ಬೆಂಗಳೂರು: ಭಾರತಮಾಲಾ ಯೋಜನೆಯಡಿ ದೇಶಾದ್ಯಂತ ಕೇಂದ್ರ ಸರ್ಕಾರ ಹೆದ್ದಾರಿಗಳ ನಿರ್ಮಾಣ, ವಿಸ್ತರಣೆ ಮಾಡುತ್ತಿದೆ. ಇದೇ ಯೋಜನೆಯಡಿ ಬೆಂಗಳೂರು-ತುಮಕೂರು ಹೆದ್ದಾರಿ (Bengaluru-Tumakuru Highway) ವಿಸ್ತರಣೆ ಯೋಜನೆ, ಮೊದಲ ಹಂತದ ಕಾಮಗಾರಿ ಈಗಾಗಲೇ ನಡೆಯುತ್ತಿದೆ. ಈ ಕಾಮಗಾರಿಯು ಮೂರು ವರ್ಷಗಳಲ್ಲಿ ಅಂದರೆ 2025ರ ಆಗಸ್ಟ್ 24ಕ್ಕೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಚತುಷ್ಪಥ ನೆಲಮಂಗಲ-ತುಮಕೂರು (44.04 ಕಿಮೀ) ರಾಷ್ಟ್ರೀಯ ಹೆದ್ದಾರಿಯನ್ನು 844 ಕೋಟಿ ವೆಚ್ಚದಲ್ಲಿ ದಶಪಥ ಹೆದ್ದಾರಿಯಾಗಿ ನಿರ್ಮಿಸಲಾಗುತ್ತಿದೆ ಎಂದರು.
ಇತ್ತೀಚೆಗೆ ನಡೆದ ಚಳಿಗಾಲದ ರಾಜ್ಯಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಹೆದ್ದಾರಿ 48ರ 29.500 ಕಿ.ಮೀನಿಂದ 75.000 ಕಿ.ಮೀ.ವರೆಗಿನ ತುಮಕೂರು ಹೆದ್ದಾರಿ ಸೇರಿದಂತೆ ನೆಲಮಂಗಲದಿಂದ ತುಮಕೂರುವರೆಗಿನ ಆರು ಪಥಗಳನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲನೆ ಹಂತ ಸರ್ವಿಸ್ ರಸ್ತೆಗಳ ನಿರ್ಮಾಣವನ್ನು ಒಳಗೊಂಡಿದೆ. ಎರಡನೇ ಹಂತ, ಮುಖ್ಯ ಕ್ಯಾರೇಜ್‌ವೇ ನಿರ್ಮಾಣ. ಮೊದಲ ಹಂತದ ನಿರ್ಮಾಣ ಕಾರ್ಯವು ಪ್ರಾರಂಭವಾಗಿದ್ದು ಆಗಸ್ಟ್ 24, 2025ಕ್ಕೆ ಲೋಕಾರ್ಪಣೆಯಾಗಲಿದೆ. ಈ ಹೆದ್ದಾರಿಯು ಬೆಂಗಳೂರಿನಿಂದ ಸಂಪರ್ಕ ಕಲ್ಪಿಸುವ ಮೂರನೇ ದಶಪಥ ಹೆದ್ದಾರಿಯಾಗಲಿದೆ. 1. ಬೆಂಗಳೂರು-ತುಮಕೂರು 2. ಬೆಂಗಳೂರು-ನೆಲಮಂಗಲ 3. ಬೆಂಗಳೂರು-ಮೈಸೂರು ಎಂದು ತಿಳಿಸಿದರು.
ಭಾರತಮಾಲಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಹಸಿರು ಹೆದ್ದಾರಿ ಯೋಜನೆಯು ರೈಲ್ವೇ ಮೇಲ್ಸೇತುವೆಗಳು ಸೇರಿದಂತೆ 17 ಮೇಲ್ಸೇತುವೆಗಳನ್ನು ಒಳಗೊಂಡಿರುತ್ತದೆ. ಇದು 500 ಕ್ಕೂ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಸೋಂಪುರ ಕೈಗಾರಿಕಾ ಪ್ರದೇಶ ಸೇರಿದಂತೆ, ಕೈಗಾರಿಕೆಗಳು ಮತ್ತು ವಸತಿ ನಿಲಯಗಳಿಗೆ ಎರಡೂ ಬದಿಗಳಲ್ಲಿ ನಾಲ್ಕು ಪಥದ ರಸ್ತೆಗಳೊಂದಿಗೆ ಆರು ಪಥದ ಎಕ್ಸ್‌ಪ್ರೆಸ್‌ವೇಯನ್ನು ಒಳಗೊಂಡಿರುತ್ತದೆ.
ಈ ಯೋಜನೆಯು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ. ಇದಲ್ಲದೆ, ಬೆಂಗಳೂರು ಸ್ಯಾಟಲೈಟ್ ರಿಂಗ್ ರೋಡ್ ಜೊತೆಗೆ ನೆಲಮಂಗಲ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಉಪ ಪಟ್ಟಣಗಳಿಗೆ ಇದು ಪ್ರಯೋಜನಕಾರಿಯಾಗಿದೆ ಎಂದು ಹೇಳುದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 pm, Sun, 25 December 22