ಬಿಹಾರ ವಿಧಾನಸಭೆ ಚುನಾವಣೆ: ಬೆಂಗಳೂರಿನಿಂದ ಬಿಹಾರಕ್ಕೆ ವಿಶೇಷ ರೈಲುಗಳು, ಇಲ್ಲಿದೆ ವೇಳಾಪಟ್ಟಿ

Bengaluru Bihar Special trains: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ಪ್ರಯಾಣಿಕರ ದಟ್ಟಣೆ ನಿವಾರಿಸಲು ಪೂರ್ವ ರೈಲ್ವೆಯು ಬೆಂಗಳೂರು-ಬಿಹಾರ ನಡುವೆ ವಿಶೇಷ ರೈಲುಗಳನ್ನು ಘೋಷಿಸಿದೆ. ಮತದಾನಕ್ಕಾಗಿ ಹೋಗುವವರಿಗೆ ಮತ್ತು ಹಿಂದಿರುಗುವವರಿಗೆ ಅನುಕೂಲವಾಗುವಂತೆ ಈ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ರೈಲುಗಳು ಯಶವಂತಪುರ, SMVT ಬೆಂಗಳೂರು ಮತ್ತು ಮುಜಫರ್‌ಪುರ್, ಭಾಗಲ್ಪುರ್ ಸಂಪರ್ಕಿಸಲಿವೆ. ವೇಳಾಪಟ್ಟಿ ಇಲ್ಲಿದೆ.

ಬಿಹಾರ ವಿಧಾನಸಭೆ ಚುನಾವಣೆ: ಬೆಂಗಳೂರಿನಿಂದ ಬಿಹಾರಕ್ಕೆ ವಿಶೇಷ ರೈಲುಗಳು, ಇಲ್ಲಿದೆ ವೇಳಾಪಟ್ಟಿ
ಸಾಂದರ್ಭಿಕ ಚಿತ್ರ

Updated on: Nov 06, 2025 | 8:20 AM

ಬೆಂಗಳೂರು, ನವೆಂಬರ್ 6: ಬಿಹಾರ ವಿಧಾನಸಭೆ ಚುನಾವಣೆ (Bihar Assembly Election) ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಪೂರ್ವ ರೈಲ್ವೆಯು (Eastern Railway) ಬೆಂಗಳೂರು ಮತ್ತು ಬಿಹಾರದ ನಗರಗಳನ್ನು ಸಂಪರ್ಕಿಸುವ ವಿಶೇಷ ರೈಲುಗಳನ್ನು ಘೋಷಿಸಿದೆ. ಮತದಾನಕ್ಕಾಗಿ ಬೆಂಗಳೂರಿನಿಂದ ಬಿಹಾರದ ವಿವಿಧ ನಗರಗಳಿಗೆ ತೆರಳುವವರಿಗೆ ಮತ್ತು ಮತದಾನ ಮುಗಿಸಿ ಬಿಹಾರದ ನಗರಗಳಿಂದ ಬೆಂಗಳೂರಿಗೆ ಮರಳುವವರನ್ನು ಗಮನದಲ್ಲಿಟ್ಟುಕೊಂಡು ವಿಶೇಷ ರೈಲುಗಳನ್ನು ಘೋಷಿಸಲಾಗಿದೆ.

ಬಿಹಾರದಿಂದ ಹೊರಡುವ ರೈಲಿನ ವಿವರ

ರೈಲು ಸಂಖ್ಯೆ 03403 ನವೆಂಬರ್ 7 ರಂದು ರಾತ್ರಿ 10.30 ಕ್ಕೆ ಭಾಗಲ್ಪುರದಿಂದ ಹೊರಟು ನವೆಂಬರ್ 9 ರಂದು ಕೆಆರ್ ಪುರಂ ಮತ್ತು ಎಸ್‌ಎಂವಿಟಿ ಬೆಂಗಳೂರು ಮೂಲಕ ರಾತ್ರಿ 11.50 ಕ್ಕೆ ಯಶವಂತಪುರ ತಲುಪಲಿದೆ.

