ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಭೀತಿ; ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ರೇಸ್‌ಗಳಿಗೆ ತಾತ್ಕಾಲಿಕ ಬ್ರೇಕ್

ಹೈದರಾಬಾದ್‌ನಲ್ಲಿ ಮಾರಣಾಂತಿಕ ಗ್ಲಾಂಡರ್ಸ್ ರೋಗ ಪತ್ತೆಯಾದ ಹಿನ್ನೆಲೆಯಲ್ಲಿ, ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಮುನ್ನೆಚ್ಚರಿಕೆ ಕ್ರಮವಾಗಿ ರೇಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 700ಕ್ಕೂ ಹೆಚ್ಚು ಕುದುರೆಗಳನ್ನು ಪರೀಕ್ಷಿಸಲಾಗಿದ್ದು, ಒಂದು ಕುದುರೆಯಲ್ಲಿ ಸೋಂಕು ದೃಢಪಟ್ಟಿದೆ. ಮನುಷ್ಯರಿಗೂ ಹರಡುವ ಸಾಧ್ಯತೆಯಿರುವ ಈ ರೋಗದ ಬಗ್ಗೆ ಬಿಟಿಸಿ ಗಂಭೀರ ಕ್ರಮ ಕೈಗೊಂಡಿದ್ದು, ಎಲ್ಲಾ ಕುದುರೆಗಳು ಮೂರು ಬಾರಿ ಪರೀಕ್ಷೆಯಲ್ಲಿ ಪಾಸ್ ಆದ ನಂತರವೇ ರೇಸ್‌ಗಳು ಪುನರಾರಂಭಗೊಳ್ಳಲಿವೆ ಎಂದು ಹೇಳಿದೆ.

ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಭೀತಿ; ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ರೇಸ್‌ಗಳಿಗೆ ತಾತ್ಕಾಲಿಕ ಬ್ರೇಕ್
ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ರೇಸ್‌ಗಳಿಗೆ ತಾತ್ಕಾಲಿಕ ಬ್ರೇಕ್
Edited By:

Updated on: Dec 20, 2025 | 10:11 AM

ಬೆಂಗಳೂರು, ಡಿಸೆಂಬರ್ 20: ಹೈದರಾಬಾದ್‌ನಲ್ಲಿ ಕುದುರೆಗಳಿಗೆ ಮಾರಣಾಂತಿಕ ಗ್ಲಾಂಡರ್ಸ್ ರೋಗ ಪತ್ತೆಯಾಗಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಷ್ಠಿತ ಬೆಂಗಳೂರು ಟರ್ಫ್ ಕ್ಲಬ್ (Bengaluru Turf Club) ಕಳೆದ ಎರಡು ವಾರಗಳಿಂದ ಎಲ್ಲಾ ರೇಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕುದುರೆಗಳಲ್ಲಿ ಜೀವಕ್ಕೆ ಅಪಾಯಕಾರಿಯಾದ ಈ ಸೋಂಕು ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ ಟರ್ಫ್ ಕ್ಲಬ್ ಆಡಳಿತ ಮಂಡಳಿ ಗಂಭೀರ ಕ್ರಮ ಕೈಗೊಂಡಿದೆ.

700ಕ್ಕೂ ಹೆಚ್ಚು ಕುದುರೆಗಳಿಗೆ ವೈದ್ಯಕೀಯ ಪರೀಕ್ಷೆ

ಹೈದರಾಬಾದ್‌ನಲ್ಲಿ ಮೊದಲಿಗೆ ಗ್ಲಾಂಡರ್ಸ್ ರೋಗದ ಪ್ರಕರಣಗಳು ವರದಿಯಾದ ತಕ್ಷಣ ಎಚ್ಚೆತ್ತ ಬಿಟಿಸಿ, ತನ್ನಲ್ಲಿರುವ 700ಕ್ಕೂ ಹೆಚ್ಚು ಕುದುರೆಗಳನ್ನು ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿತ್ತು. ಕುದುರೆಗಳ ಸಲೈವಾ ಮಾದರಿಗಳನ್ನು ಹರಿಯಾಣದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಪ್ರಕಾರ ಒಂದು ಕುದುರೆಯಲ್ಲಿ ಮಾತ್ರ ಗ್ಲಾಂಡರ್ಸ್ ಪಾಸಿಟಿವ್ ಕಂಡುಬಂದಿದೆ. ಆ ಕುದುರೆಯನ್ನು ಈಗಾಗಲೇ ಸಂಪೂರ್ಣವಾಗಿ ಬೇರ್ಪಡಿಸಿ ಚಿಕಿತ್ಸೆಗೊಳಪಡಿಸಲಾಗಿದೆ. ಉಳಿದ ಎಲ್ಲಾ ಕುದುರೆಗಳು ಸುರಕ್ಷಿತವಾಗಿದ್ದು, ವಿಶೇಷ ಆರೈಕೆಯೊಂದಿಗೆ ಅವುಗಳ ಮೇಲೆ ನಿರಂತರವಾಗಿ ನಿಗಾವಹಿಸಲಾಗುತ್ತಿದೆ ಎಂದು ಬಿಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜಿಬಿಎ ಅಧಿಕಾರಿಗಳು ಹಾಗೂ ಪಶುವೈದ್ಯಕೀಯ ಸಿಬ್ಬಂದಿ ಟರ್ಫ್ ಕ್ಲಬ್‌ಗೆ ನಿರಂತರ ಭೇಟಿ ನೀಡಿ ನೈರ್ಮಲ್ಯತೆ ಹಾಗೂ ಸುರಕ್ಷತಾ ಕ್ರಮಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಕುದುರೆಗಳಿಗೆ ಸೋಂಕಿಲ್ಲವೆಂದು ತಿಳಿದ ನಂತರ ರೆಸ್ ಪುನರಾರಂಭ

ಕರ್ನಾಟಕ ಕುದುರೆಗಳ ಟ್ರೈನರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರದೀಪ್ ಅಣ್ಣಯ್ಯ ಮಾತನಾಡಿ, ಯಾವುದೇ ವದಂತಿಗಳಿಗೆ ಆಸ್ಪದ ನೀಡಬೇಕಿಲ್ಲ. ವರದಿಗಳು ಸ್ಪಷ್ಟವಾಗಿದ್ದು, ಮುನ್ನೆಚ್ಚರಿಕೆಗಾಗಿ ಮಾತ್ರ ರೇಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿ ಕುದುರೆಯನ್ನು ನಿಗದಿತ ಅವಧಿಯಲ್ಲಿ ಮೂರು ಬಾರಿ ಪರೀಕ್ಷಿಸಿ ಯಾವುದೇ ಸೋಂಕಿಲ್ಲ ಎಂಬ ವರದಿ ಬಂದ ಬಳಿಕವೇ ರೇಸ್‌ಗಳನ್ನು ಪುನರಾರಂಭಿಸಲಾಗುವುದು ಎಂದು ಬೆಂಗಳೂರು ಟರ್ಫ್ ಕ್ಲಬ್ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.