
ಬೆಂಗಳೂರು, (ಜನವರಿ 11): ರಾಮಮೂರ್ತಿ ನಗರ ಪೊಲೀಸ್ (ramamurthy nagar Police) ಠಾಣಾ ವ್ಯಾಪ್ತಿಯಲ್ಲಿ ನಡೆದ ಮಂಗಳೂರಿನ (Mangaluru) ಟೆಕ್ಕಿ ಶರ್ಮಿಳಾ (Sharmila) ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಶರ್ಮಿಳಾ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿಲ್ಲ. ಬದಲಾಗಿ ಪ್ರಿಯಕರನೇ ಕೊಲೆ ಮಾಡಿ ಬಳಿಕ ಸಾಕ್ಷ್ಯ ನಾಶ ಮಾಡಲು ಮನೆಗೆ ಬೆಂಕಿ ಇಟ್ಟಿದ್ದಾನೆ ಎನ್ನುವ ಸ್ಫೋಟಕ ಅಂಶ ಪೊಲೀಸ್ ತನಿಖೆಯಲ್ಲಿ ಬಯಲಿಗೆ ಬಂದಿದ್ದು, ಈ ಸಂಬಂಧ ಶರ್ಮಿಳಾ ಪ್ರಿಯಕರ ಕೇರಳ ಮೂಲದ ಕರ್ನಲ್ ಕುರೈ ಎನ್ನುವಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ರಾಮಮೂರ್ತಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ದಟ್ಟ ಹೊಗೆ ಆವರಿಸಿದ್ದು, ಈ ದುರ್ಘಟನೆಯಲ್ಲಿ ಉಸಿರುಗಟ್ಟಿ ಮಂಗಳೂರು ಮೂಲದ 34 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಶರ್ಮಿಳಾ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಟೆಕ್ಕಿ ಶರ್ಮಿಳಾ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ. ತನಿಖೆ ವೇಳೆ ಟೆಕ್ಕಿ ಶರ್ಮಿಳಾ ಕೊಲೆ (Murder) ಎಂಬುದು ಬೆಳಕಿಗೆ ಬಂದಿದೆ. ಟೆಕ್ಕಿ ಶರ್ಮಿಳಾಳನ್ನ ಓನ್ ಸೈಡ್ ಲವ್ ಮಾಡ್ತಿದ್ದ, ಎದುರು ಮನೆಯ ಕೇರಳ ಮೂಲದ ಯುವಕ ಕರ್ನಲ್ ಕುರೈಕೊಲೆಗಾರ ಎಂದು ಬಯಲಾಗಿದೆ. ಈತನಿಗೆ ಇನ್ನೂ 18ವರ್ಷವಾಗಿದ್ದು, ಈತ ಕಾಲೇಜು ಓದುತ್ತಿದ್ದ. ಆದ್ರೆ, ತನ್ನ ವಯಸ್ಸಿಗಿಂತ ದೊಡ್ಡವಳಾಗಿದ್ದ 34 ವರ್ಷದ ಟೆಕ್ಕಿ ಶರ್ಮಿಳಾ ಮೇಲೆ ಲವ್ ಆಗಿದೆ. ಆದ್ರೆ, ಈ ವಿಚಾರವನ್ನು ಶರ್ಮಿಳಾಗೆ ಹೇಳಿರಲಿಲ್ಲ. ತಾನೇ ಮನಸ್ಸಲ್ಲಿ ಇಟ್ಟುಕೊಂಡು ಕೊನೆಗೆ ಆಕೆಯನ್ನು ಭೀಕರವಾಗಿ ಹತ್ಯೆಗೈದಿದ್ದಾನೆ.
