BESCOM: ಗ್ರಾಹಕರಿಗೆ ದಿನದ 24 ಗಂಟೆಗಳ ಸೇವೆ ನೀಡಲಿರುವ ವೆಬ್ ಪೋರ್ಟಲ್
ಕೆಲವು ಗಂಟೆಗಳ ಕಾಲ ಸೇವೆ ನೀಡುತ್ತಿದ್ದ ಬೆಸ್ಕಾಂ ಪೋರ್ಟಲ್ ಇನ್ನು ಮುಂದೆ ದಿನದ 24 ಗಂಟೆಗಳ ಕಾಲ ಗ್ರಾಹಕರಿಗೆ ಲಭ್ಯವಾಗಲಿದೆ. ಎಲ್ಲಾ 5 ಎಸ್ಕಾಂಗಳ ಗ್ರಾಹಕರಿಗೆ 24 ಗಂಟೆಗಳ ಸೇವೆಯನ್ನು ಒದಗಿಸುತ್ತದೆ.
ಬೆಂಗಳೂರು: ಆರ್-ಎಪಿಡಿಆರ್‌ಪಿ (R-APDRP) ತಂತ್ರಾಂಶದಲ್ಲಿ ಕಂಡುಬಂದ ದೋಷದಿಂದಾಗಿ ಬೆಸ್ಕಾಂ (BESCOM) ಗ್ರಾಹಕರು ಸೇವೆಗಳನ್ನು ಪಡೆಯಲು ಪರದಾಡುವಂತಾಗಿತ್ತು. ಆದರೆ ಇನ್ನು ಮುಂದೆ ದಿನದ 24 ಗಂಟೆಗಳ ಕಾಲ ವೆಬ್ ಪೋರ್ಟಲ್ (BESCOM Web Portal) ಗ್ರಾಹಕರಿಗೆ ಲಭ್ಯವಾಗಲಿದೆ. ಜನಸ್ನೇಹಿ ವಿದ್ಯುತ್ ಸೇವೆಗಳು, ಹೊಸ ವಿದ್ಯುತ್ ಸಂಪರ್ಕ ನೋಂದಣಿ ಸೇರಿದಂತೆ ವಿವಿಧ ವಿದ್ಯುತ್ ಸೇವೆಗಳಿಗಾಗಿ ರೂಪಿಸಿದ ಆರ್-ಎಪಿಡಿಆರ್‌ಪಿ ತಂತ್ರಾಂಶದ ದೋಷಗಳನ್ನು ಸರಿಪಡಿಸಲಾಗಿದೆ. ಆ ಮೂಲಕ ಎಲ್ಲಾ 5 ಎಸ್ಕಾಂಗಳ ಗ್ರಾಹಕರಿಗೆ ದಿನದ 24 ಗಂಟೆಗಳ ಸೇವೆಯನ್ನು ಒದಗಿಸಲಿದೆ. ಈ ಹಿಂದೆ ವೆಬ್ ಪೋರ್ಟಲ್ನಲ್ಲಿ ಗ್ರಾಹಕರಿಗೆ ಲಾಗ್ ಇನ್ ಆಗಲು ಬೆಸ್ಕಾಂ ವ್ಯಾಪ್ತಿಯಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರ ವರೆಗೆ ಸಮಯ ನಿಗದಿ ಮಾಡಲಾಗಿತ್ತು. ಉಳಿದ ನಾಲ್ಕು ಎಸ್ಕಾಂಗಳಿಗೆ ಮಧ್ಯಾಹ್ನ 1.30ರಿಂದ ಸಂಜೆ 7ರ ವರೆಗೆ ಸಮಯ ನಗದಿ ಮಾಡಲಾಗಿತ್ತು.
ಇದನ್ನೂ ಓದಿ: ಶಿವಮೊಗ್ಗ, ಬಳ್ಳಾರಿಯಲ್ಲಿ ಬೀದಿನಾಯಿ ದಾಳಿಗೆ ಒಟ್ಟು ಮೂವರು ಮಕ್ಕಳ ಸಾವು: ಮತ್ತೆ ಗರಿಗೆದರಿದ ನಾಯಿ ನಿರ್ವಹಣೆ ಚರ್ಚೆ
ತಂತ್ರಾಂಶವು ಹಳೆಯದಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಒಮ್ಮೆಲೇ ಲಾಗ್ಇನ್ ಆದಾಗ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. 2022ರ ಜುಲೈನಲ್ಲಿ ಆರಂಭವಾದ ಈ ಸಮಸ್ಯೆ ನಂತರ ಸಾಫ್ಟ್ವೇರ್ ನಿರ್ವಹಣೆಗೆ ಅಡಚಣೆ ಉಂಟಾಗಿತ್ತು. ಈ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದ ಇನ್ಫೋಸಿಸ್ ನಿರ್ವಹಣೆ ಜವಾಬ್ದಾರಿಯಿಂದ ಹಿಂದೆಸರಿದಿದ್ದರಿಂದ ಇನ್‌ಫೈನೈಟ್ ಕಂಪ್ಯೂಟರ್ ಸಲ್ಯೂಷನ್ಸ್ ಕಂಪನಿಯು ಟೆಂಡರ್ನಲ್ಲಿ ಆಯ್ಕೆಯಾಯಿತು. ಅದರಂತೆ ತಂತ್ರಾಂಶದ ನಿರ್ವಹಣೆಯ ಕಾರ್ಯಾದೇಶವನ್ನು ಇನ್ಫೈನೈಟ್ಗೆ ನೀಡಲಾಗಿದೆ. ಸದ್ಯ ತಂತ್ರಾಂಶದ ಲೋಪದೋಷಗಳನ್ನು ಶಾಶ್ವತವಾಗಿ ಬಗೆಹರಿಸಲು ಹೊಸ ತಂತ್ರಾಂಶವನ್ನು ಸಿದ್ಧಪಡಿಸಲಾಗುತ್ತಿದ್ದು, ಇನ್ನು 4-5 ತಿಂಗಳಲ್ಲಿ ಹೊಸ ತಂತ್ರಾಂಶ ಕಾರ್ಯಾರಂಭ ಮಾಡಲಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹೇಳಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