ಬೆಂಗಳೂರು: ಕನ್ನಡ ರಾಜ್ಯೋತ್ಸವದ ಹೆಸರಿನಲ್ಲಿ ಅಬಕಾರಿ ಇಲಾಖೆಯು ಅಕ್ರಮವಾಗಿ ಹಣ ಲೂಟಿ ಮಾಡಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿವೆ. ಬೆಂಗಳೂರಿನ ಬಾರ್, ವೈನ್ಸ್, ಪಬ್ಗಳಿಗೆ ಭುವನೇಶ್ವರಿ ಫೋಟೊ ನೀಡಿ ₹ 1 ಸಾವಿರದಿಂದ ₹ 5 ಸಾವಿರದವರೆಗೆ ಹಣ ಪಡೆಯಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಚಿತ್ರಗಳಲ್ಲಿರುವ ಕನ್ನಡಾಂಬೆ ಭುವನೇಶ್ವರಿಯ ಪ್ರತೀಕವಾಗಿರುವ ಕಲಾಕೃತಿಗಳಲ್ಲಿ ಕನ್ನಡ ಬಾವುಟದ ಬದಲು ಬೇರೊಂದು ಬಾವುಟ ಕಾಣಿಸಿಕೊಂಡಿರುವುದು ಜನರಲ್ಲಿ ಆಕ್ರೋಶ ಮೂಡಿಸಿದೆ. ಹಲವು ಬಾರ್ ಮಾಲೀಕರು ಸಹ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣ ಮಾಡುವ ಧಾವಂತದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭುವನೇಶ್ವರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಕನ್ನಡ ರಾಜ್ಯೋತ್ಸವ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು ಭುವನೇಶ್ವರಿಯ ಕೈಗೆ ಕೆಂಪು-ಹಳದಿಯ ಕನ್ನಡ ಬಾವುಟದ ಬದಲು ಬೇರೆ ಬಾವುಟ ನೀಡಿದ್ದಾರೆ ಎಂದು ದೂರಲಾಗಿದೆ. ಭುವನೇಶ್ವರಿ ಫೋಟೋ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಚಿಹ್ನೆಯೂ ಇದೆ.
ಅಬಕಾರಿ ಇಲಾಖೆ ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಬಾರ್, ವೈನ್ಸ್, ಪಬ್ನಲ್ಲಿ ಈ ರೀತಿಯ ತಿರುಚಿ ಫೋಟೋ ಇರಿಸಲು ಹೇಗೆ ಅನುಮತಿ ನೀಡಿದಿರಿ ಎಂದು ಪ್ರಶ್ನಿಸುತ್ತಿದ್ದಾರೆ. ನೇರವಾಗಿ ಯಾವುದೇ ಉತ್ತರ ನೀಡದ ಕಸಾಪ ಅಧ್ಯಕ್ಷ ಮಹೇಶ್ ಜೋಷಿ, ‘ಈ ಬಗ್ಗೆ ಅಬಕಾರಿ ಅಧಿಕಾರಿಗಳಿಂದ ವಿವರಣೆ ಪಡೆಯುವೆ. ಕಸಾಪಗೆ ಅವಮಾನ ಮಾಡಲು ಯಾರೋ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ಪೊಲೀಸ್ ಆಯುಕ್ತರಿಗೆ ದೂರು
ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಅವಮಾನ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಪೊಲೀಸ್ ಹಾಗೂ ಅಬಕಾರಿ ಆಯುಕ್ತರಿಗೆ ದೂರು ನೀಡಿದೆ. ಬಾರ್ ಮತ್ತು ವೈನ್ ಸ್ಟೋರ್ಗಳಲ್ಲಿ ಭುವನೇಶ್ವರಿ ತಾಯಿಯ ಭಾವಚಿತ್ರವನ್ನು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅಬಕಾರಿ ಇಲಾಖೆಯ ಹೆಸರಿನಲ್ಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಕಸಾಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕೃತ್ಯ ಮಾಡುವವರ ವಿರುದ್ದ ಕನ್ನಡ ಸಾಹಿತ್ಯ ಪರಿಷತ್ ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಕನ್ನಡ ತಾಯಿ ಭುವನೇಶ್ವರಿ ಪೋಟೋಗಳು ಕೈಗೆ ಎಟಕುವ ದರದಲ್ಲಿ ಅಂತರ್ಜಾಲದಲ್ಲಿಯೂ ಲಭ್ಯವಿದೆ ಎಂದು ಪರಿಷತ್ ತಿಳಿಸಿದೆ.
ಕೆಲ ಸಮಾಜ ಘಾತುಕರು ಪಬ್ ಬಾರ್ಗಳಿಗೆ ಭುವನೇಶ್ವರಿ ಪೋಟೋಗಳನ್ನು ದುಬಾರಿ ಬೆಲೆಗೆ ಮಾರಲು ಯತ್ನಿಸಿ, ಅಬಕಾರಿ ಇಲಾಖೆಯ ಅಧಿಕಾರಿಗಳೇ ಕೊಟ್ಟಿದ್ದಾರೆ ಎನ್ನುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಅಪಾರಾವಾದ ಘನತೆ ಮತ್ತು ಗೌರವವಿದೆ. ಈ ಬೆಳವಣಿಗೆಯ ಬಗ್ಗೆ ತಿಳಿದ ಕೂಡಲೇ ಪೋಲಿಸ್ ಆಯುಕ್ತರಿಗೆ ಹಾಗೂ ಅಬಕಾರಿ ಆಯುಕ್ತರಿಗೆ ದೂರು ನೀಡಿದ್ದೇವೆ. ಭುವನೇಶ್ವರಿ ತಾಯಿಯ ಪೋಟೋವನ್ನ ದುರುಪಯೋಗ ಮಾಡಿಕೊಳ್ಳುವವರ ವಿರುದ್ದ ಕ್ರಮ ತಗೆದುಕೊಳ್ಳುವಂತೆ ಒತ್ತಾಯಿಸಿದ್ದೇವೆ ಎಂದು ಪ್ರಕಟಣೆಯು ತಿಳಿಸಿದೆ.
Published On - 9:11 am, Wed, 2 November 22