ಬೆಂಗಳೂರು: ವಿಪಕ್ಷನಾಯಕ ಸಿದ್ದರಾಮಯ್ಯರ (Siddaramaiah) ಉಗ್ರ ಭಾಗ್ಯ ಯೋಜನೆಯಿಂದ 32ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಬೆಂಗಳೂರಲ್ಲಿ (Bengaluru) ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ (CT Ravi) ವಾಗ್ದಾಳಿ ಮಾಡಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ (PFI) ಮತ್ತು ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವ ಹಿನ್ನೆಲೆ ಸಿದ್ದರಾಮಯ್ಯ ಮಾತನಾಡಿ ಆರ್ಎಸ್ಎಸ್ನಿಂದಲೂ ಸಮಾಜದಲ್ಲಿ ಅಶಾಂತಿ ತಲೆದೋರುತ್ತಿದೆ, ಅದನ್ನೂ ಬ್ಯಾನ್ ಮಾಡಿ ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ ರವಿ ಸಿದ್ದರಾಮಯ್ಯನವರೇ ನೀವು ತಾತ್ಕಾಲಿಕ ರಾಜಕೀಯ ಲಾಭಕ್ಕೆ ಭಾರತವನ್ನು ನಾಶ ಮಾಡಿ ನೀವು ನಾಶವಾಗಬೇಡಿ. ಎಲ್ಇಟಿ ಜೊತೆ ಹಾವು ಏಣಿಯಾಟ ಆಡಿದ ಪರಿಣಾಮ ರಾಜೀವ್ ಗಾಂಧಿ ಬಲಿಯಾಗಬೇಕಾಯತು. ಆಜಾದಿ ಎಂದು ಘೋಷಣೆ ಕೂಗುವುದು ಇಂಟರ್ ನ್ಯಾಷನಲ್ ಟೂಲ್ ಕಿಟ್ ಆಗಿದೆ. ಭಾರತ ವಾಸಕ್ಕೆ ಯೋಗ್ಯ ಅಲ್ಲ ಅಂತಾ ಅನ್ನಿಸಿದವರಿಗೆ ಅಫ್ಘಾನಿಸ್ತಾನ, ಪಾಕಿಸ್ತಾನ ಇದೆ, ಫ್ರೀ ವೀಸಾ ಕೊಟ್ಟು ಕಳುಹಿಸುತ್ತೇವೆ ಎಂದು ವ್ಯಂಗ್ಯವಾಡಿದರು.
ಉಗ್ರರ ಜೊತೆಗೆ ಯಾವ ರೀತಿ ಹಾಟ್ ಲೈನ್ ಕನೆಕ್ಷನ್ ಇದೆ ಎಂಬುದಕ್ಕೆ ಆಲ್ ಜವಾಹಿರಿ ಹಿಜಾಬ್ ಬೆಂಬಲಿಸಿ ಶಾಯಿರಿ ಹೇಳಿದ್ದೇ ಒಂದು ಸ್ಯಾಂಪಲ್ ಆಗಿದೆ. ಸುಣ್ಣ ಮತ್ತು ಬೆಣ್ಣೆ ಗುರುತಿಸದಂತಹ ಸ್ಥಿತಿಗೆ ಸಿದ್ದರಾಮಯ್ಯ ಬಂದಿದ್ದಾರೆ ಅನ್ನಿಸುತ್ತದೆ. ಯಾವ ಪ್ರಾಮಾಣಿಕತೆ ಇದೆ ಸಿದ್ದರಾಮಯ್ಯಗೆ? ಆರ್ ಎಸ್ ಎಸ್ ಯಾವ ಯಾವ ವಿಧ್ವಂಸಕ ಕೃತ್ಯದಲ್ಲಿ ತೊಡಗಿದೆ ಅಂತಾ ಸಿದ್ದರಾಮಯ್ಯ ಹೇಳಲಿ. ರಾಜಕೀಯ ತೆವಲಿಗೆ ಹೇಳುವುದನ್ನು ಬಿಡಲಿ ಎಂದು ಕಿಡಿ ಕಾರಿದರು.
