ಬೆಂಗಳೂರು ಹೃದಯಭಾಗದಲ್ಲೇ ಜಲಕ್ಷಾಮ: ನೀರಿಗಾಗಿ ನಿದ್ದೆಬಿಟ್ಟ ರಾಜಾಜಿನಗರದ ಜನ, ಜಲಮಂಡಳಿ ವಿರುದ್ಧ ಆಕ್ರೋಶ
Bengaluru Water Crisis: ರಾಜಾಜಿನಗರದ ಚಾಮುಂಡಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ್ದು, 3,000ಕ್ಕೂ ಹೆಚ್ಚು ಕುಟುಂಬಗಳು ಹನಿ ನೀರಿಗಾಗಿ ಮಧ್ಯರಾತ್ರಿ ನಿದ್ದೆ ಬಿಟ್ಟು ಕಾಯುವಂತಾಗಿದೆ. ದಿನಕ್ಕೆ ಕೇವಲ ಅರ್ಧ ಗಂಟೆ ನೀರು ಬಿಡಲಾಗುತ್ತಿದ್ದು, ಅತೃಪ್ತ ನಿವಾಸಿಗಳು ಜಲಮಂಡಳಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, ಏಪ್ರಿಲ್ 18: ಒಂದೆಡೆ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಆಟೋ ಗ್ಯಾಸ್ ಸಿಗದೆ ಚಾಲಕರು ಹೈರಾಣಾಗಿ ಕ್ಯೂ ನಿಲ್ಲುವಂತಾಗಿದ್ದರೆ, ಮತ್ತೊಂದೆಡೆ ಕುಡಿಯುವ ನೀರಿಗಾಗಿ ಜನ ಕಿಲೋಮೀಟರ್‌ಗಟ್ಟಲೆ ಅಲೆಯುವಂತಾಗಿದೆ. ನಗರದ ಹೃದಯಭಾಗದಲ್ಲಿರುವ ರಾಜಾಜಿನಗರದ ಚಾಮುಂಡಿನಗರದ ನಿವಾಸಿಗಳ ಸ್ಥಿತಿ ಈಗ ಕರುಣಾಜನಕವಾಗಿದ್ದು, ಹನಿ ನೀರಿಗಾಗಿ ಮಧ್ಯರಾತ್ರಿ ನಿದ್ದೆ ಬಿಟ್ಟು ಕಾಯುವ ಪರಿಸ್ಥಿತಿ ಬಂದೊದಗಿದೆ. ರಾಜಾಜಿನಗರದ ವಾರ್ಡ್ ನಂ. 130ರ 5ನೇ ಬ್ಲಾಕ್ ವ್ಯಾಪ್ತಿಯ ಚಾಮುಂಡಿನಗರದಲ್ಲಿ ಸುಮಾರು 3,000ಕ್ಕೂ ಹೆಚ್ಚು ಕುಟುಂಬಗಳಿವೆ. ಆದರೆ, ಇಲ್ಲಿಗೆ ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಪೂರೈಸುವ ನೀರು ಯಾರ ಕೈಗೂ ಎಟುಕುತ್ತಿಲ್ಲ.
ದಿನಕ್ಕೆ ಕೇವಲ ಅರ್ಧ ಗಂಟೆ ಮಾತ್ರ ನೀರು ಬಿಡಲಾಗುತ್ತಿದೆ, ಅದೂ ಕೂಡ ಮಧ್ಯರಾತ್ರಿ 2 ಗಂಟೆಗೆ ಅಥವಾ ಮುಂಜಾನೆ 4 ಗಂಟೆಗೆ! ಕುಟುಂಬದ ಒಬ್ಬರಾದರೂ ನಿದ್ದೆ ಬಿಟ್ಟು ಎದ್ದರೆ ಮಾತ್ರ ಅಂದು ನೀರು ಹಿಡಿಯಲು ಸಾಧ್ಯ. ಇಲ್ಲದಿದ್ದರೆ ಅಂದು ಉಪವಾಸ ಅನಿವಾರ್ಯ ಎಂಬಂತಾಗಿದೆ.
ನೀರು ಬರಲ್ಲ, ಬಿಲ್ ಮಾತ್ರ ತಪ್ಪಲ್ಲ!
‘ಕಾವೇರಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ, ಆದರೆ ಬಿಡಬ್ಲ್ಯೂಎಸ್‌ಎಸ್‌ಬಿ ಬಿಲ್ ನೀಡುವುದನ್ನು ಮಾತ್ರ ಮರೆತಿಲ್ಲ’ ಎಂದು ನಿವಾಸಿಗಳು ಕಿಡಿಕಾರಿದ್ದಾರೆ. ವಾರಕ್ಕೆ ಕನಿಷ್ಠ ಮೂರು ಟ್ಯಾಂಕರ್ ನೀರನ್ನು ಜನರು ಹಣ ಕೂಡಿಸಿ ಖರೀದಿ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಟ್ಯಾಕ್ಸ್ ಮತ್ತು ನೀರಿನ ಬಿಲ್ ಕಟ್ಟಿ, ಇತ್ತ ಟ್ಯಾಂಕರ್ ಕೂಡ ಹಣ ನೀಡಿ ಜನರು ಆರ್ಥಿಕವಾಗಿ ಕಂಗೆಟ್ಟಿದ್ದಾರೆ. ಚುನಾವಣಾ ಸಮಯದಲ್ಲಿ ಭರವಸೆ ನೀಡುವ ಜನಪ್ರತಿನಿಧಿಗಳು ಈಗ ಇತ್ತ ಸುಳಿಯುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೋರಾಟದ ಎಚ್ಚರಿಕೆ
ಮೂಲಭೂತ ಸೌಕರ್ಯವಾದ ಕುಡಿಯುವ ನೀರಿಗೂ ಇಷ್ಟೊಂದು ಪರದಾಟ ನಡೆಸಬೇಕಿರುವುದು ವಿಪರ್ಯಾಸ. ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಶಾಶ್ವತ ಪರಿಹಾರ ಕಲ್ಪಿಸದಿದ್ದರೆ, ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಚಾಮುಂಡಿನಗರದ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಈ ಬಾರಿಯ ಬೇಸಿಗೆ ಸುಲಭವಿಲ್ಲ! ಕುಡಿಯುವ ನೀರಿಗೆ ಎದುರಾಗಲಿದೆ ಹಾಹಾಕಾರ, 26 ಜಿಲ್ಲೆಗಳ ಸ್ಥಿತಿ ಶೋಚನೀಯ
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




