ಅಮೆರಿಕದಲ್ಲಿನ ಕಾರಿಗೆ ಬಿಎಂಟಿಸಿ ಬಸ್ ನಂಬರ್ ಪ್ಲೇಟ್, ನಿವೃತ್ತ ಬಿಎಂಟಿಸಿ ಚಾಲಕನಿಗೆ ವಿಶೇಷ ಗೌರವ
ನಿವೃತ್ತರಾಗಿರುವ ಬಿಎಂಟಿಸಿ ಬಸ್ ಚಾಲಕನ ಪ್ರಾಮಾಣಿಕ ಸೇವೆಯನ್ನು ಮೆಚ್ಚಿದ ಅಮೆರಿಕದಲ್ಲಿರುವ ಭಾರತದ ವ್ಯಕ್ತಿಯೊಬ್ಬರು ತನ್ನ ಕಾರಿಗೆ ಆ ಚಾಲಕ ಚಾಲನೆ ಮಾಡುತ್ತಿದ್ದ ಬಸ್ ನಂಬರ್ ಅನ್ನು ತನ್ನ ಕಾರಿನ ನಂಬರ್ ಪ್ಲೇಟ್ಗೆ ಹಾಕುವ ಮೂಲಕ ಗೌರವ ಸಲ್ಲಿಸಿದ್ದಾರೆ. ಅಷ್ಟಕ್ಕೂ ಅಮೆರಿಕದಲ್ಲಿರುವ ವ್ಯಕ್ತಿ ಯಾರು? ಚಾಲಕರಾಗಿದ್ದ ಧನಪಾಲ್ ಅವರ ಪರಿಚಯ ಹೇಗೆ? ಇಲ್ಲಿದೆ ಮಾಹಿತಿ.
ಬೆಂಗಳೂರು: ಸರ್ಕಾರದ ಕೆಲಸ ದೇವರ ಕೆಲಸ ಎಂದು ನಂಬಿಕೊಂಡು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವವರನ್ನು ಕಾಣಬಹುದು. ಅಂತಹವರಲ್ಲಿ ಬಿಎಂಟಿಸಿ (BMTC) ಬಸ್ ಚಾಲಕ ಧನಪಾಲ್ ಮಂಚೇನಹಳ್ಳಿ ಒಬ್ಬರು. ಸದ್ಯ ಇವರು ನಿವೃತ್ತರಾಗಿದ್ದಾರೆ. ಇವರ ಪ್ರಾಮಾಣಿಕ ಸೇವೆಯನ್ನು ಮೆಚ್ಚಿದ ಅಮೆರಿಕದಲ್ಲಿರುವ ಭಾರತದ ವ್ಯಕ್ತಿಯೊಬ್ಬರು ತನ್ನ ಕಾರಿಗೆ ಧನಪಾಲ್ ಚಾಲಕರಾಗಿದ್ದ ಬಸ್ನ ನಂಬರ್ ಪ್ಲೇಟ್ ಅನ್ನು ಅಳವಡಿಸಿ ಗೌರವ ಸಲ್ಲಿಸಿದ್ದಾರೆ. ಅಷ್ಟಕ್ಕೂ ಅಮೆರಿಕದಲ್ಲಿರುವ ವ್ಯಕ್ತಿ ಯಾರು? ಚಾಲಕರಾಗಿದ್ದ ಧನಪಾಲ್ ಅವರ ಪರಿಚಯ ಹೇಗೆ? ಇಲ್ಲಿದೆ ಮಾಹಿತಿ.
1996 ರಲ್ಲಿ ಧನಪಾಲ್ ಅವರು ಬಿಎಂಟಿಸಿ ಬಸ್ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದಾಗ ಅನೇಕ ಶಾಲಾ ಮಕ್ಕಳು ಆ ಬಸ್ನಲ್ಲಿ ಹೋಗುತ್ತಿದ್ದರು. ಈ ಪೈಕಿ ಚೆಂಗಪ್ಪ ಎಂಬ ವಿದ್ಯಾರ್ಥಿಯೂ ಒಬ್ಬ. ಸಾಮಾನ್ಯವಾಗಿ ಬಸ್ ಹತ್ತಿದ ನಂತರ ಮಕ್ಕಳ ಕಿರಿಕಿರಿ ಕೇಳತೀರದು. ಅದಾಗ್ಯೂ, ಧನಪಾಲ್ ಅವರು ಎಂದಿಗೂ ಮಕ್ಕಳ ಮೇಲೆ ಕೋಪಗೊಂಡಿಲ್ಲ. ಇದನ್ನು ಗಮನಿಸುತ್ತಲೇ ಬೆಳೆದಿದ್ದ ಚೆಂಗಪ್ಪ, ಇಂದು ವೃತ್ತಿ ಮೇಲೆ ಅಮೆರಿಕಾದಲ್ಲಿ ನೆಲೆಸಿದ್ದಾರೆ.
