ಬೆಂಗಳೂರು ಸಬ್​ ಅರ್ಬನ್ ರೈಲು ಯೋಜನೆ: ನಾಚಿಕೆಯಿಲ್ಲದೆ ಸುಳ್ಳು ಹೇಳುವ ಸಿದ್ದರಾಮಯ್ಯ, ದಾಖಲೆ ಸಹಿತ ತೇಜಸ್ವಿ ಸೂರ್ಯ ತಿರುಗೇಟು

|

Updated on: Oct 30, 2023 | 11:02 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಕೂರುವ ಕುರ್ಚಿಗಾದರು ಗೌರವ ಕೊಟ್ಟು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಕೆ-ರೈಡ್​ಗೆ ಯಾಕೆ ಪೂರ್ಣ ಸಮಯದ ಎಂಡಿಯನ್ನು ಮುಖ್ಯಮಂತ್ರಿಗಳು ಇನ್ನೂ ಏಕೆ ನೇಮಿಸಿಲ್ಲ? ಇದಕ್ಕೆ ಅವರು ಉತ್ತರಿಸಬೇಕು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದರು

ಬೆಂಗಳೂರು ಸಬ್​ ಅರ್ಬನ್ ರೈಲು ಯೋಜನೆ: ನಾಚಿಕೆಯಿಲ್ಲದೆ ಸುಳ್ಳು ಹೇಳುವ ಸಿದ್ದರಾಮಯ್ಯ, ದಾಖಲೆ ಸಹಿತ ತೇಜಸ್ವಿ ಸೂರ್ಯ ತಿರುಗೇಟು
ಬಿಜೆಪಿ ಸಂಸದ ತೇಜೆಸ್ವಿ ಸೂರ್ಯ
Follow us on

ಬೆಂಗಳೂರು ಅ.30: ಬೆಂಗಳೂರು ಸಬ್ ಅರ್ಬನ್ (ಉಪನಗರ) ರೈಲು (Suburban Railway) ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್​ (ಹಿಂದಿನ ಟ್ವಿಟರ್​)ನಲ್ಲಿ ಟ್ವೀಟ್​ ಮಾಡುವ ಮೂಲಕ ಹರಿಹಾಯ್ದಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸಂಸದ ತೇಜೆಸ್ವಿ ಸೂರ್ಯ (Tejasvi Surya) ಟ್ವೀಟ್​ ಮಾಡಿ “ಸಿದ್ದರಾಮಯ್ಯ ಅವರೇ ನೀವು ನಾಚಿಕೆಯಿಲ್ಲದೆ ಸುಳ್ಳು ಹೇಳುವುದರಿಂದ ನೀವು ಕೂತಿರುವ ಕುರ್ಚಿಗೆ ಅವಮಾನವಾಗುತ್ತದೆ” ಎಂದು ತಿರುಗೇಟು ನೀಡಿದ್ದಾರೆ.

“ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ​ 40 ವರ್ಷಗಳ ಕಾಲ ವಿಳಂಬವಾಗಿದ್ದ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ (BSRP) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಗೆ 2018ರಲ್ಲಿ ಕೇಂದ್ರ ರೈಲ್ವೆ ಮಂಡಳಿ ಅನುಮತಿ ನೀಡಿತ್ತು. ನಂತರ ಹಲವು ಪರಾಮರ್ಶೆ ಬಳಿಕ 2020ರಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು” ಎಂದು ಮಾಹಿತಿ ನೀಡಿದರು.

“ಯಾವುದೇ ಯೋಜನೆಗೆ ಹಣವನ್ನು ಹಂತ ಹಂತವಾಗಿ ನೀಡಲಾಗುತ್ತದೆ. ಪ್ರಸ್ತುತ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ K-RIDE ಉದ್ದೇಶಕ್ಕಾಗಿ 500 ಕೋಟಿ ರೂ. ಅನ್ನು ಕೇಂದ್ರ ಸರ್ಕಾರ ನೀಡಿದೆ. ಯಾವುದೇ ಮೂಲಸೌಕರ್ಯ ಯೋಜನೆ ಕಾರ್ಯ ಪೂರ್ಣಗೊಂಡು, ಅದರ ಪ್ರಮಾಣ ಪತ್ರ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ ಬಾಕಿ ಉಳಿದ ಹಣವನ್ನು ನೀಡಲಾಗುತ್ತದೆ” ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ, ಮಾಹಿತಿ ಮುಂದಿಟ್ಟು ತರಾಟೆಗೆ ತೆಗೆದುಕೊಂಡ ಕೇಂದ್ರ ಜಲ ಶಕ್ತಿ ಸಚಿವ ಶೇಖಾವತ್

“ಬೆಂಗಳೂರು ಉಪನಗರ ರೈಲ್ವೆ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ ಶೇ 20 ರಷ್ಟು, ರಾಜ್ಯದಿಂದ 20 ರಷ್ಟು ಹಣ ನೀಡಲಾಗುತ್ತದೆ. ಮತ್ತು ಶೇ60 ರಷ್ಟು ಹಣವನ್ನು ರಾಷ್ಟ್ರೀಕೃತ ಬ್ಯಾಂಕ್​ನಿಂದ ಸಾಲ ಪಡೆಯಬೇಕು” ಎಂದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಕೂರುವ ಕುರ್ಚಿಗಾದರು ಗೌರವ ಕೊಟ್ಟು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಕೆ-ರೈಡ್​ಗೆ ಯಾಕೆ ಪೂರ್ಣ ಸಮಯದ ಎಂಡಿಯನ್ನು ಮುಖ್ಯಮಂತ್ರಿಗಳು ಇನ್ನೂ ಏಕೆ ನೇಮಿಸಿಲ್ಲ? ಇದಕ್ಕೆ ಅವರು ಉತ್ತರಿಸಬೇಕು” ಎಂದು ಆಗ್ರಹಿಸಿದರು.

ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ?: ಸಿದ್ದರಾಮಯ್ಯ

ಬಹುಕಾಲದ ಬೇಡಿಕೆಯಾದ ಏಮ್ಸ್ ಸಂಸ್ಥೆ, ಸಬ್ ಅರ್ಬನ್ ರೈಲು ಈಗಲೂ ಕನ್ನಡಿಗರಿಗೆ ಕನಸಾಗಿಯೇ ಉಳಿದಿದೆ, ಕನ್ನಡಿಗರು ಶ್ರಮವಹಿಸಿ ಕಟ್ಟಿದ ಬ್ಯಾಂಕುಗಳು ವಿಲೀನದ ಹೆಸರಲ್ಲಿ ನಮ್ಮವರ ಪಾಲಿಗೆ ಇಲ್ಲವಾಗಿವೆ. ಕರುನಾಡಿಗೆ ಇದೆಂತಹ ಅನ್ಯಾಯ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರೇ?ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ ಜನರ ಪ್ರಶ್ನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