ಆರ್‌ಟಿಓ ಕಚೇರಿಗಳಲ್ಲಿ ನಿವೃತ್ತ ನೌಕರರ ಹಾವಳಿ, ಲಂಚ ವಸೂಲಿ ಆರೋಪ: ಸಾರಿಗೆ ಇಲಾಖೆ ಕಾರ್ಯದರ್ಶಿಗೆ ದೂರು

ಬೆಂಗಳೂರು ನಗರದ ಆರ್‌ಟಿಓ ಕಚೇರಿಗಳಲ್ಲಿ ನಿವೃತ್ತ ನೌಕರರನ್ನು ಅನಧಿಕೃತವಾಗಿ ಮರುನೇಮಕ ಮಾಡಿಕೊಂಡು, ಲಂಚ ಮತ್ತು ಹಫ್ತಾ ವಸೂಲಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಕರ್ನಾಟಕ ಚಾಲಕರ ಯೂನಿಯನ್ ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್​ಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಆರ್‌ಟಿಓ ಕಚೇರಿಗಳಲ್ಲಿ ನಿವೃತ್ತ ನೌಕರರ ಹಾವಳಿ, ಲಂಚ ವಸೂಲಿ ಆರೋಪ: ಸಾರಿಗೆ ಇಲಾಖೆ ಕಾರ್ಯದರ್ಶಿಗೆ ದೂರು
ಸಾಂದರ್ಭಿಕ ಚಿತ್ರ
Edited By:

Updated on: Oct 22, 2026 | 7:55 AM

ಮುಖ್ಯಾಂಶಗಳು

  • ಆರ್‌ಟಿಓ ಕಚೇರಿಗಳಲ್ಲಿ ನಿವೃತ್ತ ನೌಕರರ ಹಾವಳಿ ಆರೋಪ
  • ಲಂಚ ವಸೂಲಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ದೂರು
  • ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಕ್ರಮ ಕೈಗೊಳ್ಳಲು ಮನವಿ

ಬೆಂಗಳೂರು, ಅಕ್ಟೋಬರ್ 22: ನಗರದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಓ) ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾರಿಗೆ ಇಲಾಖೆಯಲ್ಲಿ ನಿವೃತ್ತರಾದ ಕೆಲವು ನೌಕರರನ್ನು ಆರ್‌ಟಿಓ ಅಧಿಕಾರಿಗಳು ಅನಧಿಕೃತವಾಗಿ ಮರುನೇಮಕ ಮಾಡಿಕೊಂಡು, ಅವರ ಮೂಲಕ ಲಂಚ ಮತ್ತು ಹಫ್ತಾ ವಸೂಲಿ ಮಾಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಈ ಸಂಬಂಧ ನಿವೃತ್ತ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಚಾಲಕರ ಯೂನಿಯನ್ ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಅವರಿಗೆ ದೂರು ನೀಡಿದೆ.

ನಿವೃತ್ತ ನೌಕರರಿಗೆ ಕಚೇರಿಗಳಲ್ಲೇ ಟೇಬಲ್, ಕ್ಯಾಬಿನ್ ವ್ಯವಸ್ಥೆ!

ಆರ್‌ಟಿಓ ಕಚೇರಿಗಳಲ್ಲಿ ನಿವೃತ್ತರಾದ ಡಿ ದರ್ಜೆ ನೌಕರರು ಮತ್ತು ಇತರ ಸಿಬ್ಬಂದಿಯನ್ನು ಅನಧಿಕೃತವಾಗಿ ಮತ್ತೆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಅಕ್ರಮ ಚಟುವಟಿಕೆಗಳಿಗಾಗಿ ನಿವೃತ್ತ ನೌಕರರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಅವರಿಗೆ ಕಚೇರಿಗಳಲ್ಲಿ ಟೇಬಲ್, ಕ್ಯಾಬಿನ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಆರ್‌ಟಿಓ ಕಮಿಷನರ್, ಹೆಚ್ಚುವರಿ ಕಮಿಷನರ್, ಅಪರ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳಲ್ಲಿ ನಿವೃತ್ತ ಡಿ ದರ್ಜೆ ನೌಕರರು ಮತ್ತು ಸಿಬ್ಬಂದಿಯನ್ನು ಅನಧಿಕೃತವಾಗಿ ಮರುನೇಮಕ ಮಾಡಿಕೊಳ್ಳಲಾಗಿದೆ ಎಂದು ಯೂನಿಯನ್ ದೂರಿನಲ್ಲಿ ಉಲ್ಲೇಖಿಸಿದೆ. ಕಚೇರಿಯ ಪೀಠೋಪಕರಣಗಳನ್ನು ಮುಕ್ತವಾಗಿ ಬಳಸಿಕೊಳ್ಳಲು ಅವರಿಗೆ ಅವಕಾಶ ನೀಡಲಾಗಿದೆ ಎಂದೂ ಆರೋಪಿಸಲಾಗಿದೆ.

ಲೋಕಾಯುಕ್ತ ದಾಳಿಯ ಬಳಿಕವೂ ಮುಂದುವರಿದಿದೆಯೇ ಅಕ್ರಮ?

ಈ ಹಿಂದೆ ಆರ್‌ಟಿಓ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳು ಸಿಕ್ಕಿಬಿದ್ದಿದ್ದರು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವು ಆರ್‌ಟಿಓ ಕಚೇರಿಗಳ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಸ್ಕ್ರಿಪ್ಟ್‌ನಲ್ಲಿ ತಿಳಿಸಲಾಗಿದೆ.

ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ನಿವೃತ್ತ ನೌಕರರನ್ನು ಅನಧಿಕೃತವಾಗಿ ಕಚೇರಿಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಾರಿಗೆ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳು ಆಗಬೇಕಾದರೆ ಲಂಚ ನೀಡಬೇಕಾದ ಪರಿಸ್ಥಿತಿ ಇದೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.

ನಿವೃತ್ತ ನೌಕರರಿಗೆ ಗೇಟ್‌ಪಾಸ್ ನೀಡಲು ಆಗ್ರಹ

ಆರ್‌ಟಿಓ ಅಧಿಕಾರಿಗಳು ಲಂಚ ವಸೂಲಿ ಮಾಡಲು ನಿವೃತ್ತ ನೌಕರರನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಚಾಲಕರ ಯೂನಿಯನ್ ಒತ್ತಾಯಿಸಿದೆ. ಅನಧಿಕೃತವಾಗಿ ಮರುನೇಮಕ ಮಾಡಿಕೊಂಡಿರುವ ನಿವೃತ್ತ ನೌಕರರನ್ನು ಕಚೇರಿಗಳಿಂದ ತೆರವುಗೊಳಿಸುವುದರ ಜೊತೆಗೆ, ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ಸಾರಿಗೆ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಆರ್‌ಟಿಓ ಕಚೇರಿಗಳಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us