ಬೆಂಗಳೂರು: ತಿಲಕನಗರದಲ್ಲಿ ಬೆಂಗಳೂರು ಪೊಲೀಸರಿಂದ ಶಂಕಿತ ಉಗ್ರರ(Suspected Terrorists) ಬಂಧನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೊಂದು ದೊಡ್ಡ ತಲೆ ನೋವು ಶುರುವಾಗಿದೆ. ಶಂಕಿತ ಉಗ್ರರ ಮೊಬೈಲ್ ರಿಟ್ರೀವ್ ಮಾಡುವುದೇ ಪೊಲೀಸರಿಗೆ ತಲೆ ನೋವು ತಂದಿದೆ.
ಇಬ್ಬರು ಶಂಕಿತ ಉಗ್ರರಾದ ಅಖ್ತರ್ ಹುಸೇನ್, ಜುಬಾ ನೋಕಿಯಾದ ಹಳೆ ಮೊಬೈಲ್ ಬಳಸುತ್ತಿದ್ದರು. ಇಬ್ಬರ ಮೊಬೈಲ್ಗಳನ್ನು ಸಿಸಿಬಿ, ಎಫ್ಎಸ್ಎಲ್ಗೆ ನೀಡಿದೆ. ಇಬ್ಬರು ಶಂಕಿತರ ವಿರುದ್ಧ UAPA ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಕುರಿತು ಸಿಸಿಬಿ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದೆ. ಶೀಘ್ರವೇ ಪ್ರಕರಣದ ತನಿಖೆ ಅಧಿಕೃತವಾಗಿ NIAಗೆ ವರ್ಗಾವಣೆ ಮಾಡಲಾಗುತ್ತಿದ್ದು ಸದ್ಯ ಇಬ್ಬರು ಶಂಕಿತ ಉಗ್ರರು ಸಿಸಿಬಿ ಕಸ್ಟಡಿಯಲ್ಲಿದ್ದಾರೆ.
ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ ಸಿಸಿಬಿ; ಅಧಿಕಾರಿಗಳಿಂದ ತೀವ್ರ ವಿಚಾರಣೆ
ಬೆಂಗಳೂರು: ಇಬ್ಬರು ಶಂಕಿತ ಉಗ್ರರನ್ನು (Terrorist) ನಿನ್ನೆ (ಜುಲೈ 25) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಓರ್ವನನ್ನು ಬೆಂಗಳೂರಿನಲ್ಲಿ, ಮತ್ತೊಬ್ಬನನ್ನು ತಮಿಳುನಾಡಿನ ಸೇಲಂನಲ್ಲಿ ಅರೆಸ್ಟ್ ಮಾಡಲಾಗಿದೆ. ತಮಿಳುನಾಡಿನಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರ ಜುಬಾ, ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಬಗ್ಗೆ ಮಾಹಿತಿ ಪಡೆದಿದ್ದ ಬೆಂಗಳೂರು ಸಿಸಿಬಿ ಪೊಲೀಸರು ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಸುಮಾರು 12 ಗಂಟೆಗಳ ಕಾರ್ಯಾಚರಣೆ ನಡೆಸಿ ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಶಂಕಿತ ಉಗ್ರನನ್ನು ಬಂಧಿಸಲಾಗಿದೆ.
ಸದ್ಯ ಸಿಸಿಬಿ ಪೊಲೀಸರು, ಆದಿಲ್ ಅಲಿಯಾಸ್ ಜುಬಾನನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಕರೆ ತಂದು ವಿಚಾರಣೆ ಮಾಡುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಅರೆಸ್ಟ್ ಆಗಿರುವ ಅಖ್ತರ್ ಹುಸೇನ್ ಜೊತೆ ಆತನ ತಮ್ಮ ಕೂಡ ರೂಂನಲ್ಲಿ ವಾಸವಿದ್ದ. ಆತನನ್ನು ಸಹ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸದ್ಯ ರೂಂನಲ್ಲಿ ಅಖ್ತರ್ ಜೊತೆಯಿದ್ದ ನಾಲ್ವರು ಯುವಕರನ್ನೂ ವಿಚಾರಣೆ ಮಾಡಿ ವಾಪಸ್ ಕಳಿಸಿದ್ದಾರೆ.
Published On - 2:52 pm, Tue, 2 August 22