ಬೆಂಗಳೂರು: ಬಿಜೆಪಿ ನಿನ್ನೆ ರಾತ್ರಿ(ಏಪ್ರಿಲ್ 12) ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಅಭ್ಯರ್ಥಿಗಳ 2ನೇ ಪಟ್ಟಿ ಘೋಷಿಸಿದೆ. ಆದ್ರೆ ಟಿಕೆಟ್ ಕೈ ತಪ್ಪಿದ ಅಕಾಂಕ್ಷಿಗಳು ಅಸಮಾಧಾನ ಹೊರ ಹಾಕಿದ್ದು ರಾಜೀನಾಮೆ ಪರ್ವ ಶುರುವಾಗಿದೆ. ಮತ್ತೊಂದೆಡೆ ಟಿಕೆಟ್ ಕೈ ತಪ್ಪಿದಕ್ಕೆ ಶಾಸಕ ನೆಹರು ಓಲೇಕಾರ(Neharu Olekar) ಕೆಂಡಾಮಂಡಲವಾಗಿದ್ದು ಸಿಎಂ ಬೊಮ್ಮಾಯಿ(Basavaraj Bommai) ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಹಾಗೂ 1,500 ಕೋಟಿ ರೂಪಾಯಿ ತುಂತುರು ಹನಿ ನೀರಾವರಿ ಯೋಜನೆಯಲ್ಲಿ ಕೊಳ್ಳೆ ಹೊಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನನ್ನ ಟಿಕೆಟ್ ತಪ್ಪಲು ಸಿಎಂ ಬಸವರಾಜ್ ಬೊಮ್ಮಾಯಿ ಕಾರಣ. ವೈಯಕ್ತಿಕವಾಗಿ ದ್ವೇಷ ಸಾಧಿಸ್ಕೊಂತ ಬಂದಿದ್ದರು. ನನ್ನ ಬೆಳವಣಿಗೆಯನ್ನು ಸಹಿಸದೆ ಟಿಕೆಟ್ ತಪ್ಪಿಸಿದ್ದಾರೆ. ಟಿಕೆಟ್ ಕೊಟ್ಟಿರುವ ಅಭ್ಯರ್ಥಿ ಎಂದು ಕೂಡ ಸಾರ್ವಜನಿಕರ ಜೊತೆ ಬೆರತಿಲ್ಲ. ಎಂದೂ ಪಕ್ಷದ ಧ್ವಜ ಹಿಡಿದು ಕೆಲಸ ಮಾಡಿದವನಲ್ಲ. ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಅವರು ಆ ವ್ಯಕ್ತಿಯನ್ನ ಬಳಕೆ ಮಾಡಿಕೊಂಡಿದ್ದಾರೆ. ಜಿಲ್ಲಾದ್ಯಕ್ಷ ಸಿದ್ದರಾಜ್ ಮತ್ತು ಬೊಮ್ಮಾಯಿ ಇಬ್ರು ನೇರ ಕಾರಣ. ನಾನು ಬೆಳೆದೆ ಎಂದ್ರೆ ಅವರಿಗೆ ಜಿಲ್ಲೆಯಲ್ಲಿ ಸಮಸ್ಯೆ ಆಗಬಹುದೆಂದು ಟಿಕೆಟ್ ತಪ್ಪಿಸಿದ್ರು. ದಮ್ ತಾಕತ್ ಬಗ್ಗೆ ಮೊನ್ನೆ ಟಿವಿಯಲ್ಲಿ ಮಾತನಾಡಿದನ್ನ ನೋಡಿದ್ದೇನೆ. ಬೊಮ್ಮಾಯಿಗೆ ದಮ್ ತಾಕತ್ ಎಷ್ಟ್ ಇದೆ ಅನ್ನೊದನ್ನ ಈ ಬಾರಿ ತೋರಿಸಬೇಕು. ಈ ಬಾರಿ ನಾವು ಕೂಡ ನಮ್ಮ ದಮ್ ತಾಕತ್ ತೋರಿಸ್ತಿವಿ. ಅವನು (ಬೊಮ್ಮಾಯಿ) ಮಾಡಿದ ಕಳಪೆ ಕೆಲಸಗಳನ್ನ ಬಹಿರಂಗ ಮಾಡ್ತೆನಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Abhishek Ambareesh: ಮಂಡ್ಯದಲ್ಲಿ ಬಿಜೆಪಿ ಪರ ಅಬ್ಬರದ ಪ್ರಚಾರ ಮಾಡಲಿದ್ದಾರೆ ನಟ ಅಭಿಷೇಕ್ ಅಂಬರೀಷ್
