
ಬೆಂಗಳೂರು, ಏಪ್ರಿಲ್ 24: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸುಮಾರು ಒಂದು ಕೋಟಿಗೂ ಅಧಿಕ ವಾಹನಗಳು ರಸ್ತೆಗಿಳಿಯುತ್ತಿರುವುದರಿಂದ ಬೆಂಗಳೂರು ವಿಶ್ವದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಎರಡನೇ ನಗರ ಎಂಬ ಅಪಖ್ಯಾತಿಗೆ ಗುರಿಯಾಗಿದೆ. ಈ ಗಂಭೀರ ಸಮಸ್ಯೆಯನ್ನು ಹೋಗಲಾಡಿಸಲು ಈಗ ಖಾಸಗಿ ಕಂಪನಿಗಳು ವಿನೂತನ ಹಾದಿ ಹಿಡಿದಿದ್ದು, ಬಯೋಕಾನ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ವಿಶೇಷ ಕೊಡುಗೆ ಪ್ರಕಟಿಸಿದೆ.
ನಗರದ ಟ್ರಾಫಿಕ್ ಕಡಿಮೆ ಮಾಡಲು ಮತ್ತು ಉದ್ಯೋಗಿಗಳು ಸರಿಯಾದ ಸಮಯಕ್ಕೆ ಕಚೇರಿ ತಲುಪಲು ನೆರವಾಗುವಂತೆ ಬಯೋಕಾನ್ ಸಂಸ್ಥೆ ಟೆಕ್ಕಿಗಳಿಗೆ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸಲು ಸೂಚಿಸಿದೆ. ವಾರದಲ್ಲಿ ಕನಿಷ್ಠ ಎರಡು ದಿನ ಸಾರ್ವಜನಿಕ ಸಾರಿಗೆ ಬಳಸುವ ಉದ್ಯೋಗಿಗಳಿಗೆ ಸಂಬಳದ ಜೊತೆಗೆ ಪ್ರೋತ್ಸಾಹಧನ (Incentive) ನೀಡಲು ಮುಂದಾಗಿದೆ. ಮೊದಲ ಹಂತದಲ್ಲಿ ಒಂದು ಸಾವಿರ ಉದ್ಯೋಗಿಗಳಿಗೆ ಪ್ರತಿ ತಿಂಗಳು 2,000 ರೂಪಾಯಿಗಳ ಮೆಟ್ರೋ ಪಾಸ್ ಅಥವಾ ಇನ್ಸೆಂಟಿವ್ ನೀಡಲು ಸಂಸ್ಥೆ ನಿರ್ಧರಿಸಿದೆ.
ಈ ಕುರಿತು ಮಾತನಾಡಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು, ‘ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗ (Yellow Line) ಮೆಟ್ರೋ ಸಂಚಾರದಿಂದ ಈ ಭಾಗದಲ್ಲಿ ಟ್ರಾಫಿಕ್ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ. ನಮ್ಮ ಸಂಸ್ಥೆಯ ಈ ನಿರ್ಧಾರವನ್ನು ನೋಡಿ ಇತರ ಐಟಿ-ಬಿಟಿ ಕಂಪನಿಗಳು ಕೂಡ ತಮ್ಮ ಉದ್ಯೋಗಿಗಳಿಗೆ ಇಂತಹ ಸೌಲಭ್ಯ ನೀಡಲು ಮುಂದೆ ಬರಬಹುದು’ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಕೇವಲ ಇನ್ಸೆಂಟಿವ್ ಮಾತ್ರವಲ್ಲದೆ, ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಕೆಯನ್ನು ಉತ್ತೇಜಿಸಲು ಕಂಪನಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿವೆ. ಸ್ವಂತ ಕಾರು ಅಥವಾ ಬೈಕ್‌ನಲ್ಲಿ ಕಚೇರಿಗೆ ಬರುವವರಿಗೆ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತಿದೆ. ಇದರಿಂದಾಗಿ ಅನೇಕ ಟೆಕ್ಕಿಗಳು ಪಾರ್ಕಿಂಗ್ ಹಣ ಪಾವತಿಸುವ ಬದಲು ಮೆಟ್ರೋ ಅಥವಾ ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸುತ್ತಿದ್ದಾರೆ. ಅಲ್ಲದೆ, ಒಂದೇ ಭಾಗದಿಂದ ಬರುವ ಉದ್ಯೋಗಿಗಳು ‘ಕಾರ್ ಪೂಲಿಂಗ್’ ಮೂಲಕ ಬರಲು ಉತ್ತೇಜನ ನೀಡಲಾಗುತ್ತಿದೆ.
ಇದನ್ನೂ ಓದಿ: ಬಿಸಿಲ ಝಳಕ್ಕೆ ತತ್ತರಿಸಿದ ಬೆಂಗಳೂರಿಗರು: ಬಸ್, ಮೆಟ್ರೋಗೆ ಭರ್ಜರಿ ಆದಾಯ, ಹೇಗಂತೀರಾ?
ಬಯೋಕಾನ್ ಸಂಸ್ಥೆಯ ಈ ನಿರ್ಧಾರವು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮಾದರಿಯಾಗಿದ್ದು, ಇತರ ಕಂಪನಿಗಳು ಇದನ್ನು ಹೇಗೆ ಅಳವಡಿಸಿಕೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