ಬೆಂಗಳೂರು: ನಗರದಲ್ಲಿ ನಡೆದಿದೆ ಎನ್ನಲಾಗ್ತಿರುವ ದೊಡ್ಡ ಮಟ್ಟದ ವೋಟರ್ ಐಡಿ ಸ್ಕ್ಯಾಮ್(Bengaluru voter data theft) ಇದೀಗ ಇಡೀ ದೇಶದ ಗಮನ ಸೆಳೆದಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳ ಜತೆ ಸೇರಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದ್ದ ಚಿಲುಮೆ(Chilume) ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯು, ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷದವರಿಗೆ ನೆರವಾಗುವ ಸಲುವಾಗಿ ಮತದಾರರ ಮಾಹಿತಿ ಸಂಗ್ರಹಿಸುತ್ತಿತ್ತು ಎಂಬ ಮಾಹಿತಿ ಹೊರಬಿದ್ದಿದೆ.
ವೋಟರ್ ಐಡಿ ಪ್ರಕರಣ: ಕಾಂಗ್ರೆಸ್ ವಿರುದ್ಧವೇ ಹಗರಣ ತಿರುಗಿಸಿದ ಬಿಜೆಪಿ, ಮಹತ್ವದ ದಾಖಲೆ ಬಿಡುಗಡೆ
ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿತ್ತು. ಹೀಗೆ ಅನುಮತಿ ನೀಡುವ ವೇಳೆ ಬಿಬಿಎಂಪಿ ನೇಮಿಸಿರುವ ಮತಗಟ್ಟೆ ಮಟ್ಟದ ಅಧಿಕಾರಿಗಳ ನಿಗಾದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಮತದಾರರ ಯಾವುದೇ ರೀತಿಯ ಮಾಹಿತಿ ಸಂಗ್ರಹಿಸಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಅದಕ್ಕೆ ವಿರುದ್ಧವಾಗಿ ಮತದಾರರ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಚಿಲುಮೆ ಸಂಸ್ಥೆ ಅಕ್ರಮ ಎಸಗಿದೆ.
ಹೀಗೆ ಸಂಗ್ರಹಿಸಲಾಗುತ್ತಿದ್ದ ಮತದಾರರ ಮಾಹಿತಿಯನ್ನು ರಾಜಕೀಯ ಪಕ್ಷಗಳು ಅಥವಾ ನಾಯಕರಿಗೆ ಹಣಕ್ಕಾಗಿ ನೀಡುವ ಹುನ್ನಾರವನ್ನೂ ಮಾಡಲಾಗಿತ್ತು ಎಂಬ ಮಾಹಿತಿ ತಿಳಿದುಬಂದಿದೆ.
ಜಾತಿ, ಭಾಷೆಯ ವಿವರ ಸಂಗ್ರಹ
ಬಿಬಿಎಂಪಿ ಅಧಿಕಾರಿಗಳ ಮಾಹಿತಿ ಪ್ರಕಾರ ಚಿಲುಮೆ ಸಂಸ್ಥೆ ನೇಮಿಸಿದ್ದ ಪ್ರತಿನಿಧಿಗಳಿಗೆ ಮಹದೇವಪುರ ವಲಯ ವ್ಯಾಪ್ತಿಯ ಕಂದಾಯ ಅಧಿಕಾರಿ ಬಿಬಿಎಂಪಿಯ ಗುರುತಿನ ಚೀಟಿ ನೀಡಿದ್ದರು. ಅದನ್ನು ಬಳಸಿಕೊಂಡು ಚಿಲುಮೆ ಸಂಸ್ಥೆ ಪ್ರತಿನಿಧಿಗಳು ಮನೆ ಮನೆಗೆ ತೆರಳು ಮತದಾರರ ಜಾತಿ, ಭಾಷೆ, ವಯಸ್ಸು, ಉದ್ಯೋಗ, ಶೈಕ್ಷಣಿಕ ಅರ್ಹತೆ, ವಿವಾಹವಾಗಿದ್ದಾರೆಯೇ? ಅಥವಾ ಇಲ್ಲವೇ? ಎಂಬ ಬಗೆಗಿನ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು. ಅದರ ಜತೆಗೆ ಮತದಾರರ ಆಧಾರ್ ಸಂಖ್ಯೆ, ಫೋನ್ ಸಂಖ್ಯೆ, ಈಮೇಲ್ ಐಡಿ, ವಿಳಾಸ, ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನೂ ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ. ಈ ಮಾಹಿತಿಯನ್ನು ಡಿಜಿಟಲ್ ಸಮೀಕ್ಷಾ ಎಂಬ ಪ್ರತ್ಯೇಕ ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿತ್ತು.