ಬೆಂಗಳೂರಿನಿಂದ ಹೊರಡುವ ರೈಲಿನ ವಿವರ

ರೈಲು ಸಂಖ್ಯೆ 03404 ನವೆಂಬರ್ 10 ರಂದು ಬೆಳಿಗ್ಗೆ 7 ಗಂಟೆಗೆ ಯಶವಂತಪುರದಿಂದ ಹೊರಟು ನವೆಂಬರ್ 12 ರಂದು ಬೆಳಿಗ್ಗೆ 7.30 ಕ್ಕೆ ಯಲಹಂಕ ಮೂಲಕ ಭಾಗಲ್ಪುರ ತಲುಪಲಿದೆ.

ಈ ಎರಡೂ ವಿಶೇಷ ರೈಲುಗಳು ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರಿಗೆ ಮುಕ್ತವಾಗಿದೆ ಎಂದು ಪೂರ್ವ ರೈಲ್ವೆ ತಿಳಿಸಿದೆ.

ರೈಲು ಸಂಖ್ಯೆ 05545 ನವೆಂಬರ್ 11 ಮತ್ತು 12 ರಂದು ರಾತ್ರಿ 9.15 ಕ್ಕೆ ಮುಜಫರ್‌ಪುರದಿಂದ ಹೊರಟು ನವೆಂಬರ್ 13 ಮತ್ತು 14 ರಂದು ರಾತ್ರಿ 11.50 ಕ್ಕೆ ಯಶವಂತಪುರ ತಲುಪಲಿದೆ. ಇದರ ನಿಲುಗಡೆಗಳಲ್ಲಿ ಕೆ.ಆರ್. ಪುರಂ ಮತ್ತು ಎಸ್ಎಂವಿಟಿ ಬೆಂಗಳೂರು ಸೇರಿವೆ.

ರೈಲು ಸಂಖ್ಯೆ 05546 ನವೆಂಬರ್ 14 ಮತ್ತು 15 ರಂದು ಮಧ್ಯಾಹ್ನ 3.50 ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಡಲಿದ್ದು, ನವೆಂಬರ್ 16 ಮತ್ತು 17 ರಂದು ಸಂಜೆ 7 ಗಂಟೆಗೆ ಮುಜಫರ್‌ಪುರ ತಲುಪಲಿದೆ. ಇದು ಕೆಆರ್ ಪುರಂನಲ್ಲಿ ನಿಲುಗಡೆ ಹೊಂದಿರಲಿದೆ.

ಇದನ್ನೂ ಓದಿ: ಬಿಹಾರ ಚುನಾವಣೆ, 18 ಜಿಲ್ಲೆಗಳ 121 ಸ್ಥಾನಗಳಿಗೆ ಇಂದು ಮೊದಲ ಹಂತದ ಮತದಾನ

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು (ನವೆಂಬರ್ 6) ನಡೆಯುತ್ತಿದೆ. ಎರಡನೇ ಹಂತದ ಮತದಾನ ನವೆಂಬರ್ 11 ರಂದು ನಡೆಯಲಿದೆ. ಹೀಗಾಗಿ ಈಗಾಗಲೇ ಬಿಹಾರದ ವಿವಿಧ ನಗರಗಳಿಗೆ ತೆರಳಿರುವ ಜನರಿಗೆ ಬೆಂಗಳೂರಿಗೆ ವಾಪಸಾಗಲು ಮತ್ತು ನವೆಂಬರ್ 11 ರ ಚುನಾವಣೆಯಲ್ಲಿ ಮತದಾನ ಮಾಡಲು ಹೋಗಿ ಬರಲಿರುವವರಿಗೆ ನೆರವಾಗುವುದಕ್ಕಾಗಿ ಪೂರ್ವ ರೈಲ್ವೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