಮೂಡಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Fri, 21 November 25



