10 ದಿನಗಳ ವಿಧಾನಮಂಡಲ ಅಧಿವೇಶನಕ್ಕೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಕೆ. ಎಸ್​ ಈಶ್ವರಪ್ಪ ಗೈರು: ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ

| Updated By: ವಿವೇಕ ಬಿರಾದಾರ

Updated on: Sep 23, 2022 | 6:28 PM

10 ದಿನಗಳ ವಿಧಾನಮಂಡಲ ಅಧಿವೇಶನದಲ್ಲಿ ಶೇಕಡಾ 90ರಷ್ಟು ಹಾಜರಾತಿ ಇತ್ತು ಎಂದು ವಿಧಾನಸೌಧದಲ್ಲಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

10 ದಿನಗಳ ವಿಧಾನಮಂಡಲ ಅಧಿವೇಶನಕ್ಕೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಕೆ. ಎಸ್​ ಈಶ್ವರಪ್ಪ ಗೈರು: ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
Follow us on

ಬೆಂಗಳೂರು: 10 ದಿನಗಳ ವಿಧಾನಮಂಡಲ (Vidhan Mandal) ಅಧಿವೇಶನದಲ್ಲಿ ಶೇಕಡಾ 90ರಷ್ಟು ಹಾಜರಾತಿ ಇತ್ತು ಎಂದು ವಿಧಾನಸೌಧದಲ್ಲಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಹೇಳಿದ್ದಾರೆ. 10 ದಿನಗಳ ವಿಧಾನಮಂಡಲ ಅಧಿವೇಶನ ಮುಕ್ತಾಯಗೊಂಡಿದ್ದು ಈ ಬಗ್ಗೆ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಕೆ. ಎಸ್​ ಈಶ್ವರಪ್ಪ ಗೈರಾಗಿದ್ದು, ಅಧಿವೇಶನಕ್ಕೆ ಗೈರುಹಾಜರಾಗಿದ್ದ ಬಗ್ಗೆ ನನಗೆ ಮಾಹಿತಿ ನೀಡಿಲ್ಲ ಮತ್ತು ನನ್ನ ಅನುಮತಿ ಪಡೆದಿಲ್ಲ.

ವಿಧಾನಸಭೆಯಲ್ಲಿ 16 ವಿಧೇಯಗಳ ಮಂಡನೆಯಾಗಿ ಅಂಗೀಕಾರವಾಗಿವೆ. ವಿಧಾನಪರಿಷತ್​ನಲ್ಲಿ 14 ವಿಧೇಯಕ ಮಂಡನೆಯಾಗಿ, ಅಂಗೀಕಾರಗೊಂಡಿವೆ. ಇನ್ನೂ 2 ವಿಧೇಯಕಗಳ ಬಗ್ಗೆ ಚರ್ಚೆ ಆಗಬೇಕಿದೆ. ಒಂದು ವಿಧೇಯಕವನ್ನು ವಾಪಸ್ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ನಿಯಮ 60ರಲ್ಲಿ ಸೂಚಿಸಿದ್ದ ವಿಷಯಗಳನ್ನು 69ರಡಿ ಚರ್ಚೆ ಮಾಡಲಾಗಿದೆ. 150 ಪ್ರಶ್ನೆಗಳಿಗೆ ಲಿಖಿತ ಮೂಲಕ ಉತ್ತರ ಕೊಡಲಾಗಿದೆ. ಗಮನ ಸೆಳೆಯುವ ಸೂಚನೆಯಡಿ 857 ಪ್ರಶ್ನೆಗಳು ಬಂದಿದ್ದು, 177 ಪ್ರಶ್ನೆಗಳಿಗೆ ಉತ್ತರ ಕೊಡಲಾಗಿದೆ. ಅತ್ಯುತ್ತಮ ಶಾಸಕ ಆಯ್ಕೆಗೆ ಸಮಿತಿ ಸಭೆ ಮಾಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕರು, ಕಾನೂನು ಸಚಿವರು ಸಭೆ ಮಾಡಿದ್ದಾರೆ ಎಂದು ತಿಳಿಸಿದರು.

ಅತ್ಯುತ್ತಮ ಶಾಸಕ ಎಂದು ಹಲವು ಶಾಸಕರ ಹೆಸರು ಬಂದಿದ್ದು, ಆಯ್ಕೆಯಾದವರಿಗೆ ಬೆಳಗಾವಿ ಅಧಿವೇಶನದಲ್ಲಿ ಸನ್ಮಾನ ಮಾಡಲಾಗುತ್ತದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಸಂಪುಟಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಾರಿ ಅಧಿವೇಶನದಲ್ಲಿ ಅತಿವೃಷ್ಟಿಗೆ ಕುರಿತು ಚರ್ಚಿಸಲಾದ ವಿಷಯ ಫಲಪ್ರದವಾಗಿದೆ. 36 ಸದಸ್ಯರು ಈ ಚರ್ಚೆಯಲ್ಲಿ ನೇರವಾಗಿ ಭಾಗಿಯಾಗಿದ್ದರು. ಒಟ್ಟು 12 ಗಂಟೆ 44 ನಿಮಿಷ ಅತಿವೃಷ್ಟಿ ಮೇಲೆ ಚರ್ಚೆ ನಡೆದಿದೆ ಎಂದರು.

ಯಾವುದೇ ಸಚಿವರು, ಶಾಸಕರು ಅಧಿವೇಶನದ ವೇಳೆ ಗೈರಾದರೆ ಮಾಹಿತಿ ನೀಡುವುದು ಸಂಪ್ರದಾಯ, ಇನ್ನು ಮುಂದೆ ಕೂಡಾ ಆ ಸಂಪ್ರದಾಯವನ್ನು ಮುಂದುವರಿಸಲಾಗುತ್ತದೆ. ನಾನು‌ ಸ್ಪೀಕರ್ ಆಗಿ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಮತ್ತು ಮಾಡುತ್ತೇನೆ. ಮಂತ್ರಿಮಂಡಲ ಪುನಾರಚನೆಯಂತಹ ಯಾವುದೂ ಈಗ ನನ್ನ ಪರಿಮಿತಿಯಲ್ಲಿ ಇಲ್ಲ. ಅಂತಹ ಸಂದರ್ಭಗಳು ಬಂದಾಗಲಷ್ಟೇ ಚರ್ಚಿಸಬಹುದು. ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