ಪೇಟ್ರಿಯಾರ್ಕಿ ವಿರುದ್ಧ ‘ಪಿಂಕ್’ ಕ್ರಾಂತಿ: ಬೆಂಗಳೂರಿನಲ್ಲಿ ಮಧ್ಯರಾತ್ರಿಯಲ್ಲಿ ಬೀದಿಗಿಳಿದು ಧ್ವನಿ ಎತ್ತಿದ ಮಹಿಳೆಯರು!
ಪಿತೃಪ್ರಭುತ್ವದ ಧೋರಣೆ ವಿರುದ್ಧ ಮತ್ತು ರಾತ್ರಿ ವೇಳೆ ಸುರಕ್ಷಿತ ಸಾರ್ವಜನಿಕ ಸ್ಥಳಗಳಿಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಮಹಿಳೆಯರು ಬೃಹತ್ ‘ಪಿಂಕ್’ ನಡಿಗೆ ನಡೆಸಿದರು. ಶಿವಾಜಿನಗರದಿಂದ ಫ್ರೀಡಂ ಪಾರ್ಕ್‌ವರೆಗೆ ನೂರಾರು ಮಹಿಳೆಯರು ಗುಲಾಬಿ ಬಣ್ಣದ ಉಡುಪು ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಸಮಾನತೆ ಹಾಗೂ ಭದ್ರತೆಗಾಗಿ ಧ್ವನಿ ಎತ್ತಿದರು.

ಮುಖ್ಯಾಂಶಗಳು
- ಪಿತೃಪ್ರಭುತ್ವದ ವಿರುದ್ಧ ಬೆಂಗಳೂರಿನಲ್ಲಿ ಮಹಿಳೆಯರಿಂದ ಬೃಹತ್ ರಾತ್ರಿ ನಡಿಗೆ ಜರುಗಿತು.
- ಶಿವಾಜಿನಗರದಿಂದ ಫ್ರೀಡಂ ಪಾರ್ಕ್‌ವರೆಗೆ ನೂರಾರು ಮಹಿಳೆಯರು ಪಿಂಕ್ ಧರಿಸಿ ಸಾಗಿದರು.
- ರಾತ್ರಿ ವೇಳೆ ಸುರಕ್ಷಿತ ಸಾರ್ವಜನಿಕ ಸ್ಥಳಗಳಿಗಾಗಿ ಮಹಿಳೆಯರು ಒಗ್ಗಟ್ಟಿನ ಧ್ವನಿ ಎತ್ತಿದರು.
ಬೆಂಗಳೂರು, ಅಕ್ಟೋಬರ್ 04: ನಗರದ ಬೀದಿಗಳು ಅಕ್ಟೋಬರ್ 2ರ ಗಾಂಧಿ ಜಯಂತಿಯ ರಾತ್ರಿ ‘ಗುಲಾಬಿ’ಬಣ್ಣದಿಂದ ತುಂಬಿ ಹೋಗಿದ್ದವು. ಸುರಕ್ಷಿತ ಸಾರ್ವಜನಿಕ ಸ್ಥಳಗಳು ಹಾಗೂ ಪುರುಷ ಪ್ರಧಾನ ವ್ಯವಸ್ಥೆಯ (Patriarchy) ವಿರುದ್ಧ ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿ 300ಕ್ಕೂ ಹೆಚ್ಚು ಮಹಿಳೆಯರು ಗುಲಾಬಿ ಬಣ್ಣದ ವಸ್ತ್ರ ಧರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ರಾತ್ರಿ ಮೆರವಣಿಗೆ (Night March) ನಡೆಸಿದರು.
