Crime Updates: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆಜಿ ಗಾಂಜಾ ಪತ್ತೆ; ಆರೋಪಿಗಳ ಬಂಧನ
ಫೆಬ್ರವರಿ 11ರ ರಾತ್ರಿ ಗಾಂಜಾ ನಶೆಯಲ್ಲಿ ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡಿದಾಗ ಅನುಮಾನಗೊಂಡು ಸ್ಥಳೀಯರು ಬೈಕ್ ತಡೆದು ವಿಚಾರಿಸಿದ್ದರು. ಈ ವೇಳೆ ವಿದ್ಯಾರ್ಥಿಗಳ ಬ್ಯಾಗ್ನಲ್ಲಿ 1 ಕೆಜಿ ಗಾಂಜಾ ಪತ್ತೆ ಆಗಿದೆ. ಆರೋಪಿಗಳನ್ನು ಸ್ಥಳೀಯರು ಬ್ಯಾಡರಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು: ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆಜಿ ಗಾಂಜಾ ಪತ್ತೆ ಆಗಿದ್ದು ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರಿಂದ ಇಬ್ಬರ ಸೆರೆಯಾಗಿದೆ. ಆರೋಪಿಗಳಾದ ಅಭಿಜಿತ್, ನಿತಿನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಗಾಂಜಾ ಪೆಡ್ಲರ್ಗಾಗಿ ಪೊಲೀಸರ ಶೋಧಕಾರ್ಯ ನಡೆಸಲಾಗಿದೆ. ಫೆಬ್ರವರಿ 11ರ ರಾತ್ರಿ ಗಾಂಜಾ ನಶೆಯಲ್ಲಿ ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡಿದಾಗ ಅನುಮಾನಗೊಂಡು ಸ್ಥಳೀಯರು ಬೈಕ್ ತಡೆದು ವಿಚಾರಿಸಿದ್ದರು. ಈ ವೇಳೆ ವಿದ್ಯಾರ್ಥಿಗಳ ಬ್ಯಾಗ್ನಲ್ಲಿ 1 ಕೆಜಿ ಗಾಂಜಾ ಪತ್ತೆ ಆಗಿದೆ. ಆರೋಪಿಗಳನ್ನು ಸ್ಥಳೀಯರು ಬ್ಯಾಡರಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇತ್ತ ಶಿವಮೊಗ್ಗದ ತುಂಗಾನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಅಂಬೇಡ್ಕರ್ ನಗರದ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಬಂಧನ ಮಾಡಲಾಗಿದೆ. ಅಡ್ಡು ಅಲಿಯಾಸ್ ಇಬ್ರಾಹಿಂ ಎಂಬಾತ ಬಂಧಿತ ವ್ಯಕ್ತಿ. ಆರೋಪಿಯಿಂದ 97,000 ರೂಪಾಯಿ ಮೌಲ್ಯದ 3 ಕೆಜಿ 250 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಎನ್ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿದೆ.
ಶೂ ವಾಪಸ್ ತೆಗೆದುಕೊಳ್ಳದಿದ್ದಕ್ಕೆ ಗ್ರಾಹಕನಿಂದ ಮಚ್ಚಿನೇಟು
ಶೂ ವಾಪಸ್ ತೆಗೆದುಕೊಳ್ಳದಿದ್ದಕ್ಕೆ ಗ್ರಾಹಕನಿಂದ ಮಚ್ಚಿನೇಟು ಸಿಕ್ಕ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ. 1,500 ರೂಪಾಯಿ ನೀಡಿ ಶೂ ಖರೀದಿಸಿದ್ದ ಗ್ರಾಹಕ ಲೋಕೇಶ್, ಬಳಿಕ ಶೂ ಚೆನ್ನಾಗಿಲ್ಲ, ಹಣ ವಾಪಸ್ ನೀಡುವಂತೆ ಕೇಳಿದ್ದ. ಆದರೆ ಶೂ ವ್ಯಾಪಾರಿ ಫೈಜ್, ಹಣವನ್ನು ವಾಪಸ್ ನೀಡುವುದಿಲ್ಲ ಎಂದಿದ್ದ. ಅಂಗಡಿ ಮಾಲೀಕ, ಗ್ರಾಹಕನನ್ನು ಪೊಲೀಸರು ಸಮಾಧಾನ ಮಾಡಿದ್ದರು. ಆದರೆ, ಮರುದಿನ ಬೆಳಗ್ಗೆ ಅಂಗಡಿ ತೆರೆಯಲು ಬಂದಾಗ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಫೈಜ್ ಕೈ, ಭುಜಕ್ಕೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಶೂ ಅಂಗಡಿ ಮಾಲೀಕ ಫೈಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷ್ಣಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ,
ಮದ್ಯ ಪೂರೈಕೆ ತಡವಾಗಿದ್ದಕ್ಕೆ ಜಟಾಪಟಿ; ಬೆಂಗಳೂರಿನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಬೆಂಗಳೂರಿನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಬನ್ನೇರುಘಟ್ಟ ನಿವಾಸಿ ಇಶಾಂತ್ ಮೇಲೆ ಹಲ್ಲೆ ನಡೆಸಲಾಗಿದೆ. ತಾಜ್ವೆಸ್ಟ್ ಎಂಡ್ ಹೋಟೆಲ್ನಲ್ಲಿ ತಡರಾತ್ರಿ ಹಲ್ಲೆ ಘಟನೆ ನಡೆದಿದೆ. ಚಂಡೀಗಢದ ಬಲ್ವಿಂದರ್ ಜತೆ ಪಾರ್ಟಿಗೆ ಬಂದಿದ್ದ ಇಶಾಂತ್, ಮದ್ಯ ಪೂರೈಕೆ ತಡವಾಗಿದ್ದಕ್ಕೆ ವೇಟರ್ ಜತೆ ಮಾತಿನ ಚಕಮಕಿ ಏರ್ಪಟ್ಟಿತ್ತು. ವಾಗ್ವಾದದ ವೇಳೆ ಇಶಾಂತ್ ಮೇಲೆ ವೇಟರ್ ಹಲ್ಲೆ ನಡೆಸಿದ್ದಾನೆ. ಇಶಾಂತ್ ಮೇಲೆ ಹಲ್ಲೆಗೈದು ಪರಾರಿಯಾಗಿದ್ದಾನೆ. ಇಶಾಂತ್ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳು ಇಶಾಂತ್ ಹಣೆಗೆ 6 ಹೊಲಿಗೆ ಹಾಕಲಾಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರಿಂದ ಆರೋಪಿ ವೇಟರ್, ಮ್ಯಾನೇಜರ್ ವಿಚಾರಣೆ ನಡೆಸಲಾಗಿದೆ.
