ಬೆಂಗಳೂರು, ಜುಲೈ 24: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ಕಂಡಕ್ಟರ್ ಮತ್ತು ಉತ್ತರ ಭಾರತೀಯ ವಲಸಿಗ ಎಂದು ಹೇಳಲಾಗುತ್ತಿರುವವನ ನಡುವೆ ನಡೆದ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದೆ. ಟಿಕೆಟ್ ಶುಲ್ಕ ನೀಡದೇ ಪ್ರಯಾಣಿಕ ಕಂಡಕ್ಟರ್ ಜೊತೆ ಅಸಭ್ಯವಾಗಿ ಮಾತನಾಡಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ.
ರಾಮಯ್ಯ ಆಸ್ಪತ್ರೆ ಬಳಿ ಬಸ್ ಹತ್ತಿದ ಯುವಕ ಯಶವಂತಪುರಕ್ಕೆ ಹೋಗಲು ಟಿಕೆಟ್ ಕೇಳಿದ. ಆಗ ಬಸ್ ಕಂಡಕ್ಟರ್ ಮತ್ತಿಕೆರೆಗೆ ಟಿಕೆಟ್ ನೀಡಿದ್ರು. ಈ ವೇಳೆ ಮಹಿಳೆಯರಿಗೆ ಚಾರ್ಜ್ ಇಲ್ಲ, ನಮಗ್ಯಾಕೆ ಎಂದು ಯುವಕ ಕ್ಯಾತೆ ತೆಗೆದಿದ್ದಾನೆ. ಆಗ ಕಂಡಕ್ಟರ್ ಟಿಕೆಟ್ ಗೆ ಹಣ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕಂಡಕ್ಟರ್ ಮತ್ತು ಯುವಕ ಕೈ ಕೈ ಮಿಲಾಯಿಸಿದ್ದಾರೆ. ಇಬ್ಬರು ಮಹಿಳೆಯರು ತಡೆಯಲು ಯತ್ನಿಸಿದ್ದಾರೆ. ಆದರೂ ಇಬ್ಬರ ನಡುವೆ ಹೊಡೆದಾಟ ಮುಂದುವರಿಯುತ್ತದೆ. ಜಗಳ ತಾರಕಕ್ಕೇರುತ್ತಿದ್ದಂತೆ ಮಧ್ಯಪ್ರವೇಶಿಸಿದ ಚಾಲಕ, ಪ್ರಯಾಣಿಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶುಲ್ಕ ಪಾವತಿಸುವಂತೆ ಹೇಳಿದ್ದಾರೆ.
ಇದನ್ನೂ ಓದಿ: Video Viral: 210 ಕೆಜಿ ಭಾರ ಎತ್ತುವ ಸಾಹಸ ಮಾಡಿ ಕುತ್ತಿಗೆ ಮುರಿತಕ್ಕೊಳಗಾಗಿ ಸಾವನ್ನಪ್ಪಿದ ಜಿಮ್ ಟ್ರೈನರ್
ಬಸ್ ಚಾಲಕ ಮತ್ತು ಕಂಡಕ್ಟರ್ ‘ಇವನನ್ನು ಠಾಣೆಗೆ ಕರೆದುಕೊಂಡು ಹೋಗೋಣ’ ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸಬಹುದು. ಇದರ ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಗಮನಿಸಿದ ನಗರ ಪೊಲೀಸರು, ರೀಟ್ವೀಟ್ ಮಾಡಿ, ನಿಖರವಾದ ಪ್ರದೇಶದ ಸ್ಥಳವನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ. ಅದಾಗ್ಯೂ, ಈ ಘಟನೆ ಯಾವಾಗ ನಡೆದಿದ್ದು ಎಂಬುದರ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Mon, 24 July 23