Bengaluru traffic advisory: ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಕೆಲವಡೆ ಮಾರ್ಗ ಬದಲಾವಣೆ; ಪೂರ್ಣ ವಿವರ ಇಲ್ಲಿದೆ

ಬೆಂಗಳೂರು ಸಂಚಾರ ಸಲಹೆ: ನವರಾತ್ರಿ ಹಬ್ಬ ಹಾಗೂ ಸರ್ಜಾಪುರ ರಸ್ತೆಯಲ್ಲಿನ ಕಾಮಗಾರಿಗಳ ಕಾರಣ ಸಂಚಾರ ದಟ್ಟಣೆ ಕುರಿತು ಬೆಂಗಳೂರು ಸಂಚಾರ ಪೊಲೀಸರು ಮುನ್ಸೂಚನೆ ನೀಡಿದ್ದಾರೆ. ಅರಮನೆ ಮೈದಾನ ಬಳಿ ಬಳ್ಳಾರಿ ರಸ್ತೆಯಲ್ಲಿ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ ದಟ್ಟಣೆ ಇರಲಿದೆ. ಸರ್ಜಾಪುರ ರಸ್ತೆಯಲ್ಲಿ ಸೆಪ್ಟೆಂಬರ್ 30 ರಿಂದ ಎರಡು ತಿಂಗಳು ಒಂದು ಬದಿ ಬಂದ್ ಆಗಲಿದೆ. ಇನ್ನಿತರ ಪ್ರದೇಶಗಳ ರಸ್ತೆ ಬಂದ್, ಪರ್ಯಾಯ ಮಾರ್ಗ ಇತ್ಯಾದಿ ವಿವರಗಳು ಇಲ್ಲಿವೆ.

Bengaluru traffic advisory: ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಕೆಲವಡೆ ಮಾರ್ಗ ಬದಲಾವಣೆ; ಪೂರ್ಣ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ

Updated on: Sep 29, 2025 | 1:58 PM

ಬೆಂಗಳೂರು, ಸೆಪ್ಟೆಂಬರ್ 29: ಅರಮನೆ ಮೈದಾನದಲ್ಲಿ ನಡೆಯಲಿರುವ ನವರಾತ್ರಿ ಹಬ್ಬದ ಆಚರಣೆಗಳು ಮತ್ತು ಸರ್ಜಾಪುರ ರಸ್ತೆಯಲ್ಲಿ ನಡೆಯುತ್ತಿರುವ ವೈಟ್-ಟಾಪಿಂಗ್ ಕಾಮಗಾರಿಯ ಕಾರಣ ವಾಹನ ಸಂಚಾರಕ್ಕೆ ತುಸು ಅಡಚಣೆಯಾಗಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಸವಾರರಿಗೆ ಮುನ್ಸೂಚನೆ ನೀಡಿದ್ದಾರೆ. ಈ ಎರಡು ಪ್ರದೇಶಗಳಲ್ಲಿ ಮಾತ್ರವಲ್ಲದೆ, ಹಬ್ಬದ ಕಾರಣ ಹಾಗೂ ವಿವಿಧ ಕಾಮಗಾರಿಗಳ ಕಾರಣ ಬೆಂಗಳೂರಿನ ಕೆಲವೆಡೆ ಭಾಗಶಃ ಸಂಚಾರ ನಿರ್ಬಂಧ, ಇನ್ನು ಕೆಲವೆಡೆ ಮಾರ್ಗ ಬದಲಾವಣೆ ಇರಲಿದೆ.

ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಮುನ್ಸೂಚನೆ

ಅರಮನೆ ಮೈದಾನದಲ್ಲಿ ನವರಾತ್ರಿ ಮತ್ತು ದುರ್ಗಾ ಪೂಜೆ ಕಾರ್ಯಕ್ರಮಗಳು ನಡೆಯಲಿದ್ದು, ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ ಬಳ್ಳಾರಿ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣಿಕರು ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳಬೇಕು, ಬೇಗನೆ ಹೊರಡಬೇಕು ಮತ್ತು ವಿಳಂಬವನ್ನು ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಬಳಸಬೇಕು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಸಲಹೆ ನೀಡಿದ್ದಾರೆ.

