ಅಡವಿಟ್ಟಾಗ ಅಸಲಿ, ಬ್ಯಾಂಕ್​​ನಿಂದ ಬಿಡಿಸಿಕೊಂಡಾಗ ನಕಲಿ ಚಿನ್ನ: SBI ಬ್ಯಾಂಕ್ನಿಂದ ಮೋಸ

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಎಸ್‌ಬಿಐ ಬ್ಯಾಂಕ್‌ನಲ್ಲಿ ಚಿನ್ನದ ಸಾಲ ಪಡೆದಿದ್ದ ದಂಪತಿಗೆ ಆಘಾತ ಎದುರಾಗಿದೆ. ಒಂದು ವರ್ಷದ ಹಿಂದೆ ಅಡವಿಟ್ಟಿದ್ದ ನಿಜವಾದ ಚಿನ್ನದ ಸರದ ಬದಲಿಗೆ ನಕಲಿ ಸರವನ್ನು ಬ್ಯಾಂಕ್ ಸಿಬ್ಬಂದಿ ಹಿಂದಿರುಗಿಸಿದ್ದಾರೆಂದು ಆರೋಪಿಸಲಾಗಿದೆ. ಮೈಸೂರಿನಲ್ಲಿ ಇತ್ತೀಚೆಗೆ ಇಂತಹದ್ದೊಂದು ಘಟನೆ ನಡೆದಿತ್ತು. ಪದೇ ಪದೇ ಈ ರೀತಿಯ ಘಟನೆಗಳಿಂದ ಬ್ಯಾಂಕ್​ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಅಡವಿಟ್ಟಾಗ ಅಸಲಿ, ಬ್ಯಾಂಕ್​​ನಿಂದ ಬಿಡಿಸಿಕೊಂಡಾಗ ನಕಲಿ ಚಿನ್ನ: SBI ಬ್ಯಾಂಕ್ನಿಂದ ಮೋಸ
ಗೋಲ್ಡ್ ಚೈನ್

Updated on: Jan 14, 2026 | 4:11 PM

ಬೆಂಗಳೂರು, ಜನವರಿ 14: ಇತ್ತೀಚೆಗೆ ಮೈಸೂರಿನಲ್ಲಿ ಕೆನರಾ ಬ್ಯಾಂಕ್​​ನಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ ಚಿನ್ನದಲ್ಲಿ ಮೋಸವೆಸಗಿದ್ದ ಆರೋಪ ಕೇಳಿಬಂದಿತ್ತು. ಇದೀಗ ಅಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ (bangaluru) ನಡೆದಿದೆ. ಅಡವಿಟ್ಟು ಬಿಡಿಸಿಕೊಂಡಿದ್ದ ಚಿನ್ನದ ಚೈನ್​ ಪರಿಶೀಲಿಸಿದಾಗ ನಕಲಿ ಎಂಬುವುದು ಪತ್ತೆ ಆಗಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ಎಸ್​​ಬಿಐ (SBI) ಶಾಖೆಯಲ್ಲಿ ಘಟನೆ ನಡೆದಿದ್ದು, ದಂಪತಿ ಮೋಸ ಹೋಗಿದ್ದಾರೆ. ಸದ್ಯ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನಡೆದದ್ದೇನು?

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ಎಸ್​​ಬಿಐ ಶಾಖೆಯಲ್ಲಿ 1 ವರ್ಷದ ಹಿಂದೆ ಮುಕೇಶ್ ಮತ್ತು ಪೂರ್ಣಿಮಾ ದಂಪತಿ ಚಿನ್ನದ ಚೈನ್ ಬ್ಯಾಂಕ್​ನಲ್ಲಿ ಅಡವಿಟ್ಟು 2 ಲಕ್ಷ ರೂ ಪಡೆದಿದ್ದರು. ಅಸಲು, ಬಡ್ಡಿ ಸೇರಿ ಪ್ರತಿ ತಿಂಗಳು 11,700 ರೂ. ಪಾವತಿಸುತ್ತಿದ್ದರು. ನಿನ್ನೆ ಸಾಲದ ಮೊತ್ತ ಸಂಪೂರ್ಣ ಪಾವತಿಸಿ ಚೈನ್ ಬಿಡಿಸಿಕೊಂಡಿದ್ದರು.