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ದಿಢೀರ್ ಪ್ರತಿಭಟನೆ
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ದಿಢೀರ್ ಪ್ರತಿಭಟನೆ ನಡೆದಿದೆ. ಜೈಲು ಅಧಿಕಾರಿಗಳು, ಸಿಬ್ಬಂದಿಯಿಂದ ಸೆಲ್ ಪರಿಶೀಲನೆ ಹಿನ್ನೆಲೆ ಸೆಲ್‌ಗಳ ಪರಿಶೀಲನೆಗೆ ಆಕ್ಷೇಪ ವ್ಯಕ್ತಪಡಿಸಿ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ. ವಿನಾಕಾರಣ ಪೊಲೀಸರು ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಂಬಂಧಿಕರೊಬ್ಬರಿಗೆ ಕರೆ ಮಾಡಿ ಕೈದಿಯೊಬ್ಬ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇತರ ಅಪರಾಧ, ಅಪಘಾತ ಸುದ್ದಿಗಳು
ಬಳ್ಳಾರಿ: ಸಿರಗುಪ್ಪದ ಲಕ್ಷ್ಮೀನರಸಿಂಹ ರೈಸ್ ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 11,390 ಕೆಜಿ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ. ಸಿರಗುಪ್ಪ ಪೊಲೀಸರು ಅಕ್ರಮ ಅಕ್ಕಿ ಜಪ್ತಿ ಮಾಡಿ, ಪಡಿತರ ಅಕ್ಕಿ ದಾಸ್ತಾನು ಮಾಡಿದ್ದ ರಾಮು, ಜನಾರ್ದನ ಎಂಬವರನ್ನು ಬಂಧಿಸಿದ್ದಾರೆ.
ವಿಜಯಪುರ: ತೋಳಗಳ ದಾಳಿಗೆ ಕುರಿ ಮರಿಗಳು ಬಲಿಯಾದ ದುರ್ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕಪನಿಂಬರಗಿ ಗ್ರಾಮದಲ್ಲಿ ನಡೆದಿದೆ. ದಾದಾಗೌಡ ಖಾನಾಪೂರ ಎಂಬುವವರ ತೋಟದಲ್ಲಿ ಘಟನೆ ನಡೆದಿದೆ. ದಾದಾಗೌಡ ಖಾನಾಪೂರ ಸಾಕಿದ್ದ ಕುರಿಮರಿಗಳ ಮೇಲೆ ತೋಳದ ಹಿಂಡು ದಾಳಿ ಮಾಡಿದೆ. ತೋಳುಗಳ ದಾಳಿಗೆ 8 ಕುರಿಮರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ.
ವಿಜಯಪುರ: ಇಲ್ಲಿನ ಮುದ್ದೇಬಿಹಾಳ ಗ್ರಾಮದ ಹಂಡರಗಲ್ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ಸಹೋದರರಾದ ಮೊಹಮ್ಮದ್ ಯೂನಸ್ ಮಾಗಿ, ಮೊಹಮ್ಮದ್ ಹುಸೇನ್ ಮಾಗಿ, ಲಾಲಸಾಬ್‌ಗೆ ಸೇರಿದ 12 ಎಕರೆ ಪ್ರದೇಶದಲ್ಲಿದ್ದ ಕಬ್ಬು ಬೆಂಕಿಗಾಹುತಿ ಆಗಿದೆ. ದುರ್ಘಟನೆಯಿಂದ ರೈತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: Crime Updates: ಖತರ್ನಾಕ್ ಬೈಕ್ ಕಳ್ಳರ ಬಂಧನ; 7 ಲಕ್ಷ ರೂ ಮೌಲ್ಯದ 18 ಬೈಕ್ ವಶಕ್ಕೆ
ಇದನ್ನೂ ಓದಿ: Crime News: ಪೊಲೀಸರಿಂದ ಕಿರುಕುಳ ಆರೋಪ; ಸೆಲ್ಫಿ ವಿಡಿಯೋ ಮಾಡಿಕೊಂಡು ಮಹಿಳೆ ಆತ್ಮಹತ್ಯೆಗೆ ಶರಣು