ಸರ್ಜಾಪುರ ರಸ್ತೆಯ ಒಂದು ಬದಿ ಸೆಪ್ಟೆಂಬರ್ 30 ರಿಂದ ಬಂದ್

ಸೆಪ್ಟೆಂಬರ್ 30 ರಂದು ಸರ್ಜಾಪುರ ರಸ್ತೆಯಲ್ಲಿ ಆಟೋಮಾರ್ಟ್ ಜಂಕ್ಷನ್‌ನಿಂದ ಅಗರ ಜಂಕ್ಷನ್‌ವರೆಗೆ ವೈಟ್-ಟಾಪಿಂಗ್ ಕಾಮಗಾರಿ ಪ್ರಾರಂಭವಾಗಲಿದ್ದು, ಸುಮಾರು ಎರಡು ತಿಂಗಳ ಕಾಲ ಮುಂದುವರಿಯಲಿದೆ. ಪರಿಣಾಮವಾಗಿ, ರಸ್ತೆಯ ಒಂದು ಬದಿಯು ಮುಚ್ಚಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋರಮಂಗಲ ಜಕ್ಕಸಂದ್ರದಿಂದ ಅಗರ ಮತ್ತು ಹೊರ ವರ್ತುಲ ರಸ್ತೆ ಕಡೆಗೆ ವಾಹನಗಳು ಸಂಚರಿಸಲು ಅವಕಾಶವಿರುತ್ತದೆ. ಅಗರ ಮತ್ತು ಹೊರ ವರ್ತುಲ ರಸ್ತೆಯಿಂದ ಕೋರಮಂಗಲ ಜಕ್ಕಸಂದ್ರ ಕಡೆಗೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.

ಪರ್ಯಾಯ ಮಾರ್ಗಗಳು ಯಾವುವು?

ಹೊರ ವರ್ತುಲ ರಸ್ತೆಯಿಂದ ಕೋರಮಂಗಲ ಕಡೆಗೆ ಬರುವ ವಾಹನಗಳು ಅಗರ ಫ್ಲೈಓವರ್ ಮೇಲಿನ ರ‍್ಯಾಂಪ್ ಬಳಸಿ, 19 ನೇ ಮುಖ್ಯ ರಸ್ತೆ ಅಥವಾ 14 ನೇ ಮುಖ್ಯ ರಸ್ತೆ ಮೇಲಿನ ರ‍್ಯಾಂಪ್‌ನಲ್ಲಿ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ, 14 ನೇ ಮುಖ್ಯ ರಸ್ತೆ ಜಂಕ್ಷನ್‌ಗೆ ಹೋಗಿ, ಬಲ ತಿರುವು ಪಡೆದು, ಆಟೋಮಾರ್ಟ್ ಕಡೆಗೆ ಮುಂದುವರಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಟ್ರಾಫಿಕ್ ಪೊಲೀಸ್ ಎಕ್ಸ್ ಸಂದೇಶ


ಈ ಅವಧಿಯಲ್ಲಿ ಸುಗಮ ಸಂಚಾರಕ್ಕಾಗಿ ಸಾರ್ವಜನಿಕರು ಸಂಚಾರ ಪೊಲೀಸ್ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಮತ್ತು ಸಲಹೆ ಸೂಚನೆಗಳನ್ನು ಅನುಸರಿಸಬೇಕು ಎಂದು ಪೊಲೀಸರು ವಿನಂತಿಸಿದ್ದಾರೆ.

ಇದನ್ನೂ ಓದಿ: ದಸರಾ ಸಮಯದಲ್ಲಿ ಬೆಂಗಳೂರಿನಲ್ಲಿ ನೀವು ಭೇಟಿ ನೀಡಲೇ ಬೇಕಾದ ಜಾಗಗಳಿವು

ವಿಶೇಷವಾಗಿ ಬೆಳಗ್ಗಿನ ಮತ್ತು ಸಂಜೆಯ ಸಮಯದಲ್ಲಿ ಹೆಚ್ಚಿನ ಜನದಟ್ಟಣೆ ಮತ್ತು ವಾಹನಗಳ ಓಡಾಟದಿಂದಾಗಿ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಸಂಚಾರವನ್ನು ನಿಯಂತ್ರಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಆದಾಗ್ಯೂ ಸಂಚಾರ ದಟ್ಟಣೆಯನ್ನು ನಿರೀಕ್ಷಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:19 pm, Mon, 29 September 25