ಇತ್ತ, ಧನಪಾಲ್ ಅವರು ಸೇವೆಯಿಂದ ನಿವೃತ್ತರಾಗುತ್ತಿರುವ ಮಾಹಿತಿ ತಿಳಿದ ಚೆಂಗಪ್ಪ ಅವರು, ಧನಪಾಲ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅವರಿದ್ದ ಬಸ್ನ ನಂಬರ್ ಅನ್ನು ಕಾರಿಗೆ ಹಾಕಿದ್ದಾರೆ. ಇದರ ವಿಡಿಯೋ ಮಾಡಿ ಧನಪಾಲ್ ಅವರಿಗೆ ನಿವೃತ್ತ ಜೀವನಕ್ಕೆ ಶುಭ ಕೋರಿದ್ದಾರೆ.
Very Heart Touching….???? In Karnataka few days back BMTC bus driver Shri Dhanapal Manchenahalli got retired as a BMTC Driver. Now whats special about that…? Listen to this story…. pic.twitter.com/LTE3kf7Ra6
— Adarsh Hegde (@adarshahgd) May 11, 2023
ಇದನ್ನೂ ಓದಿ: ಬೆಂಗಳೂರು: ಗ್ರಾಹಕರ ಜೊತೆ ಕಾಫಿ ಸವಿದು, ಬಿಎಂಟಿಸಿ ಬಸ್ನಲ್ಲಿ ಸಂಚರಿಸಿದ ರಾಹುಲ್ ಗಾಂಧಿ
ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡ ಆದರ್ಶ್ ಹೆಗ್ಡೆ ಅವರು ಚೆಂಗಪ್ಪ ಅವರ ಪ್ರಾಮಾಣಿಕತೆಯನ್ನು ಮೆಚ್ಚಿದ್ದಾರೆ. ಚೆಂಗಪ್ಪ ಅವರು ವಿಡಿಯೋದಲ್ಲಿ ಹೇಳಿರುವಂತೆ, “ಧನಪಾಲ್ ಅವರಿಗೆ ನಿವೃತ್ತಿ ಜೀವನದ ಶುಭಾಶಯಗಳು. 1992ರಲ್ಲಿ ಬೆಂಗಳೂರಿನ 401ಬಿ ಮಾರ್ಗದಲ್ಲಿ ನಾನು ನಿಮ್ಮನ್ನು ಮೊದಲು ಭೇಟಿಯಾಗಿದ್ದೆ. ಇಂದಿಗೆ 31 ವರ್ಷವಾಯಿತು ಎಂದರೆ ನಂಬಲಾಗುತ್ತಿಲ್ಲ” ಎಂದು ತಮ್ಮ ಟೆಸ್ಲಾ ಕಾರಿನ ಪಕ್ಕದಲ್ಲಿ ನಿಂತು ಚೆನ್ನಗಪ್ಪ ಹೇಳಿದ್ದಾರೆ.
“ನಾನು ನಿಮ್ಮೊಂದಿಗೆ ಹಲವಾರು ಬಾರಿ ಪ್ರಯಾಣಿಸಿದ್ದೇನೆ. ನಾನು ಶಾಲೆಯಲ್ಲಿದ್ದಾಗ ವಿದ್ಯಾರಣ್ಯಪುರದಿಂದ ಯಶವತಪುರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ನಿಮ್ಮ ಪ್ರಾಮಾಣಿಕತೆ ಮತ್ತು ಸಮರ್ಪಣೆಗೆ ನನ್ನ ಗೌರವವಿದೆ. ಮುಂದಿನ ಪೀಳಿಗೆಯು ನಿಮಗೆ ಕೃತಜ್ಞರಾಗಿರಬೇಕು. ನೀವು ನನ್ನ ಕಾರಿನ ನಂಬರ್ ಪ್ಲೇಟ್ ಗಮನಿಸಬಹುದು. ಇದು ನಿಮ್ಮ ಮೇಲಿನ ನನ್ನ ಗೌರವ ಮತ್ತು BMTC ಮೇಲಿನ ನನ್ನ ಪ್ರೀತಿಯಿಂದಾಗಿ ಆ ಬಸ್ನ ನಂಬರ್ ಹಾಕಿದ್ದೇನೆ. ಧನ್ಯವಾದಗಳು ಮತ್ತು ನಿಮ್ಮ ಸಂತೋಷದ ನಿವೃತ್ತ ಜೀವನಕ್ಕೆ ಹಾರೈಸುತ್ತೇನೆ” ಎಂದು ಚೆಂಗಪ್ಪ ಹೇಳಿದ್ದಾರೆ.
“ಇದೊಂದು ಸುಂದರ ಕಥೆಯಲ್ಲವೇ. ಮಾನವ ಸಂಬಂಧಗಳು ಈ ಮಾನವ ಜಗತ್ತಿನಲ್ಲಿ ಅಂತಿಮವಾಗಿ ಮುಖ್ಯವಾಗುತ್ತವೆ. ಈ ಘಟನೆಯನ್ನು ಧನಪಾಲ್ ಅವರೇ ಹಂಚಿಕೊಂಡಿದ್ದಾರೆ. ಅವರು ಈಗಲೂ ಪರಸ್ಪರ ಸಂಪರ್ಕದಲ್ಲಿದ್ದಾರೆ” ಎಂದು ಹೆಗ್ಡೆ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:17 pm, Thu, 11 May 23