ಈಗಾಗಲೇ 8 ವಲಯಗಳ ಪೈಕಿ 6 ವಲಯಗಳಲ್ಲಿ ಮತದಾರರ ಮಾಹಿತಿ ಸಂಗ್ರಹಿಸುವ ಕಾರ್ಯ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಹೀಗೆ ಸಂಗ್ರಹಿಸಲಾದ ಮಾಹಿತಿ ಹಾಗೂ ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ ನಂತರ ಅದನ್ನು ರಾಜಕೀಯ ನಾಯಕರ ಜತೆ ಮಾತುಕತೆ ನಡೆಸಿ ಮತದಾರರ ಮಾಹಿತಿಯನ್ನು ನೀಡುವ ಕುರಿತು ವ್ಯವಹಾರ ಮಾಡಲಾಗುತ್ತಿದೆ. ಆಮೂಲಕ ರಾಜಕೀಯ ಪಕ್ಷಗಳು ಮುಂದಿನ ಬಿಬಿಎಂಪಿ ಮತ್ತು ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಸಹಕಾರಿಯಾಗುವಂತೆ ಮಾಡಲಾಗುತ್ತಿದೆ.
ಬಿಬಿಎಂಪಿ ನಡೆ, ಅನುಮಾನದ ಕಡೆ
ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆ ಆ. 19ರಂದು ಬಿಬಿಎಂಪಿಗೆ ಅರ್ಜಿ ಸಲ್ಲಿಸಿತ್ತು. ಹೀಗೆ ಅರ್ಜಿ ಸಲ್ಲಿಸಿದ ನಂತರ ಸಂಸ್ಥೆೆಯ ಪೂರ್ವಾಪರ ಪರಿಶೀಲಿಸದ ಅಧಿಕಾರಿಗಳು ಒಂದೇ ದಿನದಲ್ಲಿ ಅಂದರೆ ಆ. 20ರಂದು ಸಂಸ್ಥೆಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಅನುಮತಿ ನೀಡಿದ್ದಾರೆ. ಖುದ್ದು ಮುಖ್ಯ ಆಯುಕ್ತರು ಈ ಅನುಮತಿ ಪತ್ರಕ್ಕೆ ಸಹಿ ಹಾಕಿದ್ದಾರೆ.
