
ಬೆಂಗಳೂರು, (ಅಕ್ಟೋಬರ್ 27): ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ತಿಲಕನಗರದ ಸಲ್ಮಾ ಕೊಲೆ ಸಂಬಂಧ ಇಬ್ಬರು ಆರೋಪಿಗಳನ್ನ ಪೊಲೀಸರ 24 ಗಂಟೆಯಲ್ಲೇ ಬಂಧಿಸಿದ್ದು, ಸದ್ಯ ಇಬ್ಬರನ್ನ ಕಸ್ಟಡಿಗೆ ಪಡೆದು ವಿಚಾರಣೆ ಮಾಡುತ್ತಿದ್ದು, ಈ ವೇಳೆ ಪೊಲೀಸರಿಗೆ ಕೊಲೆಯ ಮತ್ತಷ್ಟು ಕಹಾನಿ ಗೊತ್ತಾಗಿದೆ. ಸುಬ್ರಹ್ಮಣಿ ಮತ್ತು ಸೆಂಥಿಲ್ ಇಬ್ಬರು ಸೇರಿ ಸಲ್ಮಾಳನ್ನ ಕೊಲೆ ಮಾಡಿ ಮೃತದೇಹ ಬಿಸಾಕಿದ್ದೇಗೆ? ನಂತರ ಅದ್ಯಾವ ಊರಿನಲ್ಲಿ ತಲೆಮರೆಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ರು ಎನ್ನುವುದು ಬಟಾಬಯಲಾಗಿದೆ. ಸುಬ್ರಮಣಿಯೇ ಸಲ್ಮಾಳನ್ನ ಕೊಲೆ ಮಾಡಿರುವುದು ಗೊತ್ತಾಗಿದೆ. ಅಚ್ಚರಿ ಅಂದ್ರೆ ಸುಬ್ರಮಣಿ, ಸಲ್ಮಾಳ ಮೃತದೇಹ ಸಾಗಿಸಲು ಆಕೆಯ ಸ್ನೇಹಿತ ಸೆಂಥಿಲ್ ಸಹಾಯ ಪಡೆದಿರುವುದು ಬೆಳಕಿಗೆ ಬಂದಿದೆ.
ವಿಚಿತ್ರ ಅಂದ್ರೆ ಸಲ್ಮಾ ಹಾಗೂ ಸುಬ್ರಹ್ಮಣಿ ಅನೈತಿಕ ಸಂಬಂಧ ಹೊಂದಿದ್ದರು. ಆಕೆ ಶುಕ್ರವಾರ ಸಬ್ರಹ್ಮಣಿ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಸಲ್ಮಾ ಸೆಂಥಿಲ್ ಜೊತೆ ಸಲುಗೆಯಿಂದ ಇದ್ದಳಂತೆ. ಇದರಿಂದ ಆಕ್ರೋಶಗೊಂಡಿದ್ದ ಸುಬ್ರಹ್ಮಣಿ, ಕುಡಿತ ಮತ್ತಿನಲ್ಲಿಯೇ ಮನೆಯಲ್ಲಿದ್ದ ರಾಗಿ ಮುದ್ಧೆ ತಿರುಗಿಸುವ ಹಿಟ್ಟಿನ ಕೋಲಿನಲ್ಲಿ ಸಲ್ಮಾಳ ತಲೆಗೆ ಹೊಡೆದು ಹಲ್ಲೆ ಮಾಡಿದ್ದ. ಹಾಗೆ ಸ್ನೇಹಿತ ಸೆಂಥಿಲ್ ಗೂ ಹೊಡೆದಿದ್ದ. ಇದರಿಂದ ಸಲ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಳು.
