ವೋಟರ್​ ಐಡಿ ಅಕ್ರಮ ಪ್ರಕರಣ: ಇಬ್ಬರು ಐಎಎಸ್​​ ಅಧಿಕಾರಿಗಳ ಅಮಾನತು ಆದೇಶ ವಾಪಸ್

| Updated By: Rakesh Nayak Manchi

Updated on: Dec 24, 2022 | 11:17 AM

ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಇಬ್ಬರು ಐಎಎಸ್​ ಅಧಿಕಾರಿಗಳ ಅಮಾನತು ಆದೇಶವನ್ನು ವಾಪಸ್ ಪಡೆಯಲಾಗಿದ್ದು, ಕೆ.ಶ್ರೀನಿವಾಸ್​​, ರಂಗಪ್ಪ ಅವರು ಸೇವೆಗೆ ನಿಯುಕ್ತಿಗೊಳಿಸಲಾಗಿದೆ.

ವೋಟರ್​ ಐಡಿ ಅಕ್ರಮ ಪ್ರಕರಣ: ಇಬ್ಬರು ಐಎಎಸ್​​ ಅಧಿಕಾರಿಗಳ ಅಮಾನತು ಆದೇಶ ವಾಪಸ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣ (Voter ID Revision Illegal Case)ದಲ್ಲಿ ಕೇವಲ ಕೆಳಹಂತದ ಅಧಿಕಾರಿಗಳು ಭಾಗಿಯಾಗಿದ್ದರು ಎನ್ನುವಷ್ಟರಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಶಾಮೀಲಾಗಿರುವುದು ತಿಳಿದುಬಂದಿತ್ತು. ಹೀಗಾಗಿ ಇಬ್ಬರು ಐಎಎಸ್‌ ಅಧಿಕಾರಿಗಳಾದ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿತ್ತು. ಆದರೀಗ ಅಧಿಕಾರಿಗಳ ಅಮಾನತು ಆದೇಶ ವಾಪಸ್ ಪಡೆಯಲಾಗಿದ್ದು, ಇಬ್ಬರು ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಬೆಂಗಳೂರು ಲಿ. (Rajiv Gandhi Housing Corporation Ltd. Bangalore) ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಶ್ರೀನಿವಾಸ್ ಅವರನ್ನು ನಿಯುಕ್ತಿಗೊಳಿಸಲಾಗಿದ್ದು, ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್, ಬೆಂಗಳೂರು (Karnataka State Minerals Corporation Ltd. Bangalore) ಇದರ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿ ಎಸ್​​.ರಂಗಪ್ಪ ಅವರನ್ನು ನಿಯುಕ್ತಿಗೊಳಿಸಲಾಗಿದೆ.

ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣದಲ್ಲಿ ಕೇವಲ ಕೆಳಹಂತದ ಅಧಿಕಾರಿಗಳು ಭಾಗಿಯಾಗಿದ್ದರು ಎನ್ನಲಾಗಿತ್ತು. ಬಳಿಕ ಇಬ್ಬರು ಐಎಎಸ್‌ ಅಧಿಕಾರಿಗಳಾದ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಭಾಗಿಯಾಗಿರುವುದು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಈ ಇಬ್ಬರನ್ನು ಕೇಂದ್ರ ಚುನಾವಣೆ ಆಯೋಗ ಅಮಾನತು ಮಾಡಿತ್ತು.

ಇದನ್ನೂ ಓದಿ: ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣ, ಪ್ರಜಾಪ್ರಭುತ್ವ ಎತ್ತಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ನಿವೃತ್ತ ನ್ಯಾ.ಸಂತೋಷ ಹೆಗ್ಡೆ

