ಆಯುಧ ಪೂಜೆಗೂ ದುಡ್ಡಿಲ್ಲದೆ ದಿವಾಳಿಯಾಯಿತಾ ಬಿಎಂಟಿಸಿ?; ಒಂದು ಬಸ್​ಗೆ ಕೇವಲ 100 ರೂ. ಬಿಡುಗಡೆ

| Updated By: ಸುಷ್ಮಾ ಚಕ್ರೆ

Updated on: Sep 23, 2022 | 12:54 PM

ಬಿಎಂಟಿಸಿ ಆಡಳಿತ ಮಂಡಳಿಯ ಜಿಪುಣತನಕ್ಕೆ ಸಿಬ್ಬಂದಿ ಅಸಮಾಧಾನಗೊಂಡಿದ್ದಾರೆ. ಬಸ್​ಗಳನ್ನು ಚೆನ್ನಾಗಿ ಅಲಂಕಾರ ಮಾಡುವ ಸಿಬ್ಬಂದಿಯ ಆಸೆಗೆ ಬಿಎಂಟಿಸಿ ಆಡಳಿತ ಮಂಡಳಿ ಅಕ್ಷರಶಃ ತಣ್ಣೀರೆರಚಿದೆ.

ಆಯುಧ ಪೂಜೆಗೂ ದುಡ್ಡಿಲ್ಲದೆ ದಿವಾಳಿಯಾಯಿತಾ ಬಿಎಂಟಿಸಿ?; ಒಂದು ಬಸ್​ಗೆ ಕೇವಲ 100 ರೂ. ಬಿಡುಗಡೆ
ಬಿಎಂಟಿಸಿ ಬಸ್​ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಪೂಜೆಗೆ ತಲಾ ಒಂದು ಬಸ್​ಗೆ ಬಿಎಂಟಿಸಿ (BMTC) ಅಕ್ಟೋಬರ್ 4ರಂದು ಆಯುಧ ಪೂಜೆ (Ayudha Pooja) ಮಾಡಲು 100 ರೂ. ಬಿಡುಗಡೆ ಮಾಡಿದೆ. ಜೀಪು, ಕಾರ್​ಗೆ ಕೇವಲ 40 ರೂ. ಖರ್ಚು ಮಾಡಲು ಸೂಚಿಸಲಾಗಿದೆ. ಹಬ್ಬದ ದಿನ ಸ್ವಚ್ಛತೆ, ಅಲಂಕಾರಕ್ಕೆ ಬಿಎಂಟಿಸಿ ಕೇವಲ ಪುಡಿಗಾಸು ಬಿಡುಗಡೆ ಮಾಡಿದೆ. ಬಸ್​ಗೆ ಕೇವಲ 100 ರೂ. ಬಿಡುಗಡೆ ಮಾಡಿ ಕೈ ತೊಳೆದುಕೊಂಡ ನಿಗಮದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಈ ವರ್ಷವೂ ಆಯುಧ ಪೂಜೆಯ ಖರ್ಚು ವೆಚ್ಚಕ್ಕೆ ನಗಣ್ಯ ಎನಿಸುವಷ್ಟು ಹಣ ಬಿಡುಗಡೆ ಮಾಡಲಾಗಿದೆ.

ಬಿಎಂಟಿಸಿ ಆಡಳಿತ ಮಂಡಳಿಯ ಜಿಪುಣತನಕ್ಕೆ ಸಿಬ್ಬಂದಿ ಅಸಮಾಧಾನಗೊಂಡಿದ್ದಾರೆ. ಬಸ್​ಗಳನ್ನು ಚೆನ್ನಾಗಿ ಅಲಂಕಾರ ಮಾಡುವ ಸಿಬ್ಬಂದಿಯ ಆಸೆಗೆ ಬಿಎಂಟಿಸಿ ಆಡಳಿತ ಮಂಡಳಿ ಅಕ್ಷರಶಃ ತಣ್ಣೀರೆರಚಿದೆ. ಬಿಡುಗಡೆ ಮಾಡಿರುವ 100 ರೂ.ಗಳಲ್ಲಿ ಒಂದು ಬಸ್​ಗೆ ಪೂಜೆ ಮಾಡೋಕೆ ಆಗುತ್ತಾ‌‌? ಬಿಎಂಟಿಸಿ ಕೊಟ್ಟ ಹಣದಲ್ಲಿ 10 ನಿಂಬೆಹಣ್ಣು ಕೂಡ ಬರೋದಿಲ್ಲ ಅಂತ ನೌಕರರು ಸಿಟ್ಟು ಮಾಡಿಕೊಂಡಿದ್ದಾರೆ. ಹಬ್ಬದ ದಿನ ಪೂಜೆ ನೆರವೇರಿಸಲು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. 100 ರೂ.ಗೆ ಬಸ್‌ಗಳನ್ನು ಸಿಂಗರಿಸಿ ಪೂಜೆ ಮಾಡಲು ಅಸಾಧ್ಯ ಎಂದು ಸಿಬ್ಬಂದಿ ಅಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ: Kerala: ಎನ್​​ಐಎ ದಾಳಿ ಖಂಡಿಸಿ ಕೇರಳದಲ್ಲಿ ಪಿಎಫ್​ಐ ಪ್ರತಿಭಟನೆ, ಬಸ್​​ ಮೇಲೆ ಕಲ್ಲು ತೂರಾಟ ನಡೆಸಿದ ಕಾರ್ಯಕರ್ತರು