ಇದನ್ನೂ ಓದಿ: ಹುಣಸೂರು ಚಿನ್ನದಂಗಡಿ ಕಳ್ಳತನ: ಪೊಲೀಸ್ರು ಚಾಪೆ ಕೆಳಗೆ ನುಗ್ಗಿದ್ರೆ, ರಂಗೋಲಿ ಕೆಳಗಡೆ ತೂರಿದ ದರೋಡೆಕೋರರು

ದುಡ್ಡಿನ ಅವಶ್ಯಕತೆ ಹಿನ್ನೆಲೆ ದಂಪತಿ ಮಾರ್ವಾಡಿ ಅಂಗಡಿಗೆ ತೆರಳಿದ್ದಾರೆ. ಅಲ್ಲಿ ಪರಿಶೀಲನೆ ಮಾಡಿ ನೋಡಿದಾಗ ಅದು ನಕಲಿ ಚಿನ್ನ ಎಂಬುವುದು ಪತ್ತೆ ಆಗಿದೆ. ಒಂದು ಕ್ಷಣ ಆತಂಕಕ್ಕೆ ಒಳಗಾದ ದಂಪತಿ, ಕೂಡಲೇ ಮಹಾಲಕ್ಷ್ಮೀ ಲೇಔಟ್​ನ ಎಸ್​​ಬಿಐ ಶಾಖೆಗೆ ತೆರಳಿದ್ದಾರೆ. ಈ ಬಗ್ಗೆ ಬ್ಯಾಂಕ್​ನಲ್ಲಿ ಪ್ರಶ್ನಿಸಿದಾಗ ಸಿಬ್ಬಂದಿ ದಂಪತಿ ಆರೋಪ ನಿರಾಕರಿಸಿದ್ದು, ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಹೀಗಾಗಿ ಸದ್ಯ ದಂಪತಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಸ್​ನಲ್ಲಿ 22 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕದ್ದಿದ್ದ ಕಳ್ಳಿಯ ಬಂಧನ

ಕೆಎಸ್​​ಆರ್​​ಟಿಸಿ ಬಸ್​ನಲ್ಲಿ 22 ಲಕ್ಷ ರೂ. ಮೌಲ್ಯದ 240 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆಯನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಳಗವಾರ ಗ್ರಾಮದ ಮಹಿಳೆ ವನಜಾಕ್ಷಿ ಎಂಬುವವರು ದೇವಸ್ಥಾನಕ್ಕೆ ಹೋಗುವ ಸಲುವಾಗಿ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಕ್ರಾಸ್​ನಿಂದ ಸೂಲಿಬೆಲೆಗೆ ತೆರಳಲು ಬಸ್ ಹತ್ತುತ್ತಿದ್ದ ವೇಳೆ, ಚಿನ್ನಾಭರಣ ಕಳವು ಮಾಡಿದ್ದರು.

ಇದನ್ನೂ ಓದಿ: ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್: ಅದು ನಮ್ಮ ಬಂಗಾರ ವಾಪಸ್​ ನೀಡಿ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು, ಆಂಧ್ರ ಪ್ರದೇಶದ ಕುಪ್ಪಂ ಮೂಲದ ಮೀನಾಕ್ಷಿಯನ್ನ ಬಂಧಿಸಿದ್ದರು. ಬಂಧಿತ ಮಹಿಳೆಯಿಂದ 22 ಲಕ್ಷ ರೂ ಮೌಲ್ಯದ 240 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.

ವರದಿ: ನಟರಾಜ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:09 pm, Wed, 14 January 26