9 ಗಂಟೆ ಕೆಲಸ, 1,500 ರೂ. ದುಡಿಮೆ
2018ರಿಂದಲೂ ಚಿಲುಮೆ ಸಂಸ್ಥೆೆ ಬಿಬಿಎಂಪಿ ಜತೆಗೂಡಿ ಈ ಕಾರ್ಯ ಮಾಡುತ್ತಿದೆ. ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಿಲುಮೆ ಸಂಸ್ಥೆ ಬಿಬಿಎಂಪಿಯಿಂದ ಯಾವುದೇ ರೀತಿಯ ಹಣವನ್ನೂ ಪಡೆದಿಲ್ಲ. ಸದ್ಯ ಚಿಲುಮೆ ಸಂಸ್ಥೆ ಅಡಿಯಲ್ಲಿ 100ಕ್ಕೂ ಹೆಚ್ಚಿನ ಮಂದಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ದಿನದ ಲೆಕ್ಕದಲ್ಲಿ ಮತ್ತು ಮಾಹಿತಿ ಸಂಗ್ರಹದ ಪ್ರಮಾಣದ ಆಧಾರದ ಮೇಲೆ ವೇತನ ಪಾವತಿಸಲಾಗುತ್ತಿದೆ. ಚಿಲುಮೆ ಸಂಸ್ಥೆಯ ಈ ಹಿಂದಿನ ಜಾಹೀರಾತಿನಂತೆ ಬೆಳಗ್ಗೆ 8.30ರಿಂದ ಸಂಜೆ 5.30ರವರೆಗೆ ಕೆಲಸ ಮಾಡಿ ಮನೆಮನೆಗೆ ತೆರಳಿ ಮೊಬೈಲ್ ಅಪ್ಲಿಕೇಷನ್ ಮೂಲಕ ಸಮೀಕ್ಷೆ ಮಾಡಲು 1,200ರಿಂದ 1,500 ರೂ.ವರೆಗೆ ವೇತನ ನೀಡಲಾಗುತ್ತದೆ ಎಂದು ತಿಳಿಸಿದೆ. ಆ ಮೂಲಕ ಬಿಬಿಎಂಪಿಯಿಂದ ಹಣ ಪಡೆಯದಿದ್ದರೂ ಕೆಲಸಗಾರರಿಗೆ ಮಾತ್ರ ಹೆಚ್ಚಿನ ವೇತನ ನೀಡುತ್ತಿತ್ತು. ಇದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಡುವಂತಹದ್ದಾಗಿದೆ.
ಆರೂವರೆ ಲಕ್ಷ ಮತದಾರರ ಹೆಸರು ಡಿಲೀಟ್
ಬಿಬಿಎಂಪಿ ನಡೆಸಿದ ಮತದಾರರ ಪರಿಷ್ಕರಣೆ ಪಟ್ಟಿಯಲ್ಲಿ ಆರೂವರೆ ಲಕ್ಷ ಮಂದಿ ಮತದಾರರ ಹೆಸರು ಡಿಲೀಟ್ ಆಗಿದೆ.ಇದರ ಹಿಂದೆ ಚಿಲುಮೆ ಸಂಸ್ಥೆಯ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈಗಾಗಲೇ ಚುನಾವಣಾ ಆಯೋಗ ತನಿಖೆ ನಡೆಸುತ್ತಿದ್ದು ಕಾಂಗ್ರೆಸ್ ನಾಯಕರು ವೋಟರ್ ಲಿಸ್ಟ್ ನಿಂದ ಹೆಸರು ಡಿಲೀಟ್ ಆಗಿರುವ ಹಿಂದೆ ಚಿಲುಮೆ ಸಂಸ್ಥೆ ಕೈವಾಡ ಇದೆ ಅಂತಾ ಆರೋಪ ಮಾಡ್ತಿದೆ. ಈಗ ಜನ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದಿಯೇ ಅಂಥಾ ಒಮ್ಮೆ ಪರಿಶೀಲನೆ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ತಕ್ಷಣ ಬಿಬಿಎಂಪಿ ಅಧಿಕಾರಿಗಳನ್ನ ಸಂಪರ್ಕ ಮಾಡಿ ಮತದಾರರ ಪಟ್ಟಿಗೆ ಸೇರ್ಪಡೆ ಆಗಬೇಕಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಹೇಳಿಕೆ
ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಸಂಗ್ರಹ ಕುರಿತಂತೆ ದೂರು ದಾಖಲಿಸಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಸ್ಥೆಯು ಮತದಾರರಿಂದ ಯಾವೆಲ್ಲ ಮಾಹಿತಿ ಸಂಗ್ರಹಿಸುತ್ತಿತ್ತು ಎಂಬ ಬಗ್ಗೆ ಇನ್ನು ಸ್ಪಷ್ಟತೆಯಿಲ್ಲ. ತನಿಖೆ ನಂತರ ವಿಚಾರ ತಿಳಿಯಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:45 pm, Sat, 19 November 22