
ಬೆಂಗಳೂರು, ಅಕ್ಟೋಬರ್ 17): ಪ್ರೀತಿ ನಿರಾಕರಿಸಿದ್ದಕ್ಕೆ ಯಾಮಿನಿ ಪ್ರಿಯಾ ಎನ್ನುವ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ (Yamini Priya Murder Case) ಸಂಬಂಧಿಸಿದಂತೆ ಸೈಕೋ ಕಿಲ್ಲರ್ ವಿಘ್ನೇಶ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಗೈದು ಬಳಿಕ ಸೋಲದೇವನಹಳ್ಳಿಯಲ್ಲಿ ಅಡಗಿಕೊಂಡಿದ್ದ ವಿಘ್ನೇಶ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಿನ್ನೆ(ಅಕ್ಟೋಬರ್ 16) ಕಾಲೇಜು ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದ ವೇಳೆ ಮಂತ್ರಿಮಾಲ್ ಹಿಂಭಾಗದ ರೈಲ್ವೆ ಟ್ರ್ಯಾಕ್ ಬಳಿ ಪ್ರಿಯಾಳನ್ನು ವಿಘ್ನೇಶ್ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದ. ಪ್ರಕರಣ ಸಂಬಂಧ ಶ್ರೀರಾಂಪುರ ಪೊಲೀಸರು (Shrirampur Police) ಕಾರ್ಯಚರಣೆ ನಡೆಸಿ ವಿಘ್ನೇಶ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
20 ವರ್ಷದ ಯಾಮಿನಿ ಪ್ರಿಯಾ ನಿನ್ನೆ (ಅಕ್ಟೋಬರ್ 17) ಕಾಲೇಜು ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದಳು. ಮಂತ್ರಿಮಾಲ್ ಹಿಂಭಾಗದ ರೈಲ್ವೆ ಟ್ರ್ಯಾಕ್ ಬಳಿ ಪ್ರಿಯಾಳನ್ನು ವಿಘ್ನೇಶ್ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿದ್ದಾನೆ. ಬಳಿಕ ಕತ್ತು ಕೊಯ್ದು ಪರಾರಿಯಾಗಿದ್ದ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಶ್ರೀರಾಂಪುರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ ಹಂತಕ ವಿಘ್ನೇಶ್ ಬಂಧನಕ್ಕೆ ಬಲೆ ಬೀಸಿದ್ದರು. ಅಂತಿಮವಾಗಿ ಇಂದು (ಅಕ್ಟೋಬರ್ 17) ಸೋಲದೇವನಹಳ್ಳಿಯಲ್ಲಿ ಸಿಕ್ಕಿಬಿದ್ದಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಕೋ ಕಿಲ್ಲರ್ ವಿಘ್ನೇಶ್ ಹತ್ಯೆಗೆ ಸಂಚು ಹಾಕಲು ಮಿಷನ್ ಯಾಮಿನಿ ಪ್ರಿಯಾ ಅಂತ ವಾಟ್ಸಪ್ ಗ್ರೂಪ್ ಮಾಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಮಿಷನ್ ಯಾಮಿನಿ ಪ್ರಿಯಾ ಎಂದು ವಾಟ್ಸಪ್ ಗ್ರೂಪ್ ಕ್ರಿಯೆಟ್ ಮಾಡಿ, ಈ ಮೂಲಕ ಹತ್ಯೆಗೆ ಪ್ಲ್ಯಾನ್ ಮಾಡಿರುವುದಾಗಿ ಗೊತ್ತಾಗಿದೆ. ಈ ಗ್ರೂಪ್‌ನಲ್ಲಿ ನಾಲ್ಕು ಜನರಿದ್ದು, ತನ್ನ ಪ್ರೇಯಸಿ ಎಲ್ಲಿಗೆ ಹೋಗ್ತಾಳೆ? ಯಾರ ಜೊತೆ ಮಾತನಾಡುತ್ತಾಳೆ? ಎಂದು ಡಿಟೇಲ್ಸ್ ಪಡಯುವ ಸಲುವಾಗಿ ಈ ಗ್ರೂಪ್ ಮಾಡಿದ್ದ ಎನ್ನಲಾಗಿದೆ.
ಮೃತ ಯಾಮಿನಿ ಪ್ರಿಯಾಗೆ ಹಂತಕ ಬಲವಂತವಾಗಿ ಮಾಂಗಲ್ಯ ಕೂಡ ಕಟ್ಟಿದ್ದನಂತೆ. ಈ ವಿಚಾರ ಮನೆಯಲ್ಲಿ ತಿಳಿಸಿದ್ರೆ ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದನಂತೆ. ಇನ್ನೂ ಇಬ್ಬರು ಒಂದೇ ಏರಿಯಾದವರಾಗಿದ್ದು, ಆಕೆಯ ಪೋಷಕರಿಗೆ ಹೆಣ್ಣು ಕೇಳಿದ್ದನಂತೆ, ಆದರೆ ಅವರು ನಿರಾಕರಿಸಿದ್ದರು. ಬಳಿಕ ಒಂದು ಸಾರಿ ಗಲಾಟೆ ಮಾಡಿದಾಗ ಆತನ ವಿರುದ್ಧ ಯಾಮಿನಿ ಪೋಷಕರು ದೂರು ಕೊಟ್ಟಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.
Published On - 4:21 pm, Fri, 17 October 25