ಬೆಂಗಳೂರು: ನಗರದ ಶಾಸಕರ ಭವನದಲ್ಲಿ ಬಿಜೆಪಿ(BJP) ವಿಧಾನ ಪರಿಷತ್ ಸದಸ್ಯರು(MLC) ಸುದ್ದಿಗೋಷ್ಠಿ ನಡೆಸಿದ್ದು ಕಾಂಗ್ರೆಸ್ ನಾಯಕರಿಗೆ ಕೆಲವೊಂದು ವಿಚಾರಗಳನ್ನು ತಾಕೀತು ಮಾಡಿದ್ದಾರೆ. ಶಿಕ್ಷಣ ಸಚಿವರ ಮುಂದೆ ದೊಡ್ಡ ಸವಾಲಿದೆ. ಜವಾಬ್ದಾರಿಯಿಂದ ನಡೆದುಕೊಳ್ಳುವ ಅವಶ್ಯಕತೆ ಇದೆ. ಈಗಿನ ಶಿಕ್ಷಣ ಸಚಿವರು ಮತ್ತೊಬ್ಬ ಬಂಗಾರಪ್ಪ ಆಗಬೇಕು ಅನ್ನೋದು ನಮ್ಮ ಆಶಯ. ಬಜೆಟ್ ಮೊದಲು ವಿಧಾನಪರಿಷತ್‌ನ ಎಲ್ಲಾ ಪ್ರತಿನಿಧಿಗಳ ಸಭೆ ಕರೆಯಬೇಕು. ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಬೇಗ ಮುಗಿಸಬೇಕು. 7ನೇ ವೇತನ ಆಯೋಗದ ವರದಿ ತರಿಸಿಕೊಂಡು ಜಾರಿಗೆ ತರಬೇಕು ಎಂದು ಎಂಎಲ್ಸಿ ವೈ.ಎ. ನಾರಾಯಣಸ್ವಾಮಿ(Y.A. Narayanaswamy) ಅವರು ಸುದ್ದಿಗೋಷ್ಠಿ ಕಾಂಗ್ರೆಸ್ಗೆ ಸಲಹೆ ಕೊಟ್ಟಿದ್ದಾರೆ.
ಹೊಸ ಸರ್ಕಾರ ಬಂದ ಬಳಿಕ ಪಠ್ಯಪುಸ್ತಕ ಪರಿಷ್ಕರಣೆ ಬಹಳ ಸದ್ದು ಮಾಡ್ತಿದೆ. ಕೆಲವು ಸಾಹಿತಿಗಳು ಸಿಎಂ ಹಾಗೂ ಶಿಕ್ಷಣ ಸಚಿವರ ಹಿಂದೆ ಮುಂದೆ ತಿರುಗುತ್ತಿದ್ದಾರೆ. ಅವರ ಸಾಹಿತ್ಯ ತುರುಕುವ ಕೆಲಸ ಮಾಡಲಾಗುತ್ತಿದೆ. ಅದರ ಬಗ್ಗೆ ಎಚ್ಚರಿಕೆಯಿಂದ ಇರಿ. ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದವರಿಂದ ಸಲಹೆ ಪಡೆಯಿರಿ. ಕೆಲವರ ಮಾತು ಕಟ್ಟಿಕೊಂಡು ಈ ರೀತಿ ಹೆಜ್ಜೆ ಇಡಬೇಡಿ. ಇದು ನಿಮಗೆ ಸಂಕಷ್ಟ ತರಲಿದೆ. ಈಗಾಗಲೇ ಪಠ್ಯ ಶಾಲೆಗೆ ತಲುಪಿದೆ. ಒಳ್ಳೆಯ ಸಮಾಜ ನಿರ್ಮಾಣಕ್ಕೆ ಏನೆಲ್ಲಾ ಪಠ್ಯ ಕೊಡಬಹುದು ಅಂತ ನಿಮ್ಮ ಸಚಿವರ ಸಲಹೆ ಪಡೆಯಿರಿ. ಶಿಕ್ಷಣ ಇಲಾಖೆಯಲ್ಲಿ ಬಹಳಷ್ಟು ಹುದ್ದೆ ಖಾಲಿ ಇದೆ. ಹಿಂದಿನ ಸರ್ಕಾರ 15 ಸಾವಿರ ಹುದ್ದೆ ಭರ್ತಿ ಮಾಡಲು ತಯಾರಿ ಮಾಡಿತ್ತು. ತಾಂತ್ರಿಕ ಸಮಸ್ಯೆ ಇದ್ದ ಕಾರಣ ಸ್ಥಗಿತವಾಗಿತ್ತು. ಆರ್ಥಿಕ ಇಲಾಖೆಗೆ ಒಂದು ಧೋರಣೆ ಇದೆ. ಖಾಲಿ ಇರುವ ಹುದ್ದೆ ತುಂಬಲು ಹಿಂದೇಟು ಹಾಕುತ್ತಿದೆ. ಹುದ್ದೆ ಖಾಲಿ ಇಟ್ಟರೆ ಎಷ್ಟು ಹಣ ಉಳಿಸಬಹುದು ಅನ್ನೋದು ಅವರ ವಾದ. ಆದ್ರೆ ಗುಣಾತ್ಮಕ ಶಿಕ್ಷಣ ನೀಡುವ ಕೆಲಸ ಆಗಬೇಕಿದೆ ಎಂದು ಕಾಂಗ್ರೆಸ್ಗೆ ಬಿಜೆಪಿ ನಾಯಕರು ಕೆಲವು ಉಪದೇಶಗಳನ್ನು ನೀಡಿದ್ದಾರೆ.
ವೈ.ಎ. ನಾರಾಯಣ ಸ್ವಾಮಿ, ಶಶೀಲ್ ನಮೋಶಿ, ಅ.ದೇವೇಗೌಡ, ಚಿದಾನಂದ ಗೌಡ ಮತ್ತು ಮಾಜಿ ಎಂಎಲ್ಸಿ ಅರುಣ್ ಶಹಾಪುರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