ಬೆಂಗಳೂರು: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆಪ್ಟೆಂಬರ್ 27(ಇಂದು) ಮಣ್ಣಿನ ಮಕ್ಕಳು ಭಾರತ್ ಬಂದ್‌ಗೆ ಕರೆಕೊಟ್ಟಿದ್ದಾರೆ. ಈಗಾಗಲೇ ಹಲವೆಡೆ ಪ್ರತಿಭಟನೆಗಳು ಶುರುವಾಗಿವೆ. ಆದ್ರೆ ಭಾರತ್ ಬಂದ್ ನಡುವೆಯೂ SSLC ಪೂರಕ ಪರೀಕ್ಷೆ ನಡೆಸಲು ಬೋರ್ಡ್ ಮುಂದಾಗಿದ್ದು ಇಂದು, ನಾಡಿದ್ದು SSLC ಪೂರಕ ಪರೀಕ್ಷೆ ನಿಗದಿಯಾಗಿದೆ.
ಕೋವಿಡ್ ಭೀತಿ ಹಿನ್ನಲೆ ಹಲವು ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದರು. ಹೀಗಾಗಿ ಪೂರಕ ಪರೀಕ್ಷೆ ಬರೆಯುವ ಆಯ್ಕೆಯನ್ನ ತೆಗೆದುಕೊಂಡಿದ್ದರು. ಅದರಂತೆ ಈಗ ವಿದ್ಯಾರ್ಥಿಗಳಿಗೆ ಇಂದು ಮತ್ತು ನಾಡಿದ್ದು ಪರೀಕ್ಷೆ ನಡೆಸಲು ಪರೀಕ್ಷಾ ಮಂಡಳಿ ನಿರ್ಧರಿಸಿದೆ. ಆದರೆ ಇಂದು ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಜಾರಿ ವಿರೋಧಿಸಿ ಭಾರತ್ ಬಂದ್ ಗೆ ಕರೆ ಕೊಟ್ಟಿವೆ. ಆತಂಕ ಹಾಗೂ ಗೊಂದಲದಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಮುಂದಾಗಿವೆ.
ಇಂದು ಭಾರತ್ ಬಂದ್ ಹಿನ್ನೆಲೆ ಬೆಂಗಳೂರು ನಗರ ಹಾಗೂ ನೃಪತುಂಗ ವಿವಿ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಆದರೆ ಬೆಂಗಳೂರು ಉತ್ತರ ವಿವಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ. ಬೆಂ. ಉತ್ತರ ವಿವಿ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಗೈರಾದ್ರೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶವಿಲ್ಲ.
ದಾವಣಗೆರೆ ವಿವಿಯ ಎಲ್ಲ ಪರೀಕ್ಷೆಗಳು ನಡೆಯಲಿವೆ
ಇನ್ನು ಮತ್ತೊಂದೆಡೆ ದಾವಣಗೆರೆ ವಿವಿಯ ಎಲ್ಲ ಪರೀಕ್ಷೆಗಳು ನಡೆಯಲಿವೆ ಎಂದು ವಿವಿ ಉಪಕುಲಪತಿ ಪ್ರೊ.ಶರಣಪ್ಪ ಹಲಸೆ ಮಾಹಿತಿ ನೀಡಿದ್ದಾರೆ. ಭಾರತ್ ಬಂದ್ ಹಿನ್ನೆಲೆ ಪರೀಕ್ಷೆಯನ್ನು ಮುಂದೂಡಿಲ್ಲ. ಇಂದು ವಿವಿಯ ಎಲ್ಲ ಪರೀಕ್ಷೆಗಳು ನಡೆಯಲಿವೆ. ಮುಂದೂಡಿಕೆ ಮಾಡುವಂತೆ ಯಾವುದೇ ಮನವಿ ಬಂದಿಲ್ಲ. ಬಸ್ ಸಂಚಾರ ಇರುವ ಹಿನ್ನಲೆ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇಲ್ಲ. ಯಾಥಾಪ್ರಕಾರ ಪರೀಕ್ಷೆಗಳನ್ನು ನಡೆಸಲು ದಾವಣಗೆರೆ ವಿಶ್ವವಿದ್ಯಾನಿಲಯ ಮುಂದಾಗಿದೆ ಎಂದು ಪ್ರೊ.ಶರಣಪ್ಪ ಹಲಸೆ ವಿದ್ಯಾರ್ಥಿಗಳ ಗೊಂದಲವನ್ನು ದೂರ ಮಾಡಿದ್ದಾರೆ.
ಅಕ್ಕಮಹಾದೇವಿ ಮಹಿಳಾ ವಿವಿ ಪರೀಕ್ಷೆಗಳು ಮುಂದೂಡಿಕೆ
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಸ್ನಾತಕ, ಸ್ನಾತಕೋತ್ತರ, ಬಿಎಡ್ ಪರೀಕ್ಷೆಗಳು ಮುಂದೂಡಿವೆ. ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನ ಮುಂದೂಡಲಾಗಿದೆ. ಭಾರತ್ ಬಂದ್ ಕಾರಣ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ತೊಂದರೆಯಾಗಬಾರದೆಂಬ ಕಾರಣದಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬಿಎಡ್ ವಿದ್ಯಾರ್ಥಿಗಳಿಗೆ ಇಂದು ನಡೆಯಬೇಕಿದ್ದ ಪರೀಕ್ಷೆ ನಾಳೆ ನಡೆಸಲು ನಿರ್ಧಾರ ಮಾಡಲಾಗಿದೆ.
ಸ್ನಾತಕ/ಸ್ನಾತಕೋತ್ತರ ವಿದ್ಯಾರ್ಥಿಗಳ ಮುಂದೂಡಿಕೆಯಾದ ಪರೀಕ್ಷೆಯ ದಿನಾಂಕ ನಂತರ ತಿಳಿಸಲಾಗುವುದು ಎಂದು ವಿವಿ ಮೌಲ್ಯಮಾಪನ ಕುಲಸಚಿವರು ಮಾಹಿತಿ ನೀಡಿದ್ದಾರೆ. ಪರೀಕ್ಷೆ ಮುಂದುಡಿಕೆ ಕುರಿತು ನಿನ್ನೆಯೇ ಪ್ರಕಟನೆ ನೀಡಬೇಕಿದ್ದ ವಿವಿ ಇಂದು ತಡವಾಗಿ ಮಾಹಿತಿ ನೀಡಿದೆ.
ಇಂದು ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿಕೆ
ವಿಜಯನಗರದ ಶ್ರೀ ಕೃಷ್ಣದೇವರಾಯ ವಿವಿ ಪರೀಕ್ಷೆಗಳು ಕೂಡ ಮುಂದೂಡಲ್ಪಟ್ಟಿವೆ. ಇಂದು ನಡೆಯ ಬೇಕಿದ್ದ ಶ್ರೀ ಕೃಷ್ಣದೇವರಾಯ ವಿವಿಯ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ಮುಂದೂಡಿಕೆಯಾಗಿವೆ.
ಇದನ್ನೂ ಓದಿ: Bharat Bandh Live: ಕೃಷಿ ಕಾಯ್ದೆ- ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್
Published On - 8:15 am, Mon, 27 September 21