ಯಾದಗಿರಿಯಲ್ಲಿ ಕೆಎಸ್​ಆರ್​ಟಿಸಿಯಿಂದ ಹರಕಲು ಬಸ್​ ಸಂಚಾರ:

ಯಾದಗಿರಿ ಜಿಲ್ಲೆಯಲ್ಲಿ ಹರಕಲು ಮುರಕಲು ಕೆಎಸ್​ಆರ್​ಟಿಸಿ ಬಸ್​ಗಳು ಸಂಚಾರ ಮಾಡುತ್ತಿವೆ. ಹಿಂದುಳಿದ ಜಿಲ್ಲೆಯಲ್ಲಿ ಇಂತಹ ಬಸ್​ಗಳದ್ದೇ ಸಂಚಾರ ಹೆಚ್ಚಾಗಿವೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಸರ್ಕಾರಿ ಬಸ್ ಯಾದಗಿರಿಯ ಗುರುಮಠಕಲ್​ನಿಂದ ತೆಲಂಗಾಣದ ನಾರಾಯಣಪೇಟಗೆ ಹೋಗುವ ಬಸ್​​ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಈ ಬಸ್​ನ ಬಹುತೇಕ ಸೀಟುಗಳು ಹರಿದು ಹೋಗಿವೆ. ಬಸ್​ನ ಸೀಟುಗಳು ಕುಸಿದು ಬೀಳುವ ಹಂತಕ್ಕೆ ಬಂದಿವೆ. ಇಂತಹ ಕೆಟ್ಟ ಸ್ಥಿತಿಯಲ್ಲಿರುವ ಬಸ್​ನಲ್ಲೇ ಪ್ರಯಾಣಿಕರು ಪ್ರಯಾಣ ಮಾಡಬೇಕು. ಜೀವ ಅಂಗೈಯಲ್ಲಿ ಹಿಡಿದುಕೊಂಡು ಬಸ್ ನಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಿದೆ. ಇಂತಹ ಹರಕಲು ಮುರಕಲು ಬಸ್​ಗಳಿಂದ ಸಾರಿಗೆ ಇಲಾಖೆ‌ಯ ಮಾನ ತೆಲಂಗಾಣದಲ್ಲಿ‌ ಹರಾಜು ಆಗುತ್ತಿದೆ. ನಿತ್ಯ ಗುರುಮಠಕಲ್​ನಿಂದ 2-3 ಟ್ರಿಪ್ ಬಸ್​ ನಾರಾಯಣಪೇಟಗೆ ಹೋಗುತ್ತದೆ.

ಇದನ್ನೂ ಓದಿ: Viral Video: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಅಣ್ಣವ್ರ ಹಾಡು ಹಾಡಿದ ಕಂಡಕ್ಟರ್; ಗಾಯನಕ್ಕೆ ಮನಸೋತ ಪ್ರಯಾಣಿಕರು

ಮಂಡ್ಯದಲ್ಲಿ ಕೆಎಸ್​ಆರ್​​ಟಿಸಿ ಚಾಲಕ, ಕಂಡಕ್ಟರ್ ದರ್ಪ:
ಮಂಡ್ಯದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ನಿರ್ವಾಹಕರಿಗೆ ದರ್ಪ ಎದುರಾಗಿದೆ. ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಚಾಲಕನ ಎಡವಟ್ಟಿಗೆ ಚಿಕ್ಕಮಗಳೂರು ವಿದ್ಯಾರ್ಥಿನಿ ರಕ್ಷಿತಾ ಜೀವ ಬಲಿಯಾಗಿತ್ತು. ದಿನ ನಿತ್ಯ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಬಸ್ ಚಾಲಕರು ಬಸ್ ಹತ್ತುತ್ತಿದ್ದರೂ ಬಸ್ ಚಲಾಯಿಸುತ್ತಿದ್ದಾರೆ. ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ಬಳಿ ಘಟನೆ ನಡೆದಿದೆ. ಬಸ್ ಡೋರ್‌ನಲ್ಲಿ ವಿದ್ಯಾರ್ಥಿಗಳು ನೇತಾಡುತ್ತಿರುತ್ತಾರೆ. ಸ್ವಲ್ಪ ಕಾಲು ಜಾರಿದರೂ ವಿದ್ಯಾರ್ಥಿಗಳ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

Published On - 12:54 pm, Fri, 23 September 22