ಯಾವ ಭಯೋತ್ಪಾದನೆ ವಿಚಾರದಲ್ಲಿ ಆರ್ಎಸ್ಎಸ್ ಮುಂದಾಗಿದೆ ಎಂದು ತೋರಿಸಲಿ. ಇಂತಹ ಮತಾಂದರಿಂದಲೇ ದೇಶ ವಿಭಜನೆಯಾಗಿದ್ದು. ರಾಷ್ಟ್ರವನ್ನು ಪ್ರೀತಿಸಿ ಅನ್ನೋದು ಭಯೋತ್ಪಾದನೆಯಾ? ರಾಷ್ಟ್ರಭಕ್ತ ಯಾರು, ರಾಷ್ಟ್ರ ದ್ರೋಹಿ ಯಾರು ಅಂತಾ ಗುರುತಿಸಲು ಇವರಿಗೆ ಆಗಲ್ವಾ? ಈ ಮನಸ್ಥಿತಿಯಿಂದ ಹೊರಗೆ ಬರದಿದ್ದರೇ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಸಿದ್ದರಾಮಯ್ಯ ಪಿಎಫ್ಐ ಮುಖಂಡರನ್ನು ಬಿಡುಗಡೆ ಮಾಡಿದ ಮೇಲೆಯೇ ಸರಣಿ ಹತ್ಯೆಗಳು ಜಾಸ್ತಿಯಾಗಿದ್ದಲ್ಲವಾ? ಪ್ರಚೋದನೆ ಕೊಡುವ ಅಂಶಗಳನ್ನು ಕಿತ್ತುಹಾಕದಿದ್ದರೇ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಉಗ್ರಭಾಗ್ಯ ಯೋಜನೆ ಕೊಟ್ಟಿದ್ದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಹಲವೆಡೆ ಕೊಲೆ, ಶಾಂತಿಭಂಗ ಪ್ರಕರಣಗಳಲ್ಲಿ ಪಿಎಫ್ಐ ಭಾಗಿಯಾಗಿತ್ತು. ಗಡಿಯಾಚೆ ತರಬೇತಿ ಪಡೆದು ದೇಶ ವಿಭಜನೆಗೆ ಸಂಚು ಮಾಡಲಾಗಿತ್ತು. ರಾಷ್ಟ್ರಭಕ್ತ ನಾಯಕರನ್ನು ಗುರಿಯಾಗಿಸಿ ಸಂಚು ನಡೆಸಿದ ಮಾಹಿತಿ ಇದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಹಿಂದೆ ಪಿಎಫ್ಐ ಕೈವಾಡ ಇದೆ. ಪಿಎಫ್ಐ ಮಾಸ್ಟರ್ಮೈಂಡ್ ಕೃತ್ಯದ ಬಗ್ಗೆ ತನಿಖಾ ಸಂಸ್ಥೆ ಉಲ್ಲೇಖಿಸಿದೆ. ಪಿಎಫ್ಐಯನ್ನು ಹೀಗೆ ಬಿಟ್ಟಿದ್ದರೆ ಅಂತರ್ ಯುದ್ಧ ಎದುರಿಸಬೇಕಾಗಿತ್ತು. ಭಾರತವನ್ನು ವಿಭಜಿಸುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಅಪಪ್ರಚಾರವಾಗುತ್ತಿತ್ತು ಎಂದು ತಿಳಿಸಿದರು.
ಸೈನ್ಯ, ಪೊಲೀಸ್, ನ್ಯಾಯಾಂಗ ವ್ಯವಸ್ಥೆಯ ಆಯಕಟ್ಟಿನ ಜಾಗಗಳಲ್ಲಿ, ತನ್ನ ಬೆಂಬಲಿಗರನ್ನು ಕೂರಿಸಿ 2047ಕ್ಕೆ ಅಂತರ್ ಯುದ್ಧ ಸೃಷ್ಟಿಗೆ ಸಂಚು ರೂಪಿಸಿತ್ತು. ಭಾರತೀಯತೆಯನ್ನು ನಾಶ ಮಾಡಿ ಮೊಘಲಸ್ಥಾನ ನಿರ್ಮಿಸುವ ಸಂಚು ರೂಪಿಸಲಾಗಿತ್ತು. ಈ ಎಲ್ಲ ಅಂಶಗಳ ಬಗ್ಗೆ ತನಿಖಾ ಸಂಸ್ಥೆಯ ವರದಿಯಲ್ಲಿ ಉಲ್ಲೇಖವಾಗಿದೆ. ಎಡಪಂಥೀಯ ಉಗ್ರವಾದಿಗಳ ಜೊತೆ ಕೈ ಜೋಡಿಸಿ ಭಾರತವನ್ನು ವಿಭಜಿಸುವುದರ ಜೊತೆಗೆ ದೇಶದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರದಲ್ಲಿ ತೊಡಗಿರುತ್ತಿದ್ದರು ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Wed, 28 September 22