ಇನ್ನು ಸಲ್ಮಾಳ ಮೃತದೇಹವನ್ನು ಮಧ್ಯರಾತ್ರಿ 1.30ರ ಹೊತ್ತಿಗೆ ಮನೆಯಿಂದ 100 ಮೀ ದೂರದಲ್ಲಿರುವ ಜಾಗಕ್ಕೆ ಕೊಂಡೊಯ್ದಿದ್ದು, ಕಳೆದ 2 ವರ್ಷಗಳಿಂದ ಅದೇ ಜಾಗದಲ್ಲಿ ಕೆಟ್ಟು ನಿಂತಿದ್ದಆಟೋವೊಂದರಲ್ಲಿ ಇಟ್ಟು ಪರಾರಿಯಾಗಿದ್ದರು.
ಇನ್ನು ಸಲ್ಮಾಳನ್ನ ಕೊಲೆ ಮಾಡಿ ಆರೋಪಿಗಳು ಪಾಂಡಿಚೇರಿಗೆ ಎಸ್ಕೇಪ್ ಆಗುವ ಪ್ಲಾನ್ ನಲ್ಲಿದ್ದರು. ಹೀಗಾಗಿ
ಮಧ್ಯರಾತ್ರಿಯೇ ಮೆಜೆಸ್ಟಿಕ್ ವರೆಗೆ ನಡೆದುಕೊಂಡೇ ಹೋಗಿದ್ದ ಆರೋಪಿಗಳಿಬ್ಬರು ಬಳಿಕ ತುಮಕೂರಿಗೆ ಬಸ್ ನಲ್ಲಿ ಎಸ್ಕೇಪ್ ಆಗಿದ್ದರು. ಇತ್ತ ಕೊಲೆಯಾದ ಒಂದು ದಿನಕ್ಕೆ ಮಹಿಳೆಯ ಶವ ಪತ್ತೆಯಾಗಿತ್ತು. ತಿಲಕನಗರ ಪೊಲೀಸರಿಗೆ ಈ ಇಬ್ಬರ ಮೇಲೆ ಪ್ರಾರಂಭದಲ್ಲೇ ಅನುಮಾನ ಬಂದ ಕಾರಣ ಇಬ್ಬರ ಬೆನ್ನುಬಿದ್ದರು. ಬಳಿಕ ಸುಬ್ರಮಣಿ ಮತ್ತು ಸೆಂಥಿಲ್ ಇಬ್ಬರು ತುಮಕೂರಿನಲ್ಲಿ ಇರುವುದನ್ನು ಪತ್ತೆ ಮಾಡಿ ತುಮಕೂರಿನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ತುಮಕೂರು ಪೊಲೀಸರು ಈ ಇಬ್ಬರು ಆರೋಪಿಗಳನ್ನ ಪತ್ತೆ ಮಾಡಿ ವಶಕ್ಕೆ ಪಡೆದಾಗ ಆರೋಪಿಗಳ ಬಟ್ಟೆ ಉಗುರಿನಲ್ಲಿ ರಕ್ತದ ಕಲೆ ಪತ್ತೆಯಾಗಿತ್ತು. ಇದ್ರಿಂದ ಕೊಲೆಗಡುಕರು ಅವರೇ ಎನ್ನುವುದು ಕನ್ಫರ್ಮ್ ಆಗಿದ್ದು, ನಂತರ ತಿಲಕ ನಗರ ಪೊಲೀಸರು ತುಮಕೂರಿಗೆ ಬಂದು ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಒಟ್ನಲ್ಲಿ ಶವ ಸಿಕ್ಕ 24 ಗಂಟೆಯೊಳಗೆ ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದು, ಇಬ್ಬರನ್ನ ಹೆಚ್ಚಿನ ವಿಚಾರಣೆ ನಡೆಸಲಾಗ್ತಿದೆ. ಆದ್ರೆ ಅನೈತಿಕ ಸಂಬಂಧ ಇದ್ದ ವ್ಯಕ್ತಿಯ ಗೆಳೆಯನ ಜೊತೆ ಸಲುಗೆಯಿಂದ ಇದ್ದ ಸಲ್ಮಾಳ ಕೊಲೆ ನಿಜಕ್ಕೂ ವಿಚಿತ್ರ ಕಹಾನಿ.
ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು.
Published On - 10:43 pm, Mon, 27 October 25