
ಬೆಂಗಳೂರು, ಜನವರಿ 13: ರಸ್ತೆಯಲ್ಲಿ ಸಂಚಾರ ಪೊಲೀಸರು ಇಲ್ಲ, ಕ್ಯಾಮರಾಗಳ ಕಣ್ಣಿಗೆ ಕಾಣಿಸಲ್ಲ ಎಂದು ಮೊಂಡತನ ಮಾಡಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ವಾಹನಗಳ ಚಾಲನೆ ಮಾಡ್ತಿದ್ದೀರಾ? ಹಾಗಿದ್ರೆ ಸಂಕಷ್ಟ ಎದುರಿಸೋಕೆ ಸಿದ್ಧರಾಗಿ. ಸಂಚಾರ ನಿಯಮಗಳ ಪಾಲನೆ ಮಾಡದಿದ್ರೆ ಇನ್ಮುಂದೆ ದಂಡ ಒಂದೇ ಬೀಳಲ್ಲ, ಕೇಸ್ ಕೂಡ ದಾಖಲಾಗುತ್ತೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರ ವಿರುದ್ಧ ಬೆಂಗಳೂರಲ್ಲಿ ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಲು ಆರಂಭಿಸಿದ್ದಾರೆ.
ಹೌದು, ಸಿಗ್ನಲ್ ಜಂಪ್ ಮಾಡುವುದು, ಏಕಮಾರ್ಗ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಹಾಗೂ ರಸ್ತೆಗಳ ಮೇಲೆ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಉಂಟುಮಾಡುವಂತಹ ಪ್ರಕರಣಗಲಿಗೆ ಸಂಬಂಧಿಸಿ ಆಯಾ ಪ್ರದೇಶಗಳ ವ್ಯಾಪ್ತಿಯ ಸಂಚಾರ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ. ಈ ಬಗ್ಗೆ ಸ್ವತಃ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅನೂಪ್ ಶೆಟ್ಟಿ ಅವರೇ ಮಾಹಿತಿ ನೀಡಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಬೆಂಗಳೂರಿನ ಸಂಚಾರ ಉಲ್ಲಂಘನೆ ಗುರುತಿಸಲು ಹೆಲ್ಮೆಟ್ನ್ನು ಟ್ರಾಫಿಕ್ ಪೊಲೀಸ್ ಸಾಧನವಾಗಿ ಪರಿವರ್ತಿಸಿದ ಟೆಕ್ಕಿ
ಸಿಗ್ನಲ್ ಜಂಪ್ ಮಾಡುವುದು ಮತ್ತು ಏಕಮಾರ್ಗ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುವುದು ಬೆಂಗಳೂರಿನಲ್ಲಿ ಸಾಮಾನ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿರುವ ಕಾರಣ ಇಲಾಖೆ ಕಠಿಣ ಕ್ರಮ ಜಾರಿಗೆ ಮುಂದಾಗಿದೆ. ಪೊಲೀಸ್ ಅಂಕಿ ಅಂಶಗಳ ಪ್ರಕಾರ 2025ರ ಜನವರಿಯಿಂದ ನವೆಂಬರ್‌ವರೆಗೆ ಬೆಂಗಳೂರಿನಲ್ಲಿ 6,62,447 ಸಿಗ್ನಲ್ ಜಂಪಿಂಗ್ ಪ್ರಕರಣಗಳು ಹಾಗೂ 3,02,962 ನೋ-ಎಂಟ್ರಿ ಉಲ್ಲಂಘನೆಗಳು ದಾಖಲಾಗಿವೆ. ಏಕಮುಖ ರಸ್ತೆಯಲ್ಲಿನ ಸಂಚಾರ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುವ ಜೊತೆಗೆ ಅಪಘಾತಗಳಿಗೂ ಎಡೆಮಾಡಿಕೊಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸೆಕ್ಷನ್ 285 (ಸಾರ್ವಜನಿಕ ಮಾರ್ಗದಲ್ಲಿ ಅಪಾಯ ಅಥವಾ ಅಡ್ಡಿ ಉಂಟುಮಾಡುವುದು) ಅಡಿಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಾಗಲಿದೆ.
ಇದೇ ಸೆಕ್ಷನ್ ಅಡಿಯಲ್ಲಿ, ಬಸ್ ಹಾಗೂ ರೈಲು ನಿಲ್ದಾಣಗಳ ಬಳಿ ರಸ್ತೆ ಮೇಲೆ ವಾಹನಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುವ ಆಟೋರಿಕ್ಷಾ ಹಾಗೂ ಕಾರುಗಳ ಮೇಲೂ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಸಿಗ್ನಲ್ ಜಂಪಿಂಗ್ ಕೂಡ ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಬಿಎನ್‌ಎಸ್‌ನ ಸೆಕ್ಷನ್ 281 (ಸಾರ್ವಜನಿಕ ಮಾರ್ಗದಲ್ಲಿ ಅಜಾಗರೂಕ ಅಥವಾ ನಿರ್ಲಕ್ಷ್ಯ ಚಾಲನೆ) ಅಡಿಯಲ್ಲಿ ಕೇಸ್ ದಾಖಲಾಗಲಿದೆ. ಹಿಂದೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದವರು ಸ್ಥಳದಲ್ಲೇ ದಂಡ ಪಾವತಿಸಿ ಮತ್ತೆ ಅದೇ ತಪ್ಪು ಮಾಡುತ್ತಿದ್ದರು. ಆದರೆ ಈಗ ಎಫ್‌ಐಆರ್ ದಾಖಲಾದ ಬಳಿಕ ವಾಹನವನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ದಂಡ ಪಾವತಿಸಲು ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ. ಇದು ದೀರ್ಘ ಪ್ರಕ್ರಿಯೆಯಾಗಿರುವ ಕಾರಣ ಪರಿಣಾಮ ದೊಡ್ಡದಿರಲಿದೆ ಎಂಬುದು ಪೊಲೀಸರ ಅಭಿಪ್ರಾಯ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:41 am, Tue, 13 January 26