ಸಿಎಂ ಬೊಮ್ಮಾಯಿ ಗುತ್ತಿಗೆದಾರನ ಜೊತೆ ಸೇರಿ ಸಂಪೂರ್ಣವಾಗಿ 1,500 ಕೋಟಿ ರೂಪಾಯಿ ತುಂತುರು ಹನಿ ನೀರಾವರಿ ಯೋಜನೆಯಲ್ಲಿ ಕೊಳ್ಳೆ ಹೊಡೆದಿದ್ದಾನೆ. ಒಂದೇ ವರ್ಷದಲ್ಲಿ ಹಾಳಾಗುವ ಮಟೆರಿಯಲ್ ಹಾಕಿ ಕೊಳ್ಳೆ ಹೊಡೆದಿದ್ದಾನೆ. ಶಿಗ್ಗಾಂವಿ ಕ್ಷೇತ್ರಕ್ಕೆ ಸಿಮಿತವಾಗಿ ಮಾಡಿದ ತುಂತುರ ಹನಿ ನೀರಾವರಿ ಯೋಜನೆ ಅದು. ನಮ್ಮ ಕ್ಷೇತ್ರದ ಅಭಿವೃದ್ದಿಗೆ ಸರಿಯಾಗಿ ಸ್ಪಂದಿಸಲಿಲ್ಲ. ಲೈಟ್ ಹಾಕಲು ದುಡ್ಡು ಕೊಡಲಿಲ್ಲ, ಡ್ರಾಮಾ ಸೆಂಟರ್ ಮಾಡಲು ದುಡ್ಡು ಕೊಡಲಿಲ್ಲ. ಆಯುಷ್ ಕಾಲೇಜ್ ಮಾಡಲು ಒಪ್ಪಿಗೆ ಕೊಡಲಿಲ್ಲ. ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಕಲ್ಲು ಹಾಕುವ ಕೆಲಸ ಮಾಡಿದ. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲೂ ಒಳ್ಳೆಯ ದೀಪಾಲಂಕರ ಮಾಡಲಾಗಿದೆ. ಆದ್ರೆ ನಮ್ಮ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಒಳ್ಳೆಯ ಬೀದಿ ದೀಪಗಳನ್ನು ಹಾಕಲು ಒಂದು ರೂಪಾಯಿ ಕೊಡಲಿಲ್ಲ. ಅವನಂತ ಕಳಪೆ ಮುಖ್ಯಮಂತ್ರಿ ಯಾರೂ ಇಲ್ಲ. ಅವನೊಬ್ಬ ಬರ್ಬಾದ ಮುಖ್ಯಮಂತ್ರಿ. ಮುಖ್ಯಮಂತ್ರಿ ಆಗಿ ಜಿಲ್ಲೆಯನ್ನು ನೋಡುವುದರ ಬದಲು ಕೇವಲ ಶಿಗ್ಗಾಂವಿ ನೋಡಿದ. ಶಿಗ್ಗಾಂವಿಯನ್ನೆ ಜಿಲ್ಲೆ ಅಂತಾ ಅಂದುಕೊಂಡಿದ್ದ. ನಾಳೆ ಬೆಂಬಲಿಗರ ಸಭೆ ಕರೆದಿದ್ದೆನೆ, ಸಭೆಯಲ್ಲಿ ಮುಂದಿನ ನಡೆ ತಿರ್ಮಾನಿಸುತ್ತೇನೆ ಎಂದು ನೆಹರು ಓಲೇಕಾರ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