4 ಮಕ್ಕಳ ತಾಯಿ ಸಲ್ಮಾ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದುಷ್ಕರ್ಮಿಗಳ ಕೊಲೆ ಸಂಚು ಹೇಗಿತ್ತು ಗೊತ್ತಾ?
ಬೆಂಗಳೂರು ತಿಲಕನಗರದಲ್ಲಿ ಮಹಿಳೆ ಸಲ್ಮಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಲ್ಮಾ ಪ್ರಿಯಕರ ಸುಬ್ರಹ್ಮಣಿ ಆಕೆಯ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆಂದು ಹೇಳಲಾಗಿತ್ತು. ಆದರೆ ಈ ಪ್ರಕರಣದಲ್ಲೀಗ ಹೊಸ ಹೆಸರು ಕೇಳಿ ಬರುತ್ತಿದೆ. ಹತ್ಯೆಯಲ್ಲಿ ಸುಬ್ರಹ್ಮಣಿಯೊಂದಿಗೆ ಇನ್ನೋರ್ವನೂ ಸೇರಿದ್ದಾನೆಂದು ತಿಳಿದ ಪೊಲೀಸರು, ಇಬ್ಬರು ಆರೋಪಿಗಳನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು,ಅಕ್ಟೋಬರ್ 26: ಬೆಂಗಳೂರಿನ ತಿಲಕ್ನಗರದಲ್ಲಿ ನಡೆದ 4 ಮಕ್ಕಳ ತಾಯಿಯ ಕೊಲೆ ಕೇಸ್ (Salma Murder Case) ಈಗ ಮಹತ್ತರ ತಿರುವು ಪಡೆದಿದೆ. ಮೃತ ಸಲ್ಮಾ ಪತಿಯ ಸಾವಿನ ನಂತರ ಸುಬ್ರಹ್ಮಣಿ ಎನ್ನುವವರ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದು, ಆತನೇ ಸಲ್ಮಾಳನ್ನು ಕೊಂದಿದ್ದಾನೆಂಬ ಶಂಕೆ ವ್ಯಕ್ತವಾಗಿತ್ತು. ಈ ಶಂಕೆಯೀಗ ದೃಢಪಟ್ಟಿದ್ದು, ಕೊಲೆ ಕೇಸ್ನಲ್ಲಿ ಸೆಂಥಿಲ್ ಎಂಬೋರ್ವನ ಹೆಸರು ಸೇರ್ಪಡೆಯಾಗಿದೆ. ತಿಲಕ್ನಗರ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ಮುಂದುವರೆದಿದೆ.
ಸುಬ್ರಹ್ಮಣಿ ಬಿಟ್ಟು ಇನ್ನೂ ಇಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸಲ್ಮಾ
ಪತಿಯನ್ನು ಕಳೆದುಕೊಂಡು 4 ಮಕ್ಕಳೊಡನೆ ಜೀವನ ನಡೆಸುತ್ತಿದ್ದ ಸಲ್ಮಾ, ಸುಬ್ರಹ್ಮಣಿ ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿತ್ತು. ಒಮ್ಮೆಲೇ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಸುಬ್ರಹ್ಮಣಿ, ಸಲ್ಮಾ ತಲೆಗೆ ಹೊಡೆದು ಹತ್ಯೆ ಮಾಡಿದ್ದು, ಮೃತದೇಹಕ್ಕೆ ಬಟ್ಟೆ ಸುತ್ತಿ ಕೆಟ್ಟುನಿಂತಿದ್ದ ಆಟೋದಲ್ಲಿಟ್ಟು ಪರಾರಿ ಆಗಿದ್ದಾನೆ ಎಂದು ಶಂಕೆ ವ್ಯಕ್ತವಾಗಿತ್ತು. ಆದರೀಗ ಈ ಪ್ರಕರಣದಲ್ಲಿ ಇನ್ನೋರ್ವನ ಹೆಸರು ಕೇಳಿ ಬಂದಿದೆ.
ಸುಬ್ರಹ್ಮಣಿ ಮಾತ್ರವಲ್ಲದೇ ಆತನ ಸ್ನೇಹಿತ ಸೆಂಥಿಲ್ ಜೊತೆಗೂ ಸಲ್ಮಾ ಸಲುಗೆಯಿಂದಿದ್ದಳು ಎಂದು ತಿಳಿದು ಬಂದಿದೆ. ಈಕೆ ಇವರಿಬ್ಬರನ್ನಷ್ಟೇ ಅಲ್ಲದೇ ಮೂರನೇ ವ್ಯಕ್ತಿಯ ಜೊತೆಗೂ ಅಕ್ರಮ ಸಂಬಂಧ ಹೊಂದಿದ್ದ ವಿಷಯ ತಿಳಿದ ಆರೋಪಿಗಳು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ ಬೆಂಗಳೂರು: 4 ಮಕ್ಕಳ ತಾಯಿ ಕೊಂದು ಆಟೋದಲ್ಲಿ ಶವವಿಟ್ಟು ದುಷ್ಕರ್ಮಿ ಪರಾರಿ
ತಡರಾತ್ರಿ ಶವ ಸಾಗಿಸಿದ್ದ ಇಬ್ಬರು ಆರೋಪಿಗಳು
ಸುಬ್ರಹ್ಮಣಿ ಮತ್ತು ಸೆಂಥಿಲ್ ಇಬ್ಬರೂ ಸೇರಿ ತಿಲಕನಗರದಲ್ಲಿರುವ ಸುಬ್ರಹ್ಮಣಿ ಮನೆಯಲ್ಲಿ ಆಕೆಯನ್ನು ಕೊಲೆ ಮಾಡಿ, ಮೃತ ದೇಹವನ್ನು ಮಧ್ಯರಾತ್ರಿ 1.30ರ ಹೊತ್ತಿಗೆ ಮನೆಯಿಂದ 100 ಮೀ ದೂರದಲ್ಲಿರುವ ಜಾಗಕ್ಕೆ ಕೊಂಡೊಯ್ದಿದ್ದರು. ಶವವನ್ನು ಹೆಗಲ ಮೇಲೆ ಹೊತ್ತು ಹೋಗಿ ಕಳೆದ 2 ವರ್ಷಗಳಿಂದ ಅದೇ ಜಾಗದಲ್ಲಿ ನಿಂತಿದ್ದಆಟೋವೊಂದರಲ್ಲಿ ಇಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ.
ಆರೋಪಿಗಳಾದ ಸುಬ್ರಹ್ಮಣಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರೆ, ಸೆಂಥಿಲ್ ಕೂಲಿ ಕೆಲಸ ಮಾಡುತ್ತಿದ್ದನು. ಘಟನೆಯ ನಂತರ ತಿಲಕನಗರ ಪೊಲೀಸರು ಶೋಧ ಕಾರ್ಯ ಆರಂಭಿಸಿ, ಇಬ್ಬರನ್ನೂ ಬಂಧಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