ಮತದಾರ ಪಟ್ಟಿಯಿಂದ ಮತದಾರರನ್ನು ತೆಗೆದು ಹಾಕಿರುವುದು, ಸೇರ್ಪಡೆ, ತಿದ್ದುಪಡಿ ಬಗ್ಗೆ ಪೂರ್ಣಪರಿಶೀಲನೆಗಾಗಿ ಏಳು ಜನ ಐಎಎಸ್ ಅಧಿಕಾರಿಗಳ‌ನ್ನು ನೇಮಕ ಮಾಡಿ ಕೇಂದ್ರ ಚುನಾವಣಾ ಆಯೋಗದಿಂದ ಆದೇಶ ಹೊರಡಿಸಲಾಗಿದೆ. ಅದರಲ್ಲೂ ಚಿಕ್ಕಪೇಟೆ, ಶಿವಾಜಿನಗರ, ಮಹಾದೇವಪುರ ವಲಯದಲ್ಲಿ ವಿಶೇಷವಾಗಿ ಪರಿಶೀಲನೆ ಮಾಡಲು ಸೂಚನೆ ನೀಡಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ತನಿಖೆಗೆ ಐಎಎಸ್ ಅಧಿಕಾರಿ ವಿಶಾಲ್ ಅವರನ್ನು ನೇಮಕ ಮಾಡಲಾಗಿದೆ. ಮಹಾದೇವಪುರ ವಲಯಕ್ಕೆ ಅಜೇಯ್ ನಾಗಭೂಷಣ್ ಹಾಗೂ ಶಿವಾಜಿನಗರ ಕ್ಷೇತ್ರಕ್ಕೆ ಪ್ರಿಯಾಂಕಾ ಮೇರಿ ಅವರನ್ನು ನೇಮಿಸಿದೆ.

ಖಾಸಗಿ ಸಂಸ್ಥೆಯಿಂದ ಮತದಾರರ ಮಾಹಿತಿ ಸಂಗ್ರಹಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಿಂದ ಮತದಾರರ ಹೆಸರು ಡಿಲೀಟ್ ಆದವರ ಬಗ್ಗೆ ಕೂಲಂಕಷವಾಗಿ ಪರಿಶೀಲನೆಗೆ ಆದೇಶಿಸಿದ್ದು, ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ, ಹಾಗೂ ಬೆಂಗಳೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಕೂಡಾ ಅಮಾನತು ಮಾಡಲಾಗಿತ್ತು. ಅಲ್ಲದೇ ಇಬ್ಬರು ಅಧಿಕಾರಿಗಳ ವಿರುದ್ಧ ತನಿಖೆಗೆ ಕೇಂದ್ರ ಚುನಾವಣಾ ಆಯೋಗ ಆದೇಶ ನೀಡಿತ್ತು.

ಇದನ್ನೂ ಓದಿ: ವೋಟರ್ ಐಡಿ ಅಕ್ರಮ: ಮತ್ತೆ ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಣೆಗೆ ಡಿ.24ರವರೆಗೆ ಸಮಯಾವಕಾಶ

ಏನಿದು ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ?

ಮತದಾರರ ವೈಯಕ್ತಿಕ ಮಾಹಿತಿ (ದತ್ತಾಂಶ) ಕಳವು ಪ್ರಕರಣದ ಸಂಬಂಧ ಚಿಲುವೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿರುದ್ಧ ಹಲಸೂರುಗೇಟ್‌ ಮತ್ತು ಕಾಡುಗೋಡಿ ಪೊಲೀಸ್‌ ಠಾಣೆಗಳಲ್ಲಿ ಬಿಬಿಎಂಪಿ ದೂರು ದಾಖಲಿಸಿತ್ತು. ಮತದಾರರ ಪಟ್ಟಿವಿಶೇಷ ಪರಿಷ್ಕರಣೆ 2023 ಕಾರ್ಯಚಟುವಟಿಕೆಗಳ ಕುರಿತು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸಲು ಚಿಲುಮೆ ಶೈಕ್ಷಣಿಕ ಸಾಂಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಷರತ್ತುಬದ್ಧ ಅನುಮತಿಯನ್ನು ಬಿಬಿಎಂಪಿ ನೀಡಿತ್ತು.

ಈ ಸಂಸ್ಥೆಯ ವಿರುದ್ಧ ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಬಗ್ಗೆ ದೂರು ಬಂದಿದ್ದು ಷರತ್ತು ಉಲ್ಲಂಘಿಸಿರುವುದನ್ನು ಪರಿಗಣಿಸಿ ಅನುಮತಿ ಪತ್ರವನ್ನು ರದ್ದುಪಡಿಸಲಾಗಿದೆ. ಜೊತೆಗೆ ಈ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರು ಹಲಸೂರುಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:17 am, Sat, 24 December 22