ಬಂಧಿತ ಆರೋಪಿ ಕೇರಳ ಮೂಲದವನು ಎಂದು ತಿಳಿದುಬಂದಿದೆ. ಶರ್ಮಿಳಾ ಕಳೆದ ಎರಡು ವರ್ಷಗಳಿಂದ ಸುಬ್ರಹ್ಮಣ್ಯ ಲೇಔಟ್‌ನಲ್ಲಿ ವಾಸವಿದ್ದರು. ಇನ್ನು ಆರೋಪಿ ಕರ್ನಲ್ ಕುರೖ ಪಕ್ಕದ ಮನೆ ವಾಸಿಯಾಗಿದ್ದರಿಂದ ಮುಖ ಪರಿಚಯವಿದ್ದು, ಪ್ರತಿದಿನ ಇಬ್ಬರೂ ಮಾತನಾಡುತ್ತಿದ್ದು, ಇದರ ನಡುವೆ ಕುರೈಗೆ ಶರ್ಮಿಳನ ಮೇಲೆ ಲವ್ ಆಗಿದೆ. ಆದ್ರೆ, ಈ ಲವ್ ವಿಚಾರವನ್ನು ಶರ್ಮಿಳಾಗೆ ಹೇಳಿರಲಿಲ್ಲ. ಹೀಗೆ ಒಂದು ದಿನ ಅಂದರೆ ಜನವರಿ 3ರಂದು ಕರ್ನಲ್ ಕುರೈ, ಬಾಲ್ಕನಿ ಮೂಲಕ ಶರ್ಮಿಳಾಳ ಮನೆಯೊಳಗೆ ನುಗ್ಗಿದ್ದು, ಸಡನ್ ಆಗಿ ಹಿಂಬದಿಯಿಂದ ಶರ್ಮಿಳಾಳನ್ನ ಅಪ್ಪಿಕೊಂಡಿದ್ದ. ಆಗ ಶರ್ಮಿಳಾ ಕರ್ನಲ್ ಕುರೈನಿಂದ ಬಿಡಿಸಿಕೊಳ್ಳಲು ಯತ್ನಿಸಿದ್ದಾಳೆ. ಆ ವೇಳೆ ಕುರೈ, ಶರ್ಮಿಳಾಳ ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದಿದ್ದು, ಇದರಿಂದ ಶರ್ಮಿಳಾ, ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಬಳಿಕ ಶರ್ಮಿಳಾಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಅಲ್ಲದೇ ಸಾಕ್ಷಿ ನಾಶ ಮಾಡಲು ಮನೆಗೆ ಬೆಂಕ್ಕಿ ಹಚ್ಚಿ ಪರಾರಿಯಾಗಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿದೆ.
ಮೃತ ಶರ್ಮಿಳಾ (34) ಅವರು ಮಂಗಳೂರಿನ ಕಾವೂರು ಮೂಲದವರು. ಕಳೆದ ಒಂದೂವರೆ ವರ್ಷಗಳಿಂದ ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತೆಯೊಂದಿಗೆ ವಾಸವಾಗಿದ್ದರು. ಮನೆ ಸಮೀಪದ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ದಿನ ಶರ್ಮಿಳಾಗೆ ರಜೆ ಇದ್ದು, ಆಕೆಯ ಸ್ನೇಹಿತೆ ಊರಿಗೆ ತೆರಳಿದ್ದ ಕಾರಣ ಶರ್ಮಿಳಾ ಮನೆಯಲ್ಲಿ ಒಬ್ಬರೇ ಇದ್ದರು. ಇದನ್ನೇ ಗಮನಿಸಿ ಕರ್ನಲ್ ಮನೆಯೊಳಗೆ ನುಗ್ಗಿ ಈ ರೀತಿ ಕೃತ್ಯ ಎಸಗಿದ್ದಾನೆ.
ಜನವರಿ 3ರಂದು ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಮನೆಯ ಒಂದು ಕೋಣೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆ ಆವರಿಸಿತ್ತು. ಬೆಂಕಿ ಕಾಣಿಸಿಕೊಂಡ ಕೂಡಲೇ ಶರ್ಮಿಳಾ ಆ ಕೋಣೆಯತ್ತ ತೆರಳಲು ಯತ್ನಿಸಿದ್ದಾರೆ. ಇದೇ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಮನೆ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ. ಕತ್ತಲೆ ಮತ್ತು ದಟ್ಟ ಹೊಗೆಯಿಂದಾಗಿ ಕಿಟಕಿ ಅಥವಾ ಬಾಗಿಲು ತೆರೆಯಲು ಸಾಧ್ಯವಾಗದೆ, ಶರ್ಮಿಳಾ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಹೊರಬಿದ್ದಿತ್ತು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.
Published On - 8:11 pm, Sun, 11 January 26