ಶಿವಾಜಿನಗರದಿಂದ ಫ್ರೀಡಂ ಪಾರ್ಕ್‌ವರೆಗೆ ಜಾಗೃತಿ ನಡಿಗೆ
ರಂಗಭೂಮಿ ಕಲಾವಿದೆ ಹಾಗೂ ಸಾಹಿತಿ ನೂಪುರ್ ಆಜಾದಿ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಈ ವಿಶೇಷ ಪ್ರತಿಭಟನಾ ಮೆರವಣಿಗೆಯು ರಾತ್ರಿ 8 ಗಂಟೆಗೆ ಶಿವಾಜಿನಗರದ ಮಹಾತ್ಮಾ ಗಾಂಧಿ ಪಾರ್ಕ್‌ನಿಂದ ಆರಂಭವಾಯಿತು. ಅಲ್ಲಿಂದ ಕಸ್ತೂರ್ಬಾ ರಸ್ತೆಯ ಮೂಲಕ ಸಾಗಿದ ನೂರಾರು ಮಹಿಳೆಯರು ಕೈಯಲ್ಲಿ ಟಾರ್ಚ್ ಹಾಗೂ ಫ್ಲ್ಯಾಶ್‌ಲೈಟ್‌ಗಳನ್ನು ಬೆಳಗಿಸುತ್ತಾ ಫ್ರೀಡಂ ಪಾರ್ಕ್ ತಲುಪಿ ಸಭೆ ಸೇರಿದರು.
ಸಾರ್ವಜನಿಕ ಸ್ಥಳಗಳು ಕೇವಲ ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ರಾತ್ರಿ ವೇಳೆ ಸುರಕ್ಷಿತವಾಗಿ ಓಡಾಡಲು ಹಕ್ಕಿದೆ ಎಂಬುದನ್ನು ಸಾರಲು ಈ ಮೆರವಣಿಗೆ ನಡೆಸಲಾಯಿತು.
ಗುಲಾಬಿ ಬಣ್ಣದ ಮರುಪರಿಕಲ್ಪನೆ
ಸಾಮಾನ್ಯವಾಗಿ ‘ಗುಲಾಬಿ’ ಬಣ್ಣವನ್ನು ಹೆಣ್ಣಿನ ಮೃದುತ್ವಕ್ಕೆ ಹೋಲಿಸಲಾಗುತ್ತದೆ. ಆದರೆ, ಈ ಮೆರವಣಿಗೆಯಲ್ಲಿ ಭಾಗವಹಿಸಿದ ಮಹಿಳೆಯರು ಅದೇ ಬಣ್ಣವನ್ನು ತಮ್ಮ ಒಗ್ಗಟ್ಟು, ಶಕ್ತಿ ಮತ್ತು ಸಬಲೀಕರಣದ ಸಂಕೇತವಾಗಿ ಮರುಬಳಕೆ ಮಾಡಿದರು. ‘ಮುಂದಿನ ಸರದಿ ನನ್ನದಾ?’ (Am I Next?) ಎಂಬಿತ್ಯಾದಿ ಪ್ರತಿಭಟನಾ ಫಲಕಗಳನ್ನು ಹಿಡಿದು ಮಹಿಳೆಯರು ಹಕ್ಕುಗಳಿಗಾಗಿ ಧ್ವನಿ ಎತ್ತಿದರು.
ಸಾಫ್ಟ್‌ವೇರ್ ಎಂಜಿನಿಯರ್ ರೋನಿತಾ ತಮ್ಮ 7 ವರ್ಷದ ಮಗಳೊಂದಿಗೆ ಭಾಗವಹಿಸಿ, “ನನ್ನ ಮಗಳಿಗೆ ಸುರಕ್ಷಿತ ಭವಿಷ್ಯವನ್ನು ನಿರ್ಮಿಸುವುದು ನನ್ನ ಕರ್ತವ್ಯ” ಎಂದು ತಿಳಿಸಿದರು. 19 ವರ್ಷದ ಜಾನಸಿನಾ ಮಾತನಾಡಿ, “ಫೆಮಿನಿಸಂ ಎಂದರೆ ಕೇವಲ ಹಕ್ಕುಗಳಲ್ಲ, ಅದು ಸಾಮಾಜಿಕ ಸಮಾನತೆ ಮತ್ತು ಬದಲಾವಣೆ” ಎಂದರು.
ಒಟ್ಟಿನಲ್ಲಿ, ಕತ್ತಲಾದ ಮೇಲೆ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬ ಸಮಾಜದ ಮಾನಸಿಕತೆಯನ್ನು ಸವಾಲು ಮಾಡಿ, ರಾತ್ರಿಯಲ್ಲಿ ಬೆಂಗಳೂರಿನ ಬೀದಿಗಳನ್ನು ಮಹಿಳೆಯರು ತಮ್ಮದಾಗಿಸಿಕೊಂಡ ಜಾಗೃತಿ ನಡಿಗೆ ಇದಾಗಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




