ಆನೇಕಲ್: ಆಹ್ವಾನ ಪತ್ರಿಕೆ ನೀಡುವ ನೆಪದದಲ್ಲಿ ಬಂದು ಚಿನ್ನ ಕದ್ದ ಖತರ್ನಾಕ್ ಜೋಡಿ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿ ಮನೆ ದರೋಡೆ ನಡೆದಿದೆ. ಲಗ್ನಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ನುಗ್ಗಿದ ಖತರ್ನಾಕ್ ಜೋಡಿ, ಮಹಿಳೆಯ ಕೈಕಾಲು ಕಟ್ಟಿ, ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ, ಸುಮಾರು 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಆನೇಕಲ್, ನವೆಂಬರ್ 06: ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ನುಗ್ಗಿ ಮಹಿಳೆ ಕಟ್ಟಿಹಾಕಿ ದರೋಡೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ. ರವಿಕುಮಾರ್, ನಾಗವೇಣಿ ದಂಪತಿ ಮನೆಗೆ ಮಧ್ಯಾಹ್ನ 2.30ರ ಸುಮಾರಿಗೆ ಮನೆಗೆ ನುಗ್ಗಿದ್ದ ಖತರ್ನಾಕ್ ಜೋಡಿ 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದೆ. ಖಾಸಗಿ ಕಂಪನಿ ಉದ್ಯೋಗಿಯಾಗಿರುವ ರವಿಕುಮಾರ್ ಕೆಲಸಕ್ಕೆ ತೆರಳಿದ್ದು, ಮನೆಯಲ್ಲಿ ನಾಗವೇಣಿ ಒಬ್ಬರೇ ಇದ್ದಾಗ ಬಂದಿದ್ದ ಕಿಲಾಡಿ ಜೋಡಿ ಕೈಚಳಕ ತೋರಿಸಿದೆ. ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ಬಂದವರು ಕುಡಿಯಲು ನೀರು ಕೊಡಿ ಎಂದಿದ್ದಾರೆ. ಈ ವೇಳೆ ನಾಗವೇಣಿ ಅಡುಗೆ ಮನೆಗೆ ಹೋಗಿದ್ದು, ಅವರ ಹಿಂದೆಯೇ ಅಪರಿಚಿತ ವ್ಯಕ್ತಿ ಮನೆಯೊಳಗೆ ನುಗ್ಗಿದ್ದಾನೆ. ರೂಮ್ಗೆ ಎಳೆದೊಯ್ದು ನಾಗವೇಣಿಯ ಕೈಕಾಲು ಕಟ್ಟಿಹಾಕಿ, ಕುತ್ತಿಗೆಗೆ ಚಾಕು ಇಟ್ಟು ಬೀರು ಕೀ ಪಡೆದು ಚಿನ್ನಾಭರಣ ಕಳವು ಮಾಡಲಾಗಿದೆ. ನಂತರ ಸ್ನೇಹಿತೆಗೆ ಕರೆ ಮಾಡಿ ನಾಗವೇಣಿ ಈ ಬಗ್ಗೆ ಮಾಹಿತಿ ತಿಳಿಸಿದ್ದು, ದರೋಡೆ ಬಗ್ಗೆ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
