ಬೆಂಗಳೂರು: ಶಿವಾಜಿನಗರದ ಮತದಾರರ ಪಟ್ಟಿ ಡಿಲೀಟ್ ಪ್ರಕರಣ ಸಂಬಂಧ ಶಾಸಕ ರಿಜ್ವಾನ್ ಅರ್ಷದ್ (MLA Rizwan Arshad) ಅವರು ಮುಖ್ಯ ಚುನಾವಣಾಧಿಕಾರಿ ಮನೋಜ್ ಮೀನಾ (Manoj Meena) ಅವರಿಗೆ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. 9195 ಮತದಾರರ ಹೆಸರನ್ನ ಮತಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ ಎಂದು ಆರೋಪಿಸಿರುವ ಶಾಸಕ ರಿಜ್ವಾನ್, ಇದರಲ್ಲಿ 8000ಕ್ಕೂ ಹೆಚ್ಚು ಮತದಾರರು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದಯಕ್ಕೆ ಸೇರಿದವರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹೆಸರು ಡಿಲೀಟ್ ಆಗಿರುವ 9195 ಮಂದಿ ಮತದಾರರಿಗೂ ನೋಟಿಸ್ ನೀಡಿದ್ದಾರೆ. ಆದರೆ ಇವರೆಲ್ಲರೂ ಅನಕ್ಷರಸ್ಥರಾಗಿದ್ದು, ಈ ಮತದಾರರಿಗೆ ಮತಪಟ್ಟಿ ಸೇರ್ಪಡೆ ಹಾಗೂ ಅಳಿಸುವ ಬಗ್ಗೆ ಉತ್ತರ ನೀಡಲು ಗೊತ್ತಿಲ್ಲ. ಈಗಾಗಲೇ ಅಂತಿಮ ಮತಪಟ್ಟಿ ಪರಿಷ್ಕರಣೆ ಆಗಿದೆ. 17,000 ಮತದಾರರನ್ನ ಮತಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅಂತಿಮ ಪರಿಷ್ಕರಿಣೆ ನಂತರವೂ 9195 ಮಂದಿಗೆ ನೋಟಿಸ್ ನೀಡಲಾಗಿದೆ. ಅಂತಿಮ ಪಟ್ಟಿ ಪರಿಷ್ಕರಣೆ ಬಳಿಕ ನೋಟಿಸ್ ನೀಡಿರುವುದು ಚುನಾವಣಾ ತಂತ್ರಗಾರಿಕೆಯ ಪ್ರಯತ್ನವಾಗಿದೆ. ಹೀಗಾಗಿ ತಾವು ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ವೋಟರ್ ಐಡಿ ಪರಿಕ್ಷರಣೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮಧ್ಯವ್ರವೇಶಿಸಿ ಮತದಾರರ ಪಟ್ಟಿ ಪರಿಷ್ಕರಣೆ ದಿನಾಂಕವನ್ನು ಡಿಸೆಂಬರ್ 24 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿತ್ತು. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಇಲೆಕ್ಷನ್ ಕಮಿಷನ್ ಆಫ್ ಇಂಡಿಯಾ, ಶಿವಾಜಿನಗರ, ಚಿಕ್ಕಪೇಟೆ, ಮಹದೇವಪುರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಯ ಸಮಯಾವಕಾಶವನ್ನು ಹೆಚ್ಚಿಸಿತ್ತು.
ಇದನ್ನೂ ಓದಿ: ಸಿಡಿ ಷಡ್ಯಂತ್ರದಲ್ಲಿ ಡಿಕೆ ಶಿವಕುಮಾರ ಭಾಗಿ: ಶಾಸಕರು, ಅಧಿಕಾರಿಗಳ ಸೇರಿದಂತೆ 120 ಜನರ ಸಿಡಿಗಳಿವೆ- ರಮೇಶ ಜಾರಕಿಹೋಳಿ
ಚುನಾವಣಾ ಮತಪಟ್ಟಿ ಪರಿಷ್ಕರಣೆ ಪರಿಶೀಲನೆಗೆ ಬಿಬಿಎಂಪಿಯಿಂದ ಹೊರತಾದ ಇಬ್ಬರು ವಿಶೇಷಾಧಿಕಾರಿಗಳನ್ನು ನೇಮಕ ಮಾಡಿದ್ದರು. ಅನಧಿಕೃತವಾಗಿ, ನೇರವಾಗಿ, ಪರೋಕ್ಷವಾಗಿ ವೋಟರ್ ಐಡಿ ದಾಖಲೆಗಳ ಸಂಗ್ರಹ ಆಗಬಾರದು. ಮತದಾರರ ಪಟ್ಟಿಯನ್ನು 100 ಪ್ರತಿಶತದಷ್ಟು ಪರಿಷ್ಕರಣೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಬೆಂಗಳೂರು ನಗರದ ವಿವಿಧ ಕ್ಷೇತ್ರದಲ್ಲಿ ಸಾವಿರಾರು ಮತದಾರರ ಹೆಸರು ಡಿಲೀಟ್ ಆಗಿದ್ದವು. ಈ ಪೈಕಿ ಶಿವಾಜಿನಗರ ಕ್ಷೇತ್ರದಲ್ಲಿ 15 ಸಾವಿರಕ್ಕೂ ಹೆಚ್ಚು ಮತದಾರರ ಹೆಸರು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷಾದ್ ಕೂಡ ಆರೋಪಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Mon, 30 January 23